ಸಚಿವ ಹಿಮಾಂತ ಮೇಲಿನ ನಿಷೇಧದ ಬಳಿಕ ಅವರ ಸಹೋದರ, ಎಸ್‌ಪಿ ಸುಶಾಂತ ವರ್ಗಾವಣೆ
ಗುವಾಹಟಿ, ಏಪ್ರಿಲ್ 3: ಅಸ್ಸಾಂ ಸಚಿವ ಹಿಮಾಂತ ಬಿಸ್ವ ಶರ್ಮಾ ಅವರನ್ನು ಚುನಾವಣಾ ಪ್ರಚಾರದಿಂದ ಮುಂದಿನ 48 ಗಂಟೆಯವರೆಗೆ ನಿರ್ಬಂಧಿಸಿದ ಬಳಿಕ ಚುನಾವಣಾ ಆಯೋಗವು ಅವರ ಸಹೋದರ ಮತ್ತು ಗೋಲ್ಪರದ ಪೊಲೀಸ್ ವರಿಷ್ಠಾಧಿಕಾರಿ ಸುಶಾಂತ ಬಿಸ್ವ ಶರ್ಮಾ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿದೆ.
ಏಪ್ರಿಲ್ 6ರಂದು ಮೂರನೇ ಮತ್ತು ಕೊನೆಯ ಹಂತದ ಚುನಾವಣೆ ನಡೆಯಲಿದ್ದು, ಅದಕ್ಕೂ ಮುನ್ನ ಚುನಾವಣಾ ಆಯೋಗವು ಸುಶಾಂತ ಬಿಸ್ವ ಶರ್ಮಾ ಅವರನ್ನು ರಾಜ್ಯ ಕೇಂದ್ರ ಕಚೇರಿಯ ಸೂಕ್ತ ಹುದ್ದೆಗೆ ವರ್ಗಾವಣೆ ಮಾಡಿದೆ. ಹಾಗೆಯೇ ತಕ್ಷಣದಿಂದಲೇ ಜಾರಿಯಾಗುವಂತೆ ಐಪಿಎಸ್ ಅಧಿಕಾರಿ ವೀರ ವೆಂಕಟ ರಾಕೇಶ್ ರೆಡ್ಡಿ ಅವರನ್ನು ಗೋಲ್ಪರದ ನೂತನ ಎಸ್‌ಪಿಯನ್ನಾಗಿ ನೇಮಿಸಿದೆ.
ಅಸ್ಸಾಂನ ಹಿರಿಯ ಸಚಿವ ಹಿಮಾಂತ ಬಿಸ್ವ ಶರ್ಮಾ ಅವರು ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್‌ನ ಮುಖ್ಯಸ್ಥ ಹಗ್ರಮಾ ಮೊಹಿಲರಿ ವಿರುದ್ಧ ಬೆದರಿಕೆ ಹೇಳಿಕೆಗಳನ್ನು ನೀಡಿದ್ದಾರೆ ಎಂದ ಆರೋಪದಡಿ ಚುನಾವಣಾ ಆಯೋಗವು ಅವರನ್ನು 48 ಗಂಟೆಗಳ ಕಾಲ ಪ್ರಚಾರದಿಂದ ನಿರ್ಬಂಧಿಸಿದೆ.

ಹಿಮಾಂತ ಅವರು ತಕ್ಷಣದಿಂದಲೇ ಮುಂದಿನ 48 ಗಂಟೆಗಳವರೆಗೆ ಸಾರ್ವಜನಿಕ ಸಭೆಗಳಲ್ಲಿ, ಮೆರವಣಿಗೆಗಳಲ್ಲಿ, ಸಮಾವೇಶ, ರೋಡ್ ಶೋ, ಸಂದರ್ಶನ ಅಥವಾ ಮಾಧ್ಯಮಗಳಿಗೆ ಹೇಳಿಕೆ ನೀಡುವ ಯಾವುದೇ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ಶುಕ್ರವಾರ ಆಯೋಗ ಆದೇಶಿಸಿತ್ತು.
ಅಸ್ಸಾಂನಲ್ಲಿ ವಿಧಾನಸಭೆ ಚುನಾವಣೆಯ ಬಹಿರಂಗ ಪ್ರಚಾರವು ಏಪ್ರಿಲ್ 4ರ ಸಂಜೆ 6 ಗಂಟೆಗೆ ಮುಕ್ತಾಯವಾಗಲಿದೆ.












Click it and Unblock the Notifications