Karnataka Elections: ಶಿರಹಟ್ಟಿ ಬಿಜೆಪಿ ಅಭ್ಯರ್ಥಿಗೆ ಬಿಗ್ ರಿಲೀಫ್; ರಾಜೀನಾಮೆ ಅಂಗೀಕರಿಸಿದ ಆರೋಗ್ಯ ಇಲಾಖೆ
ಗದಗ, ಏಪ್ರಿಲ್ 19: 2023ರ ಕರ್ನಾಟಕ ವಿಧಾನಸಭಾ ಚುನಾವಣೆಗಾಗಿ ಆಡಳಿತರೂಢ ಬಿಜೆಪಿ ಪಕ್ಷ ಈ ಬಾರಿ ಟಿಕೆಟ್ ಹಂಚಿಕೆಯಲ್ಲಿ ದೊಡ್ಡ ಬದಲಾವಣೆಗೆ ಕೈ ಹಾಕಿದೆ. ಹಲವು ಹಿರಿಯ ಮತ್ತು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಶಾಸಕರನ್ನು ಬಿಟ್ಟು ಹೊಸ ಮುಖಗಳಿಗೆ ಟಿಕೆಟ್ ನೀಡಿದೆ.
ಕಳೆದ ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ಅನುಸರಿಸಿದ ಮಾದರಿಯನ್ನು ಕರ್ನಾಟಕದಲ್ಲಿಯೂ ಕ್ರಮೇಣ ಜಾರಿಗೆ ತರಲು ಎದುರು ನೋಡುತ್ತಿದೆ. ಹಾಲಿ ಶಾಸಕರನ್ನು ಕೈಬಿಟ್ಟು ಹೊಸ ಅಭ್ಯರ್ಥಿಗೆ ಟಿಕೆಟ್ ನೀಡಿದ ಕ್ಷೇತ್ರಗಳಲ್ಲಿ ಗದಗ ಜಿಲ್ಲೆಯ ಶಿರಹಟ್ಟಿಯೂ ಒಂದು.

ಶಿರಹಟ್ಟಿ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಅವರನ್ನು ತಪ್ಪಿಸಿ ಹೊಸ ಮುಖ ಡಾ. ಚಂದ್ರು ಲಮಾಣಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಇದಕ್ಕೆ ರಾಮಣ್ಣ ಲಮಾಣಿ ಅವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು.
2018ರ ಜುಲೈ 21ರಂದು ಶಿರಹಟ್ಟಿ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿ ಕಾರ್ಯ ಆರಂಭಿಸಿದ ಅವರು 2021ರ ಆಗಸ್ಟ್ 31ರಂದು ವೈದ್ಯ ವೃತ್ತಿಗೆ ರಾಜೀನಾಮೆ ನೀಡಿದ್ದರು. ಆದರೆ, ರಾಜೀನಾಮೆ ಅಂಗೀಕಾರಗೊಂಡಿರಲಿಲ್ಲ. ಇದು ಚಂದ್ರು ಲಮಾಣಿ ಅವರ ಚುನಾವಣಾ ಸ್ಪರ್ಧೆಗೆ ತೊಡಕಾಗಿತ್ತು.
ಇದೇ ವೇಳೆ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಆಯ್ಕೆಯಾದ ಡಾ. ಚಂದ್ರು ಲಮಾಣಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿ "ಬಿ ಫಾರಂ' ಪಡೆಯುವಂತೆ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೂಚಿಸಿದ್ದರು.

2021ರ ಜುಲೈ 31ರಂದು ಡಾ. ಚಂದ್ರು ಲಮಾಣಿ ತಮ್ಮ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದರೂ, ಈವರೆಗೆ ಅಂಗೀಕಾರವಾಗಿರಲಿಲ್ಲ ಮತ್ತು ಸರ್ಕಾರಿ ನೌಕರರೇ ಆಗಿದ್ದರು. ಬುಧವಾರ, ಏಪ್ರಿಲ್ 19ರಂದು ಅವರ ರಾಜೀನಾಮೆ ಪತ್ರವನ್ನು ಆರೋಗ್ಯ ಇಲಾಖೆ ಅಂಗೀಕರಿಸಿದ್ದು, ಶಿರಹಟ್ಟಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಚಂದ್ರು ಲಮಾಣಿ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಅಡ್ಡಿ ಆತಂಕ ಇಲ್ಲದಂತಾಗಿದೆ.
ಇದೇ ವೇಳೆ ಡಾ. ಚಂದ್ರು ಲಮಾಣಿ ಅವರ ರಾಜೀನಾಮೆಯನ್ನು ಅಂಗೀಕರಿಸದಂತೆ ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದರು. ರಾಜಕೀಯ ಪ್ರವೇಶ ಮತ್ತು ಚುನಾವಣೆಗೆ ಸ್ಪರ್ಧಿಸಲೆಂದೇ ಸರ್ಕಾರಿ ವೈದ್ಯ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದರು.
ರಾಜಕೀಯ ಪ್ರಭಾವ ಬೆಳೆಸಿ ಬಿಜೆಪಿ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮ 2021 ಉಪ ನಿಯಮ 3ರ ಸಾಮಾನ್ಯ ತತ್ವಗಳು (1) (2) (3) ಮತ್ತು ಉಪ ನಿಯಮ 5 ಅನ್ನು ಉಲ್ಲಂಘಿಸುರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಹೀಗಾಗಿ ಮುಂದಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದರು.

ಗದಗ ಜಿಲ್ಲಾ ಬಿಜೆಪಿ ಉಪಾಧ್ಯಕ್ಷನಾಗಿದ್ದ ಡಾ. ಚಂದ್ರು ಲಮಾಣಿ ಅವರ ರಾಜೀನಾಮೆ ಈವರೆಗೆ ಅಂಗೀಕಾರವಾಗಿರದ ಕಾರಣ, ಓರ್ವ ಸರ್ಕಾರಿ ನೌಕರ ಚುನಾವಣೆಯಲ್ಲಿ ಸ್ಪರ್ಧಿಸಲು ಬರಲ್ಲ. ಹೀಗಾಗಿ ಶಾಸಕ ರಾಮಣ್ಣ ಲಮಾಣಿ ಅಥವಾ ಬೇರೆಯವರಿಗೆ ಟಿಕೆಟ್ ನೀಡಬೇಕು ಎಂಬ ಕೂಗು ಗದಗ ಜಿಲ್ಲಾ ಬಿಜೆಪಿ ವಲಯದಲ್ಲಿ ಕೇಳಿಬಂದಿತ್ತು. ಇದೀಗ ಚಂದ್ರು ಲಮಾಣಿ ಅವರ ಹಾದಿ ಸುಗಮವಾಗಿದ್ದು, ಚುನಾವಣೆಯಲ್ಲಿ ಕಣಕ್ಕಿಳಿಯಬಹುದಾಗಿದೆ.
2023ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 20 ಕೊನೆಯ ದಿನವಾಗಿದ್ದರೆ, ನಾಮಪತ್ರ ವಾಪಸ್ ಪಡೆಯಲು ಏಪ್ರಿಲ್ 24 ಅಂತಿಮ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ಮತ್ತು ಫಲಿತಾಂಶ ಪ್ರಕಟವಾಗಲಿದೆ.












Click it and Unblock the Notifications