ಸಹಪಾಠಿ ಸಾವಿನಿಂದ ಕಂಗೆಟ್ಟು ಹಾಸ್ಟೆಲ್ ಖಾಲಿ ಮಾಡಿದ ವಿದ್ಯಾರ್ಥಿನಿಯರು
ಹಾಸನ, ಜೂನ್.25 : ಹತ್ತನೇ ತರಗತಿಯಲ್ಲಿ ಓದುತ್ತಿದ್ದ ತಮ್ಮ ಸಹಪಾಠಿ ಹಾಸ್ಟೆಲ್ ಆವರಣದಲ್ಲೇ ಆತ್ಮಹತ್ಯೆ ಮಾಡಿಕೊಂಡ ಘಟನೆಯಿಂದ ಕಂಗಾಲಾಗಿರುವ ನಗರದ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿನಿಯರು ಹಾಸ್ಟೆಲ್ ಖಾಲಿ ಮಾಡಿ ತಮ್ಮ ಊರು ಸೇರಿಕೊಂಡಿದ್ದಾರೆ.
ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಪ್ರಕಾರ "ಈ ಎಲ್ಲಾ 64 ವಿದ್ಯಾರ್ಥಿನಿಯರ ಹೆತ್ತವರು ಬಂದು ಎರಡು ದಿನಗಳ ಮಟ್ಟಿಗೆ ಮಕ್ಕಳನ್ನು ಮನೆಗೆ ಕಳುಹಿಸುವಂತೆ ಕೋರಿದ್ದಾರೆ. ಅವರೆಲ್ಲಾ ಒಂದೆರಡು ದಿನಗಳಲ್ಲಿ ವಾಪಾಸ್ ಬರುತ್ತಾರೆ" ಎಂದು ತಿಳಿಸಿದ್ದಾರೆ.
"ನಾವು ಪಕ್ಕದ ಹಾಸ್ಟೆಲ್ ನಲ್ಲಿ ಈ ಮಕ್ಕಳಿಗೆ ವಸತಿ ಕಲ್ಪಿಸಲು ಸಿದ್ದರಾಗಿದ್ದೆವು. ಆದರೆ ಪೋಷಕರು ಎರಡು ದಿನಗಳ ಮಟ್ಟಿಗೆ ಕಳುಹಿಸಿಕೊಡಿ ಎಂಬ ಕೋರಿಕೆ ಮುಂದಿಟ್ಟಿದ್ದರಿಂದ ಎಲ್ಲರನ್ನೂ ಕಳುಹಿಸಿದ್ದೇವೆ," ಎಂದು ಅವರು ತಿಳಿಸಿದ್ದಾರೆ.

ಶನಿವಾರ ಈ ಹಾಸ್ಟೆಲ್ ನ ವಿದ್ಯಾರ್ಥಿನಿಯೊಬ್ಬಳು ಹಾಸ್ಟೆಲ್ ನ ನಿರುಪಯೋಗಿ ಕೋಣೆಯೊಂದರಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ವಿದ್ಯಾರ್ಥಿನಿ ಜೂನ್ 19ರಿಂದ ಕಾಣೆಯಾಗಿದ್ದಳು ಎಂದು ಹಾಸ್ಟೆಲ್ ವಾರ್ಡನ್ ಸರೋಜ ಆರ್ ಪೊಲೀಸರಿಗೆ ದೂರು ನೀಡಿದ್ದರು.
ಘಟನೆ ಹಿನ್ನೆಲೆಯಲ್ಲಿ ಸರೋಜಾ ಆರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶ್ರೀಧರ್ ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ಆರಂಭಿಸಿದೆ ಎಂದು ಶ್ರೀಧರ್ ಅವರು ಸ್ಪಷ್ಟಪಡಿಸಿದ್ದಾರೆ.











Click it and Unblock the Notifications