Hassan: ನೀರಿನ ಮಧ್ಯ ಇದ್ದ ಕಂಬ ಏರಿ ವಿದ್ಯುತ್ ತಂತಿ ದುರಸ್ತಿ ಮಾಡಿದ ಲೈನ್‌ಮ್ಯಾನ್
ಹಾಸನ ಸೆಪ್ಟೆಂಬರ್ 29: ನೀರಿನ ಮಧ್ಯ ಇದ್ದ ಕಂಬ ಏರಿ ವಿದ್ಯುತ್ ತಂತಿ ದುರಸ್ತಿಯನ್ನು ಲೈನ್‌ಮ್ಯಾನ್‌ವೊಬ್ಬರು ಯಶಸ್ವಿಯಾಗಿ ಮಾಡಿದ್ದಾರೆ. ಇದರಿಂದ ಗ್ರಾಮಸ್ಥರು ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಸನದ ಹೇಮಾವತಿ ಜಲಾಶಯದ ನೀರಿನ ಮಧ್ಯೆ ವಿದ್ಯುತ್ ತಂತಿಯಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ ತೆಪ್ಪದಲ್ಲಿ ತೆರಳಿದ ಸಹಾಯಕ ಮಾರ್ಗದರ್ಶಿ ಹರೀಶ್‌ಕುಮಾರ್.ಎಚ್.ವಿ. ವಿದ್ಯುತ್ ಕಂಬವನ್ನು ಏರಿ ರಿಪೇರಿ ಮಾಡಿದ್ದಾರೆ.
ಹಾಸನ ಜಿಲ್ಲೆ ಆಲೂರು ತಾಲ್ಲೂಕಿನ ಮಣಿಗನಹಳ್ಳಿ ಗ್ರಾಮದ ಬಳಿ ಈ ದುರಸ್ತಿ ಕಾರ್ಯ ಮಾಡಲಾಗಿದೆ. ಆಲೂರು ತಾಲ್ಲೂಕಿನ, ಕುಂದೂರು ಹೋಬಳಿ, ಹಂಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಣಿಗನಹಳ್ಳಿ ಗ್ರಾಮವಿದು. ಗೊರೂರು ಜಲಾಶಯದ ಹಿನ್ನೀರಿನಲ್ಲಿ ಮಗ್ಗೆ ವಿದ್ಯುತ್ ವಿತರಣಾ ಕೇಂದ್ರದಿಂದ ಕಡಬಗಾಲ ಕ್ರಾಸ್ ಮಾರ್ಗಕ್ಕೆ ಹಾದು ಹೋಗಿರುವ 11 ಕೆವಿ ವಿದ್ಯುತ್ ಮಾರ್ಗದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಮಾರ್ಗದ ಮಧ್ಯೆ ಇರುವ ವಿದ್ಯುತ್ ಕಂಬ ಒಂದರಲ್ಲಿ 11 ಕೆವಿ ಪಿನ್ ಇನ್ಸುಲೇಟರ್ ಕಳಚಿ ಬಿದ್ದಿತ್ತು. ಇದರಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಆಡಚಣೆ ಉಂಟಾಗಿತ್ತು.

ಇದನ್ನು ಪರಿಶೀಲಿಸಿದ ಪಾಳ್ಯ ಶಾಖೆಯ ಸಹಾಯಕ ಹರೀಶ್‌ಕುಮಾರ್ ಅವರಿಗೆ ದುರಸ್ತಿ ಮಾಡುವಂತೆ ಶಾಖೆಯ ಜೂನಿಯರ್ ಇಂಜಿನಿಯರ್ ಪ್ರಕಾಶ್ ಮಾರ್ಗದರ್ಶನ ನೀಡಿದ್ದರು. ಇದರಿಂದಾಗಿ ನುರಿತ ಈಜುಗಾರರ ಜೊತೆ ತೆಪ್ಪದಲ್ಲಿ ತೆರಳಿದ ಲೈನ್‌ಮ್ಯಾನ್ ಹರೀಶ್‌ಕುಮಾರ್ ರಿಪೇರಿ ಮಾಡಿದ್ದಾರೆ. ಹರೀಶ್‌ಕುಮಾರ್ ಕೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.
ಹಾಸನ: ಪೊಲೀಸ್ ಕಟ್ಟಡ ಮೇಲಿಂದ ಹಾರಿ ವ್ಯಕ್ತಿ ಆತ್ಮಹತ್ಯೆ
ಪೊಲೀಸ್ ಕಟ್ಟಡ ಮೇಲಿಂದ ಹಾರಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನದ ಹೊಳೆನರಸೀಪುರದಲ್ಲಿ ನಡೆದಿದೆ. ಮಲ್ಲೇನಹಳ್ಳಿ ಗ್ರಾಮದ ಸುನೀಲ್ (30) ಮೃತ ವ್ಯಕ್ತಿ. ಹಾಸನ ನಗರದ ಎನ್.ಆರ್. ವೃತ್ತದಲ್ಲಿರುವ ಪೊಲೀಸ್ ಸಂಕೀರ್ಣದ ಮಟನ್ ಅಂಗಡಿಯಲ್ಲಿ ಸುನೀಲ್ ಕೆಲಸ ಮಾಡುತ್ತಿದ್ದನು. ಈತ ಮದ್ಯವ್ಯಸನಿಯಾಗಿದ್ದ ಎಂದು ತಿಳಿದು ಬಂದಿದೆ.

ಹಾಸನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೂರ್ನಾಲ್ಕು ತಿಂಗಳಿಗೊಮ್ಮೆ ಮನೆಗೆ ಹೋಗುತ್ತಿದ್ದ. ಇಂದು ಹಾಸನ ನಗರ ಪೊಲೀಸ್ ಉಪಾಧೀಕ್ಷಕರ ಕಛೇರಿ ಸಂಕೀರ್ಣಕ್ಕೆ ಬಂದಿದ್ದನು. ಈ ವೇಳೆ ನಾಲ್ಕನೇ ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಸುನೀಲ್‌ನನ್ನು ಆಸ್ಪತ್ರೆಗೆ ಕರೆದೊಯ್ದಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಮದ್ಯವ್ಯಸನಿಯಾಗಿದ್ದ ಸುನೀಲ್ ನಿತ್ಯ ಹಾಸನ ನಗರ ಠಾಣೆ, ಗ್ರಾಮಂತರ ಪೊಲೀಸ್ ಠಾಣೆ, ಸಿಇಎನ್ ಪೊಲೀಸ್ ಠಾಣೆ, ಪೊಲೀಸ್ ಉಪಾಧೀಕ್ಷಕರ ಕಛೇರಿಗೆ ಬಳಿ ಸುತ್ತಾಡಿದ್ದನು. ಕಳೆದ ದಿನ ಪೊಲೀಸ್ ಠಾಣೆಯ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿದ್ದಾನೆ. ಪೊಲೀಸರು ಯಾವುದೇ ವಿಚಾರಣೆಗೆ ಕರೆದಿಲ್ಲದೆ ಇದ್ದರು ಸುಮ್ಮನೆ ಬಂದಿದ್ದ ಎಂದು ತಿಳಿದು ಬಂದಿದೆ. ಸುನೀಲ್ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸುನೀಲ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ. ಸ್ಥಳಕ್ಕೆ ಎಸ್ಪಿ ಮಹಮದ್ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಚಿಕ್ಕಮಗಳೂರು: ಎಲ್ಲೆಂದರಲ್ಲಿ ಓಡಾಡಿ ಆತಂಕ ಸೃಷ್ಟಿಸಿದ ಒಂಟಿ ಸಲಗ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಾದ್ಯಂತ ರಾತ್ರಿಯಿಡೀ ಎಲ್ಲೆಂದರಲ್ಲಿ ಓಡಾಡುವ ಕಾಡಾನೆಯೊಂದು ಗ್ರಾಮದಲ್ಲಿ ಆತಂಕವನ್ನು ಸೃಷ್ಟಿಮಾಡಿದೆ. ಪಟ್ಟಣದ ಹೊಯ್ಸಳ ಕ್ರೀಡಾಂಗಣ, ಪೊಲೀಸ್ ಕ್ವಾರ್ಟರ್ಸ್, ಬಾಪು ನಗರ, ಸಂತೆ ಮೈದಾನ, ಬಿಳಗುಳ ಸುತ್ತಮುತ್ತ ಒಂಟಿ ಸಲಗ ಸಂಚಾರ ಮಾಡಿ ಸ್ಥಳೀಯರಲ್ಲಿ ಆತಂಕವನ್ನು ಹೆಚ್ಚಿಸಿದೆ.

ಹೀಗಾಗಿ ಅರಣ್ಯ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಓಡಾಡುವಂತೆ ಸೂಚನೆ ನೀಡಿದೆ. ಒಂಟಿ ಸಲಗದ ಹಾವಳಿ ಮನೆಗಳಲ್ಲಿ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೀಗಾಗಿ ವಾಹನ ಸವಾರರು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ಬೆಳಗ್ಗೆಯಿಂದ ಮೂಡಿಗೆರೆ ಪಟ್ಟಣ ಬಿಟ್ಟು ಕದಲದ ಒಂಟಿ ಸಲಗ ಭೀತಿಯನ್ನು ಸೃಷ್ಟಿಸಿದ್ದು ಅರಣ್ಯ ಇಲಾಖೆ ಆನೆಯನ್ನು ಕಾಡಿಗೆ ಓಡಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.












Click it and Unblock the Notifications