'ಉಚಿತ ಲಸಿಕೆಗೆ ಹಣ ಬರುವುದು ಎಲ್ಲಿಂದ, ಇಲ್ಲಿಂದಲೇ'!, ಪೆಟ್ರೋಲ್ ಬೆಲೆ ಬಗ್ಗೆ ಕೇಂದ್ರ ಸಚಿವರ ಹೇಳಿಕೆ
ಅಸ್ಸಾಂ, ಅಕ್ಟೋಬರ್ 11: ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಪೆಟ್ರೋಲ್ ಅನ್ನು ನೀರಿಗೆ ಹೋಲಿಕೆ ಮಾಡಿದ್ದಾರೆ, ಮಿನರಲ್ ನೀರಿಗೆಯೇ ಅಷ್ಟು ಬೆಲೆ ಹೆಚ್ಚಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟೇ ಅಲ್ಲದೆ "ಉಚಿತ ಲಸಿಕೆಗೆ ಹಣ ಬರುವುದು ಹೇಗೆ, ಇಲ್ಲಿಂದಲೇ," ಎಂದಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯಿಂದ ಸರ್ಕಾರವು ಜನರಿಗೆ ಒದಗಿಸಿದ ಉಚಿತ ಕೋವಿಡ್ -19 ಲಸಿಕೆಗಳಿಗೆ ಧನಸಹಾಯ ನೀಡಲು ಬಳಸಿಕೊಳ್ಳುತ್ತದೆ ಎಂದು ಕೂಡಾ ತಿಳಿಸಿದ್ದಾರೆ. ಶನಿವಾರ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ, "ಪೆಟ್ರೋಲ್ ಬೆಲೆಯು ಹೆಚ್ಚಾಗಿಲ್ಲ ಆದರೆ ತೆರಿಗೆಯನ್ನು ಅಧಿಕವಾಗಿ ವಿಧಿಸಲಾಗುತ್ತಿದೆ. ಇದು ಸಂಪನ್ಮೂಲವನ್ನು ಅಧಿಕಗೊಳಿಸುವ ನಿಟ್ಟಿನಲ್ಲಿ ಮಾಡಲಾಗಿದೆ," ಎಂದು ಹೇಳಿಕೊಂಡಿದ್ದಾರೆ.
ಪೆಟ್ರೋಲ್ ಮೇಲೆ ಕನಿಷ್ಠ ವ್ಯಾಟ್ ಹೊಂದಿರುವ ರಾಜ್ಯಗಳಲ್ಲಿ ಅಸ್ಸಾಂ ಕೂಡ ಒಂದು ಎಂದು ಸಚಿವರು ಹೇಳಿದರು. "ಈಗ ಪೆಟ್ರೋಲ್ ಬೆಲೆಯು ಅಧಿಕವಾಗಿದೆ. ಯಾಕೆಂದರೆ ತೆರಿಗೆಯನ್ನು ಹಾಕಲಾಗಿದೆ. ನೀವು ಖರೀದಿ ಮಾಡುವ ಮಿನರಲ್ ವಾಟರ್‌ಗೆ ಪೆಟ್ರೋಲ್‌ಗಿಂತ ಅಧಿಕ ಹಣವಿದೆ," ಎಂದಿದ್ದಾರೆ.

"ಪೆಟ್ರೋಲ್ ದರವು 40 ರೂಪಾಯಿ ಆಗಿದೆ. ಅಸ್ಸಾಂ ಸರ್ಕಾರವು ಅದಕ್ಕೆ 28 ರೂಪಾಯಿ ತೆರಿಗೆಯನ್ನು ವಿಧಿಸುತ್ತದೆ. ಪೆಟ್ರೋಲಿಯಂ ಸಚಿವಾಲಯವು 30 ರೂಪಾಯಿ ತೆರಿಗೆ ವಿಧಿಸುತ್ತದೆ. ಕೊನೆಗೆ ಪೆಟ್ರೋಲ್ ಬೆಲೆಯು 98 ಆಗುತ್ತದೆ. ಆದರೆ ನೀವು ಹಿಮಾಲಯ ನೀರು ಕುಡಿಯುವುದಾದರೆ ಅದರ ಬೆಲೆ ಬಾಟಲಿಗೆ ನೂರು ರೂಪಾಯಿ ಆಗಿದೆ. ಪೆಟ್ರೋಲ್‌ಗಿಂತ ನೀರಿನ ಬೆಲೆ ಅಧಿಕವಾಗಿದೆ," ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರವು ಈ ರೀತಿ ಸಂಗ್ರಹ ಮಾಡಿದ ಹಣವು ಜನರಿಗೆ ಉಚಿತ ಕೊರೊನಾ ವೈರಸ್ ಲಸಿಕೆಯನ್ನು ನೀಡಲು ಬಳಸಲಾಗುತ್ತದೆ ಎಂದು ಇದೇ ಸಂದರ್ಭದಲ್ಲಿ ಸಚಿವರು ತಿಳಿಸಿದ್ದಾರೆ. "ಪೆಟ್ರೋಲ್ ಬೆಲೆಯು ಅಧಿಕವಾಗಿಲ್ಲ, ಆದರೆ ಅದಕ್ಕೆ ತೆರಿಗೆ ವಿಧಿಸಲಾಗುತ್ತದೆ. ನೀವು ಉಚಿತವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡಿರಬೇಕು. ಅದಕ್ಕೆ ಹಣ ಬರುವುದು ಎಲ್ಲಿಂದ, ಈ ರೀತಿಯಾಗಿ ಹಣವನ್ನು ಸಂಗ್ರಹ ಮಾಡಲಾಗುತ್ತದೆ," ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ರಾಜ್ಯ ಸಚಿವ ರಾಮೇಶ್ವರ ತೇಲಿ ತಿಳಿಸಿದರು.
"ರಾಜಸ್ಥಾನದಲ್ಲಿ ಪೆಟ್ರೋಲ್ ದರವು ಅಧಿಕವಾಗಿದೆ. ಯಾಕೆಂದರೆ ರಾಜ್ಯ ಸರ್ಕಾರ ಅಧಿಕ ತೆರಿಗೆ ವಿಧಿಸಿದೆ. ಪೆಟ್ರೋಲ್ ದರವು ಕಡಿಮೆ ಆದರೂ ಕೂಡಾ ಆ ರಾಜಸ್ಥಾನ ಸರ್ಕಾರ ಬೆಲೆಯನ್ನು ಕಡಿಮೆ ಮಾಡುವುದಿಲ್ಲ," ಎಂದು ಆರೋಫ ಮಾಡಿದ್ದಾರೆ.
(ಒನ್‌ಇಂಡಿಯಾ ಸುದ್ದಿ)












Click it and Unblock the Notifications