ಗದಗ: ಎಮ್ಮೆಯಿಂದ ಬಸ್ ನಿಲ್ದಾಣ ಉದ್ಘಾಟನೆ ಮಾಡಿಸಿದ ಬಾಳೆಹೊಸೂರು ಗ್ರಾಮಸ್ಥರು
ಗದಗ, ಜುಲೈ 19: 15 ವರ್ಷಗಳಿಂದ ಬಸ್ ನಿಲ್ದಾಣಕ್ಕಾಗಿ ಶಾಸಕ, ಸಚಿವರೂ ಹಾಗೂ ಸಂಸದರಿಗೆ ಎಷ್ಟೇ ಮನವಿ ಮಾಡಿದರೂ ನಿಲ್ದಾಣ ನಿರ್ಮಿಸಿಕೊಡದಿದ್ದಕ್ಕೆ ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಾಳೆಹೊಸೂರು ಗ್ರಾಮದ ಜನತೆ ತೆಂಗಿನ ಗರಿ ಬಳಸಿ ಬಸ್ ನಿಲ್ದಾಣ ಮಾಡಿ ಅದನ್ನು ಎಮ್ಮೆಯಿಂದ ಉದ್ಘಾಟಿಸಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಚುನಾವಣೆಗೂ ಮುನ್ನ ಬಸ್ ನಿಲ್ದಾಣದ ಭರವಸೆ ನೀಡಿದ್ದ ರಾಜಕಾರಣಿಗಳು, ತಮ್ಮ ಭರವಸೆಯನ್ನು ಕೇವಲ ಬ್ಯಾನರ್‌ಗಳಿಗಷ್ಟೇ ಮೀಸಲಿಟ್ಟಿದ್ದಾರೆ. ಈ ಭಾಗದ ಶಾಸಕ ರಾಮಪ್ಪ ಲಮಾಣಿ, ಸಂಸದ ಶಿವಕುಮಾರ್ ಉದಾಸಿಗೆ ಬಸ್ ನಿಲ್ದಾಣದ ದುರಸ್ಥಿ ಬಗ್ಗೆ ಸಾಕಷ್ಟು ಬಾರಿ ಮನವರಿಕೆ ಮಾಡಲಾಗಿದೆ. ಆದರೆ ಈ ಗ್ರಾಮಸ್ಥರ ಮನವಿಗೆ ರಾಜಕೀಯ ನಾಯಕರಿಂದ ಸ್ಪಂದನೆ ಸಿಗದಿದ್ದಕ್ಕೆ ತೆಂಗಿನ ಗರಿಗಳಿಂದ ಚಪ್ಪರ ಕಟ್ಟಿ, ಅದಕ್ಕೆ ಬ್ಯಾನರ್ ಹಾಕಿಸಿ , ಎಮ್ಮೆಯಿಂದ ಉದ್ಘಾಟನೆ ಮಾಡಿಸಿ ಗಮನ ಸೆಳೆದಿದ್ದಾರೆ.
ವಿನೂತನ ಪ್ರತಿಭಟನೆ
ಸ್ಥಳೀಯ ಶಾಸಕ ಮತ್ತು ಸಂಸದರಿಗೆ ಮುಜುಗರ ಉಂಟು ಮಾಡಲು ಗ್ರಾಮಸ್ಥರು ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಗ್ರಾಮದಲ್ಲಿ ಬಸ್ ನಿಲ್ದಾಣದ ನಿರ್ಮಾಣಕ್ಕೆ ಒತ್ತಾಯಿಸಿದರೂ ಬಸ್ ನಿಲ್ದಾಣ ನಿರ್ಮಾಣ ಮಾಡಿಕೊಟ್ಟಿಲ್ಲ. ಇದರಿಂದ ಗ್ರಾಮಸ್ಥರು ಸಾಕಷ್ಟು ರೋಸಿ ಹೋಗಿದ್ದಾರೆ. ರಸ್ತೆ ಪಕ್ಕದ ಟೀ ಅಂಗಡಿಯಲ್ಲಿ ದಾರಿಯಲ್ಲಿ ಕುಳಿತು, ನಿಂತು ಬಸ್ ಗಾಗಿ ಕಾಯಬೇಕಿದೆ. ಅದರಲ್ಲೂ ವಿದ್ಯಾರ್ಥಿಗಳು, ಮಕ್ಕಳು, ಮಹಿಳೆಯರಿಗೆ ಬಸ್ ನಿಲ್ದಾಣ ಇಲ್ಲದಿರುವುದರಿಂದ ಬಹಳಷ್ಟು ತೊಂದರೆಯಾಗುತ್ತಿದೆ.

ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಗ್ರಾಮದಲ್ಲಿನ ಒಂದು ಆವರಣದಲ್ಲಿ ತೆಂಗಿನ ಗರಿಗಳ ಮೂಲಕ ಚಪ್ಪರ ಹಾಕಿ, ಚಪ್ಪರದ ಮೇಲೆ ಇದು ಶಾಸಕರ ಮತ್ತು ಸಂಸದರ ಅನುದಾನದಲ್ಲಿ ನಿರ್ಮಾಣವಾದ ಹೊಸ ಬಸ್ ನಿಲ್ದಾಣ ಎಂದು ವ್ಯಂಗ್ಯವಾಗಿ ಬರೆಸಿ ಬ್ಯಾನರ್ ಹಾಕಿದ್ದಾರೆ. ಜೊತೆಗೆ ಎಮ್ಮೆಯೊಂದನ್ನು ಕರೆ ತಂದು ರಿಬ್ಬನ್ ಕಟ್ ಮಾಡಿಸಿ ಈ ಭಾಗದ ಶಾಸಕರು ಮತ್ತು ಸಂಸದರು ಎಮ್ಮೆಗಿಂತ ಕಡೆಯಾಗಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಅನುದಾನ ಇಲ್ಲ ಅಂತಾರೆ!
ಕಳೆದ ಒಂದು ವರ್ಷದಿಂದ ಬಸ್ ನಿಲ್ದಾಣ ನಿರ್ಮಾಣ ಮಾಡಿ ಎಂದೂ ಗ್ರಾಮಸ್ಥರು ದುಂಬಾಲು ಬಿದ್ದರೂ ಸಹ ಅನುದಾನ ಇಲ್ಲಎಂದು ಕಥೆ ಹೇಳುತ್ತಿದ್ದಾರೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಿ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಅದರಲ್ಲೂ ಈಗ ಮಳೆಗಾಲ ಆಗಿರುವುದರಿಂದ ಪ್ರಯಾಣಿಕರಿಗೆ ಬಸ್ ನಿಲ್ದಾಣ ಇಲ್ಲದಿರುವುದರಿಂದ ಭಾರಿ ಸಮಸ್ಯೆಯಾಗಿದೆ, ಶಾಲಾ ಮಕ್ಕಳು ಮಳೆಯಲ್ಲಿ ನೆನೆದುಕೊಂಡೇ ಬಸ್ ಏರಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ದಾಣ ಕಸ ಹಾಕುವ ಜಾಗವಾಗಿ ಬದಲಾಗಿದೆ
ಇನ್ನೂ ಈ ಬಾಲೇಹೊಸೂರು ಗ್ರಾಮದಲ್ಲಿ 40 ವರ್ಷಗಳ ಹಿಂದೆಯೇ ಬಸ್ ನಿಲ್ದಾಣ ನಿರ್ಮಾಣವಾಗಿತ್ತು. ಆದರೆ 10 ವರ್ಷದ ಹಿಂದೆಯೇ ಛಾವಣಿ ಕುಸಿದು ಬಸ್ ನಿಲ್ದಾಣದ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ. ದುರಸ್ತಿ ನಡೆಯದ ಕಾರಣ ಆ ಕಟ್ಟಡದ ಆವರಣದಲ್ಲಿ ಕಸ ಹಾಕುವ ಮೂಲಕ ಡಂಪಿಂಗ್ ಯಾರ್ಡ್ ಆಗಿದೆ. ಬಸ್‌ಗಾಗಿ ಕಾಯುವುದರ ಜೊತೆಗೆ ವಾಸನೆಯನ್ನು ತಡೆದುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ.












Click it and Unblock the Notifications