Yettinahole Project: ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡ ಬಿಜೆಪಿ ವಿರುದ್ಧ ಕಿಡಿ ಕಾರಿದ ಸಿಎಂ ಸಿದ್ದರಾಮಯ್ಯ!
ಹಾಸನ ಸೆಪ್ಟೆಂಬರ್ 6: ಸಕಲೇಶಪುರ ತಾಲ್ಲೂಕಿನ ದೊಡ್ಡನಾಗರ ಬಳಿ ಎತ್ತಿನಹೊಳೆ ಯೋಜನೆಯ ಮೊದಲ ಹಂತ-1 ಅನ್ನು ಇಂದು ಉದ್ಘಾಟನೆ ಮಾಡಲಾಯಿತು. ದೊಡ್ಡನಾಗರದ 9ನೆ ಪಂಪ್‌ಹೌಸ್‌ನಲ್ಲಿ ಸಿಎಂ ಸಿದ್ದರಾಮಯ್ಯ ಕಂಪ್ಯೂಟರ್ ಮೂಲಕ ಮೋಟರ್ ಆನ್ ಮಾಡಿ ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದರು.
ಸಚಿವ ಸಂಪುಟದ ಸಹೋದ್ಯೋಗಿಗಳ ಜೊತೆ ಈ ಮಹತ್ವಾಕಾಂಕ್ಷೆಯ ಯೋಜನೆಯನ್ನು ಸಿಎಂ ಉದ್ಘಾಟನೆ ಮಾಡಿದರು. ಇಂದಿನಿಂದ ದಶಕಗಳ ಬಹು ನಿರೀಕ್ಷೆಯ ಎತ್ತಿನಹೊಳೆ ಕಾಲುವೆಯಲ್ಲಿ ಪಶ್ಚಿಮಘಟ್ಟದ ನೀರು ಹರಿಯಲಿದೆ. ಬಯಲು ಸೀಮೆಯತ್ತ ಮಲೆನಾಡ ನೀರು ಪ್ರಯಾಣ ಮಾಡಲಿದೆ. ಇದರಿಂದ ಬಯಲು ಸೀಮೆಭಾಗದ ಜನರಲ್ಲಿ ನಿರೀಕ್ಷೆ ಗರಿಗೆದರಿದೆ.

ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಮಾಡಿ ಸಿಎಂ ಹೇಳಿದ್ದೇನು?
ಇದೇ ವೇಳೆ ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಮಾಡಿ ಮಾತನಾಡಿದ ಸಿಎಂ, ಎತ್ತಿನಹೊಳೆ ಯೋಜನೆ ಲೋಕಾರ್ಪಣೆ ಮಾಡಿದ್ದೇವೆ. ಇದು ಪೂರ್ಣಗೊಳ್ಳುತ್ತದೆ. ಯಾರೂ ಈ ಕಾರ್ಯಕ್ರಮದ ಬಗ್ಗೆ ಸಂಶಯ ಇಟ್ಟುಕೊಳ್ಳಬಾರದು. ಕೆಲವರು ಜನರ ಮನಸ್ಸಿನಲ್ಲಿ ಅನುಮಾನ ಸಂಶಯ ಹುಟ್ಟುಹಾಕುತ್ತಿದ್ದಾರೆ. ಇದೆಲ್ಲವೂ ಆಧಾರ ಇಲ್ಲದ, ಜನರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನವೇ ಹೊರತು ಯಾವುದೇ ಸತ್ಯವಿಲ್ಲ. ಯೋಜನೆ ಎರಡು ಹಂತಗಳಲ್ಲಿ ಕಾರ್ಯಗತವಾಗುತ್ತದೆ ಎಂದು ಭರವಸೆ ನೀಡಿದರು.
ಎತ್ತಿನಹೊಳೆ ಯೋಜನೆ ಭೂಮಿ ಪೂಜೆ ಮಾಡಿದ್ದು ನಾನೇ. ಚಿಕ್ಕಬಳ್ಳಾಪುರದಲ್ಲಿ ಶಂಕುಸ್ಥಾಪನೆ ಆಯ್ತು. ಈ ಯೋಜನೆಯನ್ನು ಬಿಜೆಪಿ ಸರ್ಕಾರ ಇದ್ದಾಗಲೇ ರೂಪಿಸಲಾಯಿತು. ಆದರೆ ಭೂಮಿ ಪೂಜೆ ಮಾಡಿದ್ದು ನಾವು. ಹಣ ಬಿಡುಗಡೆ ಮಾಡಿದವರು ನಾವು. ಅವರು ಹಣ ಬಿಡುಗಡೆ ಮಾಡಿ ಯೋಜನೆ ಪೂರ್ಣಗೊಳಿಸಬಹುದಿತ್ತು. ಆದರೆ ಆ ಕೆಲಸ ಬಿಜೆಪಿ ಮಾಡಿಲ್ಲ. ಕಳೆದ 10 ವರ್ಷಗಳಿಂದ ಬಿಜೆಪಿ ಏನೂ ಮಾಡಿಲ್ಲ. ಇಂಥಹ ಕೆಲಸಗಳನ್ನು ಬಿಜೆಪಿಯವರು ಮಾಡುವುದು ಇಲ್ಲ ಎಂದು ಈ ವೇಳೆ ಬಿಜೆಪಿ ವಿರುದ್ಧ ಸಿಎಂ ಕಿಡಿ ಕಾರಿದರು.
ಇದು ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ, ಹಾಸನ, ರಾಮನಗರ ಒಟ್ಟು ಏಳು ಜಿಲ್ಲೆಗಳಿಗೆ ನೀರನ್ನು ಕೊಡುವ ಒಂದು ಮಹತ್ವಾಂಕಾಕ್ಷೆಯ ಯೋಜನೆಯಾಗಿದೆ. 75.59 ಲಕ್ಷ ಜನರಿಗೆ ಕುಡಿಯುವ ನೀರನ್ನು ಕೊಡುತ್ತದೆ. ಶೇ 50 ರಷ್ಟು ನೀರು ಕೆರೆಗಳಿಗೆ ತುಂಬಿಸಲಾಗುತ್ತದೆ. 29 ತಾಲೂಕು 38 ಪಟ್ಟಣಗಳಿಗೆ ನೀರು ಹರಿಸಲಾಗುತ್ತದೆ. 25 ಕಿ.ಮೀ ಕಾಲುವೆ ನಿರ್ಮಾಣ ಪ್ರಗತಿಯಲ್ಲಿದೆ. 162 ಕಿ.ಮೀ ಕಾಲುವೆ ನಿರ್ಮಾಣ ಪೂರ್ಣವಾಗಿದೆ. 132 ಕಿಮೀ ದೂರದ ವಾಣಿ ವಿಲಾಸ ಜಲಾಶಯಕ್ಕೆ ನೀರು ಹರಿಸಲಾಗುತ್ತದೆ ಎಂದು ಸಿಎಂ ಹೇಳಿದರು.

ಜೊತೆಗೆ 527 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ. 24 ಟಿಎಂಸಿ ನೀರು ಎತ್ತುವ ಯೋಜನೆ ಇದು. 10 ಟಿಎಂಸಿ ನೀರು ಕೆರೆಗಳಿಗೆ ತುಂಬಿಸಲಾಗುತ್ತದೆ. 139 ದಿನಗಳ ಕಾಲ ನೀರು ಹರಿಸಲಾಗುತ್ತದೆ. ಇನ್ನೂ 7-8 ಟಿಎಂಸಿ ನೀರು ಸಿಗುವ ಸಾಧ್ಯತೆ ಇದೆ. ಇಂಥಹ ಮಹತ್ವಾಕಾಂಕ್ಷೆಯ ಯೋಜನೆಯನ್ನು ನಾವು ಉದ್ಘಾಟನೆ ಮಾಡಿದ ಸಂತೋಷ ನಮಗಿದೆ. ಇದೊಂದು ಈತಿಹಾಸಿಕ ಕ್ಷಣ ಎಂದು ಸಿಎಂ ಹೇಳಿದರು.
ನಮ್ಮ ಕಾಲದಲ್ಲಿ ನೀರು ಒದಗಿಸುವ ಯೋಜನೆ ಆರಂಭಿಸಿದ್ದೇವೆ. ನಮ್ಮ ಕಾಲದಲ್ಲೇ ಅದನ್ನು ಆರಂಭಗೊಳಿಸುತ್ತೇವೆ. ನಮ್ಮ ಕಾಲದಲ್ಲೇ ಅದನ್ನು ಮುಗಿಸುತ್ತೇವೆ ಎಂದು ಭರವಸೆ ನೀಡುತ್ತೇನೆ. ಬಿಜೆಪಿ ನಾಲ್ಕು ವರ್ಷ ಒಂದು ರೂಪಾಯಿ ಖರ್ಚು ಮಾಡಿಲ್ಲ. ಇಂತಹ ಯೋಜನೆ ಮಾಡಲ ಅವರು ಮನಸ್ಸು ಮಾಡಲ್ಲ. ಮಾಡಿದ್ದರೆ ಇಷ್ಟೊತ್ತಿಗಾಗಲೇ ಯೋಜನೆ ಪೂರ್ಣಗೊಂಡಿರುತ್ತಿತ್ತು. ಈ ಯೋಜನೆ ಜಾರಿ ಆಗಲ್ಲ ಎಂದು ಟೀಕೆ ಮಾಡುತ್ತಲೇ ಬಂದರು. ಹೀಗಾಗಿ ಡಿಕೆ ಶಿವಕುಮಾರ್ ಹೇಳೋದು ಟೀಕೆಗಳು ಸಾಯುತ್ತವೆ ಮಾಡಿದ ಕಾರ್ಯಗಳು ಉಳಿಯುತ್ತವೆ ಎಂದು ಎಂದು ಸಿಎಂ ಹೇಳಿದರು.

ಈ ನಾಡಿನ ರೈತರು ಬಡವರು ಮೂಲಸೌಕರ್ಯಗಳಿಂದ ವಂಚಿತರಾಗಬಾರದು. ಅದಕ್ಕಾಗಿ ನಾವು ನಿತ್ಯ ಕೆಲಸ ಮಾಡುತ್ತೇವೆ. ಅಭಿವೃದ್ಧಿ ಕೆಲಸಗಳೊಂದಿಗೆ ಕುಡಿಯೋ ನೀರನ್ನೂ ಕೊಡುತ್ತೇವೆ. ಡಿಕೆ ಶಿವಕುಮಾರ್ ಅವರು ನಿನ್ನೆನೇ ಬಂದು ಶಾಸ್ತ್ರೋತ್ತವಾಗಿ ಪೂಜೆ ಮಾಡಿದ್ದಾರೆ. ಅವರ ನೇತೃತ್ವದಲ್ಲಿ ನಾವು ಇಂದು ಸಂತೋಷದಿಂದ ಉದ್ಘಾಟನೆ ಮಾಡಿದ್ದೇವೆ. ಅವರ ಮುಂದಾಳತ್ವದಲ್ಲಿ ಇದನ್ನು ಉದ್ಘಾಟನೆಯನ್ನು ಮಾಡಿದ್ದೇವೆ. ಸದ್ಯ ಸಮಯ ಹೆಚ್ಚಾಗಿರುವುದರಿಂದ ನಾನು ರಾಜಕೀಯ ಮಾತನಾಡಲ್ಲ ಎಂದು ತಮ್ಮ ಮಾತು ಮುಗಿಸಿದರು.












Click it and Unblock the Notifications