ಸಿದ್ದರಾಮಯ್ಯನವರ ಪರ ಬ್ಯಾಟ್ ಬೀಸಿದ ಎಚ್.ಡಿ.ರೇವಣ್ಣ
ಹಾಸನ, ಜೂನ್ 17: ಮಾಜಿ ಸಚಿವ ಮತ್ತು ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ.ರೇವಣ್ಣ, ತಮ್ಮ ಒಂದು ಕಾಲದ ಸಹದ್ಯೋಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ತಮ್ಮ ತಂದೆ ದೇವೇಗೌಡ್ರಿಗೆ ತೊಂದರೆ ಕೊಟ್ಟಿರುವುದಕ್ಕೆ ಕಾಂಗ್ರೆಸ್ ಹಿನ್ನಡೆ ಅನುಭವಿಸುತ್ತಿದೆ ಎಂದಿರುವ ರೇವಣ್ಣ, ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಉಳಿದುಕೊಂಡಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
"ಸಿದ್ದರಾಮಯ್ಯನವರಿಂದಾಗಿಯೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಎಪ್ಪತ್ತು ಸ್ಥಾನವನ್ನು ಗೆದ್ದಿತ್ತು. ಸಿದ್ರಾಮಣ್ಣ ಏನಾದರೂ ಇರದಿದ್ದರೆ ಕಾಂಗ್ರೆಸ್ ಝೀರೋ ಆಗುತ್ತಿತ್ತು,"ಎಂದು ರೇವಣ್ಣ ಹೇಳಿದರು.

"ಸಿದ್ದರಾಮಯ್ಯನವರಿಂದ ಕಾಂಗ್ರೆಸ್ ಉಳಿದುಕೊಂಡಿದೆ. ದೇವೇಗೌಡ್ರು ಮತ್ತು ಕುಮಾರಣ್ಣನನ್ನು ಮುಗಿಸಿದ್ದು ಕಾಂಗ್ರೆಸ್ಸಿನವರು. ಅವರಿಗೆ ಶಾಪ ತಟ್ಟಿದೆ, ಹಾಗಾಗಿಯೇ ಕಾಂಗ್ರೆಸ್ ಈ ಪರಿಸ್ಥಿತಿಗೆ ಬಂದಿದೆ,"ಎಂದು ರೇವಣ್ಣ ಆಕ್ರೋಶ ವ್ಯಕ್ತ ಪಡಿಸಿದರು.
"ಹೊಳೇನರಸೀಪುರದಲ್ಲಿ ಪೊಲೀಸ್ ಇಲಾಖೆಯ ಕಟ್ಟಡ ಕಾಮಗಾರಿ ನಡೆಯುತ್ತಿದೆ. ಈಗ ಅದು ಸದ್ಯ ಕೆಲಸ ನಡೆಯದೇ ನಿಂತಿದೆ. ಈ ಕಾರಣಕ್ಕಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿದ್ದೆ,"ಎಂದು ರೇವಣ್ಣ ಸ್ಪಷ್ಟ ಪಡಿಸಿದರು.
ಬೆಂಗಳೂರಿನ ಆರ್. ಟಿ. ನಗರದಲ್ಲಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ಮಂಗಳವಾರ ಎಚ್. ಡಿ. ರೇವಣ್ಣ ಆಗಮಿಸಿದ್ದರು. ರೇವಣ್ಣ ಕೈಯಲ್ಲಿ ಅರ್ಜಿ ಹಿಡಿದು ಗೃಹ ಸಚಿವರನ್ನು ಭೇಟಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿತ್ತು.












Click it and Unblock the Notifications