ದೇವೇಗೌಡರ ಪತ್ರ; ಹಾಸನ ಡಿಸಿಗೆ ಚುನಾವಣಾ ಆಯೋಗದ ನೋಟಿಸ್
ಹಾಸನ, ಮಾರ್ಚ್ 23: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಯಾಗಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಈಗ ಸರ್ಕಾರಿ ಅಧಿಕಾರಿಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಕೆಲಸ ಮಾಡಬೇಕಿದೆ. ಹಾಸನ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ.
ಹಾಸನ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮಗೆ ಚುನಾವಣಾ ಆಯೋಗ ನೊಟೀಸ್ ನೀಡಿದೆ. ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್. ಡಿ. ದೇವೇಗೌಡರು ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು.

ಈ ಪತ್ರದ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ನೋಟಿಸ್ ನೀಡಿದ್ದು, ಅದರದಲ್ಲಿ ಸ್ಪಷ್ಟನೆಯನ್ನು ನೀಡುವಂತೆ ಕೇಳಿದೆ. ಎಚ್. ಡಿ. ದೇವೇಗೌಡರು ಪತ್ರದಲ್ಲಿ ಹಲವು ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಆದ್ದರಿಂದ ನೋಟಿಸ್ ನೀಡಲಾಗಿದೆ.
ಹಾಸನ ಕ್ಷೇತ್ರದಲ್ಲಿ ಎಚ್. ಡಿ. ದೇವೇಗೌಡರ ಮೊಮ್ಮನ ಪ್ರಜ್ವಲ್ ರೇವಣ್ಣ ಬಿಜೆಪಿ-ಜೆಡಿಎಸ್ ಪಕ್ಷದಿಂದ ಈ ಬಾರಿಯ ಚುನಾವಣೆಗೆ ಅಭ್ಯರ್ಥಿ. ಕಾಂಗ್ರೆಸ್‌ನಿಂದ ಎಂ. ಶ್ರೇಯಸ್ ಪಟೇಲ್ ಅಭ್ಯರ್ಥಿ. ಮಾರ್ಚ್ 28ರಂದು ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. ಇಂತಹ ಸಮಯದಲ್ಲಿಯೇ ದೇವೇಗೌಡರು ಚುನಾವಣಾಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಆಯೋಗಕ್ಕೆ ಪತ್ರವನ್ನು ಬರೆದಿದ್ದಾರೆ.
ನೋಟಿಸ್‌ನಲ್ಲಿ ಏನಿದೆ?: ಎಚ್. ಡಿ. ದೇವೇಗೌಡರ ಪತ್ರದ ಆಧಾರದ ಮೇಲೆ ಕೇಂದ್ರ ಚುನಾವಣಾ ಆಯೋಗ ರಾಜ್ಯ ಚುನಾವಣಾ ಆಯೋಗಕ್ಕೆ ಪತ್ರ ಬರೆದಿತ್ತು. ಈ ಪತ್ರ ಉಲ್ಲೇಖ ಮಾಡಿ ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿ ಸಿ. ಸತ್ಯಭಾಮ ಬಳಿ ಸ್ಪಷ್ಟನೆ ಕೇಳಿ ನೊಟೀಸ್ ನೀಡಿದೆ.
ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆಯನ್ನು ನೋಟಿಸ್ ತಲುಪಿದ 24 ಗಂಟೆಯೊಳಗೆ ನೀಡಲು ಆಯೋಗ ಸೂಚನೆ ನೀಡಿದೆ. ಹಾಸನದ ಜೆಡಿಎಸ್ ನಾಯಕರು ನೀಡಿದ ಮಾಹಿತಿ ಆಧರಿಸಿ ಎಚ್. ಡಿ. ದೇವೇಗೌಡರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವನ್ನು ಬರೆದಿದ್ದರು.
ಎಚ್. ಡಿ. ದೇವೇಗೌಡರು ತಮ್ಮ ಪತ್ರದಲ್ಲಿ ಹಾಸನ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ಸಿ. ಸತ್ಯಭಾಮ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಕೆ. ಎನ್. ರಾಜಣ್ಣ ಅವರ ಹೆಸರು ಪ್ರಸ್ತಾಪಿಸಿದ್ದಾರೆ.
ದೇವೇಗೌಡರು ಪತ್ರದಲ್ಲಿ ಸಿ. ಸತ್ಯಭಾಮ 8 ತಿಂಗಳಿನಿಂದ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಹಾಸನದ ಜನರಿಂದ ಉತ್ತಮ ಅಭಿಪ್ರಾಯವಿಲ್ಲ. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೆಳಹಂತದ ಅಧಿಕಾರಿಗಳನ್ನು ಅವರು ಉತ್ತೇಜಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ.
ಸಿ. ಸತ್ಯಭಾಮ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಕೆ. ಎನ್. ರಾಜಣ್ಣ ಒಂದೇ ಸಮುದಾಯಕ್ಕೆ ಸೇರಿದವರು. ಸಚಿವರ ನಿರ್ದೇಶನದಂತೆಯೇ ಜಿಲ್ಲಾಧಿಕಾರಿಗಳು ಯಾವಾಗಲೂ ಕೆಲಸ ಮಾಡುತ್ತಾರೆ. ಅವರು ರಾಜ್ಯ ಸರ್ಕಾರದ ಏಜೆಂಟ್‌ರಂತೆ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದು ದೇವೇಗೌಡರು ಪತ್ರದಲ್ಲಿ ದೂರಿದ್ದಾರೆ.
ಈಗ ಲೋಕಸಭೆ ಚುನಾವಣೆ ಮತ್ತು ಬರ ನಿರ್ವಹಣೆ ಕಾರ್ಯಗಳು ನಡೆಯುತ್ತಿರುವುದರಿಂದ ಸಿ. ಸತ್ಯಭಾಮ ಅವರ ಕಾರ್ಯ ವೈಖರಿ ತೃಪ್ತಿದಾಯಕವಾಗಿಲ್ಲ. ಆದ್ದರಿಂದ ಅವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಜನಪರ ಅಧಿಕಾರಿಯನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಎಚ್. ಡಿ. ದೇವೇಗೌಡರು ಮನವಿ ಮಾಡಿದ್ದಾರೆ.
ಚುನಾವಣಾ ಸಮಯದಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡುವಂತಿಲ್ಲ. ಇದಕ್ಕೂ ಮೊದಲು ಚುನಾವಣಾ ಆಯೋಗದ ಒಪ್ಪಿಗೆ ಪಡೆಯಬೇಕಿದೆ. ಒಂದು ವೇಳೆ ಆಯೋಗ ಸೂಚನೆ ನೀಡಿದರೆ ಆ ಅಧಿಕಾರಿಯನ್ನು ವರ್ಗಾವಣೆ ಮಾಡಬಹುದು. ಈಗ ಹಾಸನ ಜಿಲ್ಲಾಧಿಕಾರಿ ವಿಚಾರದಲ್ಲಿ ಯಾವ ತೀರ್ಮಾನ ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications