ಹಾಸನ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇವುಣಿಸಿದವರ ದನಿ ಕೇಳಿ ಓಡೋಡಿ ಬಂದ ಕಡವೆ 'ರಾಜು'!

ಮನುಷ್ಯರಿಗಷ್ಟೇ ಹೃದಯವಿರುತ್ತದೆ, ವೇದನೆಯಿರುತ್ತದೆ, ಮಮತೆಯಿರುತ್ತದೆ, ಕೃತಜ್ಞತೆ ಇರುತ್ತದೆ ಎಂದು ನಂಬಿದವರು ನಾವು. ಇಲ್ಲಿ ಮೂರು ವರ್ಷಗಳ ನಂತರವೂ ತನಗೆ ಅನ್ನ ಹಾಕಿದ ಧಣಿಯನ್ನು ಮರೆಯದ ಕಡವೆಯ ಕಣ್ಣೀರಿನ ಕಥೆಯಿದೆ. ತಪ್ಪದೆ ಓದಿ.

By ಬಿ.ಎಂ.ಲವಕುಮಾರ್
|
Google Oneindia Kannada News

ಹಾಸನ, ಮಾರ್ಚ್ 23: ಅನ್ನಹಾಕಿದವರನ್ನೇ ಮರೆಯುವ ಈ ಕಾಲದಲ್ಲಿ ಮೂಕ ಪ್ರಾಣಿಯೊಂದು ಸುಮಾರು ನಾಲ್ಕು ವರ್ಷಗಳ ಕಾಲ ಸೊಪ್ಪು, ಹುಲ್ಲು ಹಾಕಿ ಬೆಳೆಸಿದ ಒಡೆಯನ ಬಳಿ ಬಂದು ಮೂಕವೇದನೆ ತೋರಿದ ಅಪರೂಪದ ಘಟನೆ ಹಾಸನದ ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಇತ್ತೀಚೆಗೆ ನಡೆದಿದೆ.

ಸರಿಯಾಗಿ ಮಳೆ ಬಾರದೆ ಬರ ಕಾಣಿಸಿಕೊಂಡು ಒಣಗಿ ಹೋಗಿರುವ ಅರಣ್ಯಗಳ ಸಾಲಿಗೆ ಗೆಂಡೆಕಟ್ಟೆ ಅರಣ್ಯಧಾಮವೂ ಸೇರುತ್ತದೆ. ಇಲ್ಲಿ ಜಿಂಕೆ, ಕಡವೆಯಂತಹ ಪ್ರಾಣಿಗಳಿದ್ದು, ಇದೀಗ ಒದಗಿ ಬಂದಿರುವ ಪರಿಸ್ಥಿತಿಯಿಂದ ಅವು ಕಂಗಾಲಾಗಿವೆ. ಅರಣ್ಯಧಾಮದಲ್ಲಿ ಹಸಿರು ಮೇವು ಇಲ್ಲ. ಅರಣ್ಯ ಇಲಾಖೆ ಹೊರಗಿನಿಂದ ತರಿಸಿಹಾಕಬೇಕಾಗಿದೆ.[ಬಂಡೀಪುರ ಅಭಯಾರಣ್ಯ: ಮೇವಿಲ್ಲದೆ ವನ್ಯಜೀವಿಗಳ ಪರದಾಟ]

A heartmelting story of a stag

ಗೆಂಡೆಕಟ್ಟೆ ಅರಣ್ಯಧಾಮದಲ್ಲಿ ಮೇವು ನೀರಿಗೆ ಕೊರತೆಯಾಗಿರುವುದರಿಂದ ಅಲ್ಲಿರುವ ಪ್ರಾಣಿಗಳು ಕಂಗಾಲಾಗಿವೆ ಎಂಬ ಸುದ್ದಿಗಳು ಮಾಧ್ಯಮದಲ್ಲಿ ಬಂದಿದ್ದವು. ಈ ವಿಚಾರ ತಿಳಿಯುತ್ತಿದ್ದಂತೆಯೇ ಸಕಲೇಶಪುರ ತಾಲೂಕಿನ ಹತ್ತಿಹಳ್ಳಿ ಗ್ರಾಮದ ನಿವಾಸಿ ಪರಮೇಶ್ ಮತ್ತು ಕುಸುಮ ದಂಪತಿಗೆ ಸಂಕಟ ಶುರುವಾಗಿತ್ತು. ಇದೇ ಅರಣ್ಯಧಾಮದಲ್ಲಿರುವ ನಮ್ಮ ರಾಜು ಹೇಗಿದ್ದಾನೋ ಎಂಬ ಆತಂಕ ಅವರ ನಿದ್ದೆ ಕೆಡಿಸಿತ್ತು. ಏನಾದರಾಗಲಿ ಒಮ್ಮೆ ಹೋಗಿ ನೋಡಿಕೊಂಡು ಬರೋಣ ಎಂಬ ತೀರ್ಮಾನಕ್ಕೆ ದಂಪತಿ ಬಂದರು.

ಒಂದಷ್ಟು ಹಸಿರು ಸೊಪ್ಪು ಹೊತ್ತು ದಂಪತಿ ಹಾಸನದ ಗೆಂಡೆಕಟ್ಟೆ ಅರಣ್ಯಧಾಮದ ಬಳಿಗೆ ತೆರಳಿದರು. ಮುಗಿಲೆತ್ತರಕ್ಕೆ ಬೆಳೆದ ಒಂದಷ್ಟು ನೀಲಗಿರಿ ಮರ ಹೊರತುಪಡಿಸಿದರೆ, ಅಲ್ಲಿ ಇನ್ನೇನೂ ಇರಲಿಲ್ಲ. ಎಲ್ಲವೂ ಒಣಗಿ ಮೈದಾನದಂತಾಗಿತ್ತು. ಆ ಪರಿಸ್ಥಿತಿ ನೋಡಿ ಅವರ ಕಣ್ಣಂಚಲ್ಲಿ ನೀರು ಜಿನುಗಿತ್ತು. ಎಷ್ಟು ದೂರ ಕಣ್ಣು ಹಾಯಿಸಿದರೂ ತಮ್ಮ ರಾಜು ಮಾತ್ರ ಕಾಣಲೇ ಇಲ್ಲ.[ಚಾಮರಾಜನಗರ: ಹನೂರು ಕಾವೇರಿ ವನ್ಯಜೀವಿ ವಲಯದಲ್ಲಿ ಕಾಡ್ಗಿಚ್ಚು]

ರಾಜು ಇನ್ನು ಸಿಕ್ಕೋಲ್ಲ, ಎಂಬ ನಿರಾಸೆಯಲ್ಲಿ ಇನ್ನೇನು ಹೊರಡಬೇಕು ಎಂಬಷ್ಟರಲ್ಲಿ ಕಡವೆಯ ಆಕಾರವೊಂದು ದೂರದಲ್ಲಿ ಕಾಣಿಸಿತು. ಇಬ್ಬರಿಗೂ ಅರಿವಿಲ್ಲದಂತೆ ಬಾಯಿ, ರಾಜೂ... ಎಂದು ಉಲಿಯುತು. ಅತ್ಯಾಶ್ಚರ್ಯ ಎಂಬಂತೆ ಇವರ ದನಿ ಕೇಳಿದ ಕಡವೆ ಓಡೋಡಿ ಇವರತ್ತ ಬಂದುಬಿಟ್ಟಿತು. ಸಾಮಾನ್ಯವಾಗಿ ಯಾವುದೇ ಕಾಡು ಪ್ರಾಣಿಗಳು ಮನು‌ಷ್ಯನ ಹತ್ತಿರ ಬರುವುದಿಲ್ಲ.

A heartmelting story of a stag

ಆದರೆ ಕಡವೆ ಈ ದಂಪತಿಗಳ ಪರಿಚಯವಿದ್ದಂತೆ ಓಡಿ ಬಂತು. ಇದು ತಮ್ಮ ರಾಜುವೇ ಎಂದು ಅವರಿಬ್ಬರೂ ಗುರುತಿಸುವುದಕ್ಕೆ ಹೆಚ್ಚು ಸಮಯ ಬೇಕಾಗಲಿಲ್ಲ. ರಾಜುವನ್ನು ಕಂಡು ಇಬ್ಬರ ಕಣ್ಣಲ್ಲೂ ನೀರು..! ಇಷ್ಟಕ್ಕೂ ಆ ದಂಪತಿಗೂ ಗೆಂಡೆಕಟ್ಟೆ ಅರಣ್ಯಧಾಮದಲ್ಲಿರುವ ಕಡವೆಗೂ ಎತ್ತಣದ ಸಂಬಂಧ ಎಂದು ಕುತೂಹಲವಾಗುತ್ತಿದೆಯೇ? ಅದಕ್ಕೆ ಉತ್ತರ ಸಿಗಬೇಕಾದರೆ ಸುಮಾರು ಏಳು ವರ್ಷಗಳ ಹಿಂದಕ್ಕೆ ಹೋಗಬೇಕು.[ಇನ್ನೂ ಬೇಸಿಗೆ ದೂರವಿದೆ, ಕಾಡಿನಲ್ಲಿ ನೀರಿಲ್ಲ, ಪ್ರಾಣಿಗಳಿಗೆ ಮೇವಿಲ್ಲ]

ಪರಮೇಶ್ ಮತ್ತು ಕುಸುಮ ದಂಪತಿಗಳು ಸಾಕಿದ್ದ ಹಸುವೊಂದು ಮೇಯುವುದಕ್ಕೆಂದು ಕಾಡಿಗೆ ಹೋಗಿದ್ದಾಗ ತಾಯಿಯನ್ನು ಕಳೆದುಕೊಂಡ ಕಡವೆಯ ಮರಿಯೊಂದು ಹಸುವಿನೊಂದಿಗೆ ಮನೆಗೆ ಬಂದುಬಿಟ್ಟಿತ್ತು. ಪುಟ್ಟ ಮರಿಯನ್ನು ಕಂಡು ಅಯ್ಯೋ ಪಾಪ ಎನ್ನಿಸಿ ದಂಪತಿಗಳು ಅದನ್ನು ತಮ್ಮ ದನದ ಕೊಟ್ಟಿಗೆಯಲ್ಲೇ ಸಾಕಿದರು. ಕಡವೆಯನ್ನು ಕರೆತಂದ ಹಸುವಿನ ಕರು ಬದುಕಿರದಿದ್ದರಿಂದ ಹಸು ತನ್ನ ಹಾಲನ್ನೇ ಕಡವೆಗೆ ಕೊಟ್ಟು ಕರುವಿನಂತೆ ಬೆಳೆಸಿತು.

ರಾಜು ಎಂದು ನಾಮಕರಣಗೊಂಡ ಕಡವೆ ದಂಪತಿಗಳ ಪಾಲನೆ ಪೋ‌ಷಣೆಯಲ್ಲಿ ದಷ್ಟಪುಷ್ಟವಾಗಿ ಬೆಳೆಯಿತು. ದಂಪತಿಗಳು ಮಗುವಿನಷ್ಟೇ ಹಚ್ಚಿಕೊಂಡಿದ್ದ ಕಡವೆಯನ್ನು ಕಂಡು ಹಲವರಿಗೆ ಅಸೂಯೆ ಮೂಡಿ ಅರಣ್ಯ ಇಲಾಖೆಗೆ ದೂರು ನೀಡಿದರು.

ಅರಣ್ಯ ಇಲಾಖೆಯ ಅಧಿಕಾರಿಗಳು ಕಡವೆಯನ್ನು ಸುರಕ್ಷಿತವಾಗಿ ಒಪ್ಪಿಸಿದ್ದಕ್ಕಾಗಿ ಪ್ರಶಂಸಾ ಪತ್ರ ನೀಡಿ ಅದನ್ನು ಗೆಂಡೆ ಕಟ್ಟೆ ಅರಣ್ಯಧಾಮಕ್ಕೆ ಬಿಟ್ಟರು. ಇವೆಲ್ಲ ಆಗಿ ಮೂರು ವರ್ಷವಾಗಿದೆ. ಈ ಮಧ್ಯೆ ಗೆಂಡೆಕಟ್ಟ ಅರಣ್ಯದಲ್ಲಿ ನೀರಿನ ಅಭಾವ ತಲೆದೂರಿರುವುದನ್ನು ತಿಳಿದು ಆತಂಕಗೊಂಡ ದಂಪತಿ ರಾಜುವನ್ನು ನೋಡಲೇಬೆಕಂದು ತೆರಳಿದ್ದರು.[ಎಚ್.ಡಿ.ಕೋಟೆ: ಜನರ ನಿದ್ದೆಗೆಡಿಸಿದ್ದ ಹುಲಿರಾಯ ಸೆರೆ]

ಅನಾಥವಾಗಿದ್ದ ತನ್ನನ್ನು ಸಾಕಿ ಸಲಹಿದ ಆ ದಂಪತಿಯನ್ನು 3 ವರ್ಷವಾದರೂ ಮರೆಯದ ರಾಜು, ಅವರ ಬಳಿ ಬಂದ ಸೊಪ್ಪು ತಿಂದು ಖುಷಿಪಟ್ಟಿದೆ. ಅವರ ಕೈಯನ್ನು ನೇವರಿಸಿ ಕುಶಲ ವಿಚಾರಿಸಿದೆ, ತನ್ನ ಸ್ಥಿತಿಯನ್ನು ಕಂಡು ಅನುಕಂಪ ಪಡುತ್ತಿರುವ ಅವರಿಗೆ ಕಣ್ಣಲ್ಲೇ ಕೃತಜ್ಞತೆ ಹೇಳಿದೆ.[ಮೈಸೂರು: ಬಿಇಎಂಎಲ್ ನೌಕರರ ನಿದ್ದೆಗೆಡಿಸಿದ್ದ ಚಿರತೆ ಅಂದರ್]

ರಾಜುವನ್ನು ನಮ್ಮೊಂದಿಗೆ ಕಳುಹಿಸಿಕೊಡಿ, ಒಂದಷ್ಟು ದಿನ ಸಾಕಿ, ಮಳೆ ಬಂದು ಮೇವು ಹುಟ್ಟಿದ ಮೇಲೆ ಕಳುಹಿಸಿಕೊಡುತ್ತೇವೆ ಎಂದು ದಂಪತಿಗಳು ಅರಣ್ಯಾಧಿಕಾರಿಗಳನ್ನು ಕೋರಿಕೊಂಡಿದ್ದರು. ಆದರೆ ಕೇಂದ್ರ ವನ್ಯಜೀವಿ ವಿಭಾಗದಿಂದ ಅನುಮತಿ ಪಡೆದರಷ್ಟೇ ಕಳಿಸಲು ಅನುಮತಿ ಸಿಗುತ್ತದೆಂದು ಇಲಾಖೆ ಹೇಳಿದೆ. ಬೇರೆ ದಾರಿ ಕಾಣದ ದಂಪತಿ ರಾಜುವನ್ನು ನೆನೆಯುತ್ತಾ ಮನೆಯ ಹಾದಿ ಹಿಡಿದರು.

English summary
Here is a heartmelting story of a stag. A family in farmers Hassan took care of a stag 7 years before. The forest department of gendekatte forest brought the stag from the family 3 years ago. But still the stag remebered the family.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X