Hassan: ಗುಡಿಸಲಿನಲ್ಲಿ ಮಲಗಿಸಿದ್ದಹೆಣ್ಣು ಮಗು ಕದ್ದೊಯ್ದ ಕಿಡಿಗೇಡಿಗಳು
ಹಾಸನ, ಮಾರ್ಚ್ 28: ಗುಡಿಸಲಿನಲ್ಲಿ ಮಲಗಿದ್ದ ಹೆಣ್ಣು ಮಗುವನ್ನು ಕಿಡಿಗೇಡಿಗಳು ಕಳ್ಳತನ ಮಾಡಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ. ಸಂಜು ಮತ್ತು ರೋಹಿತ್ ದಂಪತಿ ಪುತ್ರಿ ನಾಪತ್ತೆಯಾಗಿರುವ ಮಗುವಾಗಿದೆ.
ಮಧ್ಯಪ್ರದೇಶ ರಾಜ್ಯದ ಸತ್ಮ ಜಿಲ್ಲೆಯ ವೀರ್‌ಸಿಂಗ್‌ಪುರ್ ತಾಲೂಕಿನ ಸಂಜು ಮತ್ತು ರೋಹಿತ್ ದಂಪತಿ ಕಳೆದ ಮೂರು ತಿಂಗಳ ಹಿಂದೆ ಮಳಲಿ ಗ್ರಾಮದ ಇಟ್ಟಿಗೆ ಕೆಲಸಕ್ಕಾಗಿ ಬಂದಿದ್ದರು. ನಾಲ್ಕು ವರ್ಷದ ಮಗ ಹಾಗೂ ಹದಿನಾಲ್ಕು ತಿಂಗಳ ಹೆಣ್ಣು ಮಗುವನ್ನು ಕರೆದುಕೊಂಡೇ ಕೆಲಸಕ್ಕೆ ತೆರಳುತ್ತಿದ್ದರು. ನಿನ್ನೆ ಕೆಲಸ ಮುಗಿಸಿ ಬಂದು ಮನೆಯಲ್ಲಿ ಪುಟ್ಟ ಕಂದಮ್ಮಗಳನ್ನು ಮಲಗಿಸಿ ಸ್ನಾನ ಮಾಡಲೆಂದು ನದಿಗೆ ತೆರಳಿದ್ದರು.

ಮಕ್ಕಳನ್ನು ಗುಡಿಸಿಲಿನಲ್ಲೇ ಬಿಟ್ಟು ಬಂದ ಕಾರಣ ದಂಪತಿ ಇಪ್ಪತ್ತು ನಿಮಿಷದೊಳಗೆ ಸ್ನಾನ ಮಾಡಿ ಮನೆಗೆ ಬೇಗನೇ ವಾಪಸ್ ಆಗಿದ್ದಾರೆ. ಈ ವೇಳೆ ಮನೆಯಲ್ಲಿ ನಾಲ್ಕು ವರ್ಷದ ಗಂಡು ಮಗು ಮಾತ್ರ ಇದ್ದು, ಕೀರ್ತಿ ಎಂಬ ಹೆಸರಿನ ಹದಿನಾಲ್ಕು ತಿಂಗಳ ಹೆಣ್ಣು ಮಗು ನಾಪತ್ತೆಯಾಗಿದೆ. ಪೋಷಕರು ಮೊದಲು ಸುತ್ತಮುತ್ತಲಿನ ಪ್ರದೇಶದಲ್ಲಿ ಹುಡುಕಿ ಮಗು ಸಿಗದೇ ಇದ್ದಾಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.
ಸಕಲೇಶಪುರ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳೆದು ಹೋಗಿರುವ ಹೆಣ್ಣು ಮಗು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸ್ಕೂಟಿ-ಕಾರಿನ ನಡುವೆ ಭೀಕರ ಅಪಘಾತ, ಸ್ಥಳದಲ್ಲೇ ದಂಪತಿ ಸಾವು
ಸ್ಕೂಟಿ ಹಾಗೂ ಕಾರಿನ ನಡುವೆ ನಡೆದ ಭೀಕರ ಅಪಘಾತದಲ್ಲಿ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರುಜಿಲ್ಲೆಯ ಅಜ್ಜಂಪುರ ತಾಲೂಕಿನ ಹಿರೇಕಾನವಂಗಲ ಗ್ರಾಮದಲ್ಲಿ ನಡೆದಿದೆ. ಅರ್ಜುನ್ ಹಾಗೂ ಶ್ವೇತಾ ಮೃತ ದಂಪತಿ ಎಂದು ಗುರುತಿಸಲಾಗಿದೆ. ಅರ್ಜುನ್ ಹಾಗೂ ಶ್ವೇತಾ ಸ್ಕೂಟಿಯಲ್ಲಿ ಮನೆಗೆ ತೆರಳುವ ವೇಳೆ ಅಪಘಾತ ನಡೆದಿದ್ದು, ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಘಟನಾ ಸ್ಥಳಕ್ಕೆ ಅಜ್ಜಂಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications