ಹಾಸನದಲ್ಲಿ ಕೈಗೆ ಸೀಲ್ ಹಾಕಿದ್ದ ಯುವತಿ ಸೃಷ್ಟಿಸಿದ ಆತಂಕ
ಹಾಸನ, ಮಾರ್ಚ್ 23: ಸಿಂಗಪುರದಿಂದ ಬಂದಿದ್ದ ಯುವತಿಯೊಬ್ಬಳು ಎಲ್ಲೆಡೆ ಸುತ್ತಾಡಿ ಆತಂಕ ಸೃಷ್ಟಿಸಿದ ಘಟನೆ ಹಾಸನದಲ್ಲಿ ನಡೆದಿದೆ. ಕೊನೆಗೂ ಅಧಿಕಾರಿಗಳು ಆಕೆಯ ಮನವೊಲಿಸಿ ಆಸ್ಪತ್ರೆಗೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಿಂಗಪುರದಿಂದ ಶನಿವಾರ ಬಂದಿದ್ದ ಯುವತಿ ಹಾಸನ ನಗರದ ಬಾಡಿಗೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದು, ಸೊಮವಾರ ರವೀಂದ್ರ ನಗರದ ಪಾರ್ಕಿನಲ್ಲಿ ಸುತ್ತಾಡುತ್ತಿದ್ದಳು. ಆಗ ಆಕೆಯ ಕೈನಲ್ಲಿದ್ದ ಸೀಲ್ ನೋಡಿದ ಜನರು ಬೆಚ್ಚಿಬಿದ್ದಿದ್ದಾರೆ. ಅಲ್ಲದೆ ಭಯಗೊಂಡು ತಕ್ಷಣ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಪಾರ್ಕ್ ಗೆ ಬಂದ ಆರೋಗ್ಯಾಧಿಕಾರಿಗಳು ಆಕೆಯ ವಿಚಾರಣೆ ನಡೆಸಿದ್ದಾರೆ. ಆದರೆ ಅಧಿಕಾರಿಗಳ ಪ್ರಶ್ನೆಗಳಿಗೆ ಉದ್ಧಟತನ ತೋರಿದ ಆಕೆ ರಂಪಾಟ ನಡೆಸಿದ್ದಾಳೆ. ಮಾಹಿತಿಯ ಪ್ರಕಾರ ಆಕೆ ಶನಿವಾರ ಸಂಜೆ ಸಿಂಗಪುರದಿಂದ ಹಾಸನಕ್ಕೆ ಬಂದಿದ್ದು, ವಿಮಾನ ನಿಲ್ದಾಣದಲ್ಲಿ ಸಕ್ರೀನಿಂಗ್ ಮಾಡಿ ನಂತರ ಆಕೆಯ ಕೈಗೆ ಸೀಲ್ ಹಾಕಿ ಹದಿನಾಲ್ಕು ದಿನ ಎಲ್ಲಿಗೂ ತೆರಳಬಾರದು, ಮನೆಯಲ್ಲೇ ಇರುವಂತೆ ಸೂಚನೆ ನೀಡಿ ಕಳುಹಿಸಲಾಗಿದೆ.

ಆದರೆ ಅದಕ್ಕೆ ಸೊಪ್ಪು ಹಾಕದ ಯುವತಿ ಹಾಸನದ ಮನೆಯಲ್ಲಿ ಉಳಿದುಕೊಳ್ಳದೇ ಪಾರ್ಕ್ ನಲ್ಲಿ ಅಡ್ಡಾಡುವ ಮೂಲಕ ಭಯ ಹುಟ್ಟಿಸಿದ್ದಳು. ಯುವತಿಯ ಮನವೊಲಿಸುವ್ಲಿ ಕೊನೆಗೂ ಅಧಿಕಾರಿಗಳು ಯಶಸ್ವಿಯಾಗಿದ್ದು, ಆಕೆಯನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈಕೆ ಬೆಂಗಳೂರಿನಿಂದ ಮೂವರ ಜೊತೆ ಹಾಸನಕ್ಕೆ ಒಂದೇ ಕಾರಿನಲ್ಲಿ ಬಂದಿದ್ದಳು ಎನ್ನಲಾಗಿದೆ. ಇದೀಗ ಆಕೆ ಮನೆಯ ಸುತ್ತಮುತ್ತಲಿನವರು ಆತಂಕಗೊಂಡಿದ್ದಾರೆ.
ಸ್ಥಳಕ್ಕೆ ಹಾಸನ ಡಿಎಚ್ ಒ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುವತಿಗೆ ಕೊರೊನಾ ಸೋಂಕು ಇದೆಯೋ, ಇಲ್ಲವೋ ಆ ಬಗ್ಗೆ ವೈದ್ಯಕೀಯ ಪರೀಕ್ಷೆ ಬಳಿಕವಷ್ಟೆ ತಿಳಿಯಬೇಕಿದೆ. ಆದರೆ ಯುವತಿಯ ಕೈಲಿದ್ದ ಸೀಲ್ ನೋಡಿದ ಜನರ ಆತಂಕ ಮಾತ್ರ ಕಡಿಮೆಯಾಗಿಲ್ಲ.












Click it and Unblock the Notifications