ನೃತ್ಯದ ವೇಳೆ ಕಮಲ ಹಿಡಿದ ಮಕ್ಕಳು: ಕೆಂಡಾಮಂಡಲರಾದ ಶಾಸಕ ಶಿವಲಿಂಗೇಗೌಡ
ಹಾಸನ ಜನವರಿ 27: ನೃತ್ಯ ಮಾಡುವ ವೇಳೆ ಶಾಲಾ ಮಕ್ಕಳು ಕಮಲದ ಹೂವು ಹಿಡಿದಿರುವುದನ್ನು ಆಕ್ಷೇಪಿಸಿ ಶಾಲಾ ಶಿಕ್ಷಕರೊಂದಿಗೆ ಶಾಸಕರೊಬ್ಬರು ವಾಗ್ವಾದಕ್ಕಿಳಿದ ಘಟನೆ ಹಾಸನದಲ್ಲಿ ನಡೆದಿದೆ.
ಜನವರಿ 26 ರಂದು ಗಣರಾಜ್ಯೋತ್ಸವದ ಅಂಗವಾಗಿ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಹಾಸನ ಜಿಲ್ಲೆಯ ಅರಸೀಕೆರೆಯ ಶಾಲೆಯೊಂದರಲ್ಲೂ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ನೃತ್ಯ ಪ್ರದರ್ಶನದಲ್ಲಿ ಶಾಲಾ ಮಕ್ಕಳು ಕಮಲದ ಹೂ ಬಳಸಿದ್ದಕ್ಕೆ ಕಾಂಗ್ರೆಸ್ ಶಾಸಕ ಎಂ.ಕೆ.ಶಿವಲಿಂಗೇಗೌಡ ವಿರೋಧ ವ್ಯಕ್ತಪಡಿಸಿದರು.

ಅರಸೀಕೆರೆ ಟೌನ್ ಸ್ಟೇಡಿಯಂನಲ್ಲಿ ನಡೆದ ನೃತ್ಯ ಪ್ರದರ್ಶನದಲ್ಲಿ ಶ್ರೀ ಚಂದ್ರಶೇಖರ ಭಾರತಿ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳು ಕಮಲ ಮತ್ತು ನವಿಲು ಗರಿಗಳನ್ನು ಬಳಸಿದರು. ಇದನ್ನು ವಿರೋಧಿಸಿ ನೃತ್ಯ ಪ್ರದರ್ಶನದ ಬಗ್ಗೆ ಅರಸೀಕೆರೆ ಶಾಸಕರು ಶಾಲಾ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.
"ಕಮಲ ಚಿಹ್ನೆ ಪಾರ್ಟಿಗೆ ಸೇರಿದ್ದು, ಅದನ್ನು ನೃತ್ಯ ಪ್ರದರ್ಶನದಲ್ಲಿ ಏಕೆ ಬಳಸಿದ್ದೀರಿ? ಅದರ ಬಗ್ಗೆ ನನಗೆ ಮೊದಲೇ ತಿಳಿಸಬೇಕಿತ್ತು. ನೃತ್ಯ ಪ್ರದರ್ಶನಗಳಿಗೆ ಚಿಹ್ನೆಗಳನ್ನು ಆಯ್ಕೆಮಾಡುವ ಮೊದಲು ಶಿಕ್ಷಕರು ತಿಳಿದಿರಬೇಕು. ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಳ್ಳಿ' ಎಂದು ಶಿವಲಿಂಗೇಗೌಡ ಶಿಕ್ಷಕರ ಜತೆ ವಾಗ್ವಾದ ನಡೆಸಿದರು. ನೃತ್ಯ ಪ್ರದರ್ಶನದ ಬಗ್ಗೆ ಶಿವಲಿಂಗೇಗೌಡ ಮತ್ತು ಶಿಕ್ಷಕರ ವಾದವನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.

ಶ್ರೀ ಚಂದ್ರಶೇಖರ ಭಾರತಿ ಅಂತರಾಷ್ಟ್ರೀಯ ಶಾಲೆಯ ಶಿಕ್ಷಕರೊಬ್ಬರು ಕಮಲ ಮತ್ತು ನವಿಲು ಗರಿಗಳನ್ನು ಬಳಸಿದ್ದಕ್ಕೆ ಕಾರಣ ನೀಡಿದ್ದಾರೆ. ಅದು ರಾಷ್ಟ್ರೀಯ ಹೂವು ಮತ್ತು ಭಾರತದ ಪಕ್ಷಿಯಾಗಿದೆ ಎಂದು ಶಾಸಕರಿಗೆ ವಿವರಿಸಲು ಪ್ರಯತ್ನಿಸಿದರು.
"ಕಮಲ ಭಾರತದ ರಾಷ್ಟ್ರೀಯ ಹೂವು ಮತ್ತು ನವಿಲು ಭಾರತದ ರಾಷ್ಟ್ರೀಯ ಪಕ್ಷಿಯಾಗಿದೆ. ಅದಕ್ಕಾಗಿಯೇ ನಾವು ಅದನ್ನು ನೃತ್ಯ ಪ್ರದರ್ಶನದಲ್ಲಿ ಬಳಸಿದ್ದೇವೆ. ಕಳೆದ ಎರಡು ದಿನಗಳಿಂದ ನಡೆದ ತಾಲೀಮು ವೇಳೆ ವಿದ್ಯಾರ್ಥಿಗಳು ಹೂಗಳನ್ನು ಬಳಸಿದರು. ರಿಹರ್ಸಲ್ ವೇಳೆ ಯಾರೂ ಆಕ್ಷೇಪಿಸಿಲ್ಲ ಅಥವಾ ಏನನ್ನೂ ಹೇಳಿಲ್ಲ' ಎಂದು ಶಿಕ್ಷಕರು ಶಾಸಕರೊಂದಿಗೆ ವಾಗ್ವಾದ ನಡೆಸಿದರು. ಆದರೂ ಶಾಸಕರು ಅದು ತಪ್ಪು ಎಂದು ಶಿಕ್ಷಕರೊಂದಿಗೆ ವಾದಕ್ಕಿಳಿದರು.












Click it and Unblock the Notifications