ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಆರೋಪಿಗಳ ಕೈಗೆ ಕೋಳ
ಹಾಸನ ಜನವರಿ 31: ಆಗಸ್ಟ್ 9ರಂದು ನಡೆದಿದ್ದ ಮಾಜಿ ಸಚಿವ ರೇವಣ್ಣ ಆಪ್ತ ಕೃಷ್ಣೇಗೌಡ ಕೊಲೆ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಐದು ತಿಂಗಳ ಬಳಿಕ ಪ್ರಕರಣದ ಪ್ರಮುಖ ಆರೋಪಿಗಳನ್ನು ಫೊಲೀಸರು ಬಂಧಿಸಿದ್ದಾರೆ. ಎ1 ಆರೋಪಿ ಯೋಗಾನಂದ(38), ಎ2 ಆರೋಪಿ ಅನಿಲ್(32) ಎಂದು ಗುರುತಿಸಲಾಗಿದೆ.
ಯೋಗಾನಂದ ಹಣಕಾಸು ವಿಚಾರದಲ್ಲಿ ವೈಶಮ್ಯದಿಂದ ಸುಫಾರಿ ಕೊಟ್ಟು ಕೊಲೆ ಮಾಡಿಸಿಧ್ದ ಆರೋಪಿಯಾಗಿದ್ದಾನೆ. ಕೃಷ್ಣೇಗೌಡ ಕೊಲೆ ಸಂಬಂಧ 14 ಆರೋಪಿಗಳ ವಿರುದ್ದ ಪೊಲೀಸರು ಕೇಸ್ ದಾಖಲಿಸಿದ್ದರು. 12 ಆರೋಪಿಗಳ ಬಂಧನವಾಗಿದ್ದರೂ ಪ್ರಕರಣದ ಪ್ರಮುಖ ಆರೋಪಿಗಳು ತಲೆ ಮರೆಸಿಕೊಂಡಿದ್ದರು.

ಸಿಐಡಿ ಹಾಗೂ ಹಾಸನ ಪೊಲೀಸರು ನಿನ್ನೆ ತುಮಕೂರು ಜಿಲ್ಲೆಯ ತುರುವೇಕರೆ ಬಳಿ ತೋಟದ ಮನೆಯಲ್ಲಿ ಅಡಗಿದ್ದ ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ. ರಾಜ್ಯ ಸರ್ಕಾರ ಎರಡು ತಿಂಗಳ ಹಿಂದೆ ಪ್ರಕರಣವನ್ನು ಸಿಐಡಿಗೆ ವಹಿಸಿತ್ತು.
ಹಾಸನ ಹೊರವಲಯದ ಹೊಳೆನರಸೀಪುರ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಆಗಸ್ಟ್ 9ರಂದು ಹಾಡು ಹಗಲೇ ಕೃಷ್ನೇಗೌಡ ಹತ್ಯೆ ಮಾಡಲಾಗಿತ್ತು. ಈ ಬಗ್ಗೆ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿತ್ತು. ಹಂತಕರು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಮಾಡಿದ್ದರು. ಕೊಲೆ ಬಳಿಕ ತಲೆ ಮರೆಸಿಕೊಂಡಿದ್ದ ಪ್ರಮುಖ ಆರೋಪಿಗಳನ್ನು ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಪೊಲೀಸರು ಬಂಧಿಸಿದ್ದಾರೆ.
ಸಿಐಡಿ ಹಾಗು ಹಾಸನ ಪೊಲೀಸರಿಂದ ಜಂಟೀ ಆಪರೇಷನ್ ವೇಳೆ ಆರೋಪಿಗಳ ಬಂಧನವಾಗಿದೆ. ಬಂಧನದ ವೇಳೆ ಆರೋಪಿಗಳು ಪೊಲೀಸರ ಮೇಲೆ ಅಟ್ಯಾಕ್ ಮಾಡಿ ಎಸ್ಕೇಪ್ ಆಗಲು ಯತ್ನಿಸಿದ್ದರು. ಈ ಘಟನೆ ಸಂಬಂಧ ತುರುವೆಕೆರೆ ಠಾಣೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಹಾಗು ಆತ್ಮಹತ್ಯೆ ಯತ್ನ ಕೇಸ್ ದಾಖಲಾಗಿದೆ.

ವಿಷ ಕುಡಿದಂತೆ ನಾಟಕ ಮಾಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳನ್ನ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಪ್ರಮುಖ ಆರೋಪಿಗಳನ್ನು ಬಂಧಿಸುವ ಮೂಲಕ ಇಡೀ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದ ಬರ್ಬರ ಹತ್ಯೆ ಕೇಸ್ ಅನ್ನು ಹಾಸನ ಪೊಲೀಸರು ಬೇದಿಸಿದ್ದಾರೆ.












Click it and Unblock the Notifications