ರಾಕಿಂಗ್ ಸ್ಟಾರ್ ಯಶ್‌ಗೆ ಮತ್ತೊಂದು ಆಘಾತ: ನಟನನ್ನು ನೋಡಲು ಬಂದಿದ್ದ ಯುವಕ ಅಪಘಾತದಲ್ಲಿ ಸಾವು
ಗದಗ, ಜನವರಿ 09: ರಾಕಿಂಗ್ ಸ್ಟಾರ್ ಯಶ್ ನೋಡಲು ಬಂದ ಅಭಿಮಾನಿ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯಲ್ಲಿ ನಡೆದಿದೆ. ಬಿಂಕದಕಟ್ಟಿ ಗ್ರಾಮದ ನಿಖಿಲ್ ಕರೂರ್ (22) ಮೃತ ದುರ್ದೈವಿ.
ಇಂಜಿನಿಯರ್ ಆಗಿದ್ದ ನಿಖಿಲ್ ಕರೂರ್ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಯಾಗಿದ್ದನು. ನಿನ್ನೆ( ಜನವರಿ 08)ರಂದು ಯಶ್ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ ಯಶ್ ಬಂದ ಹಿನ್ನೆಲೆಯಲ್ಲಿ ನಟನನ್ನು ಕಾಣಲು ತನ್ನೂರಿನಿಂದ ಬಂದಿದ್ದನು.

ಈತ ಗದಗದಿಂದ ವಾಪಸ್ಸು ಆಗುತ್ತಿದ್ದ ನಟ ಯಶ್ ಕಾರಿನ ಹಿಂದೆ ತನ್ನ ಸ್ಕೂಟರ್ ಚಲಾಯಿಸಿಕೊಂಡು ಬಂದಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಗದಗದ ತೇಜಾ ನಗರದ ಬಳಿ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ನಿಖಿಲ್ ಕರೂರ್ ಗಂಭೀರ ಗಾಯಗೊಂಡಿದ್ದನು. ಕೂಡಲೇ ಆತನನ್ನು ಸ್ಥಳೀಯ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿಲಾಯಿತು. ಆದರೆ ದುರಾದೃಷ್ಟವಶಾತ್ ಯುವಕ ಸಾವನ್ನಪ್ಪಿದ್ದಾನೆ.
ರಾಕಿಂಗ್ ಸ್ಟಾರ್ ಯಶ್ ಸೂರಣಗಿಗೆ ಭೇಟಿ ನೀಡಿದ್ದೇಕೆ..?
ನಟ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಬ್ಯಾನರ್ ಕಟ್ಟಲು ಹೋದ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದಿತ್ತು. ಹನಮಂತ ಹರಿಜನ (21), ಮುರಳಿ ನಡವಿನಮನಿ (20) ಹಾಗೂ ನವೀನ್ ಗಾಜಿ (19) ಎನ್ನುವ ಮೂವರು ಯುವಕರು ಸಾವನ್ನಪ್ಪಿದ್ದರು.

ಒಂದೇ ಊರಿನಲ್ಲಿ ಮೂವರು ಅಭಿಮಾನಿಗಳ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ನಟ ಯಶ್ ಅವರು ಗದಗದ ಸೂರಣಗಿ ಗ್ರಾಮಕ್ಕೆ ಭೇಟಿ ನೀಡಿ ಮೃತ ಯುವಕರ ಪೋಷಕರಿಗೆ ಸಾಂತ್ವನ ಹೇಳಿದ್ದರು. ಸೂರಣಗಿ ಗ್ರಾಮಕ್ಕೆ ಬಂದಿದ್ದ ಯಶ್ರನ್ನು ನೋಡಲು ನೂರಾರು ಅಭಿಮಾನಿಗಳು ಮುಗಿಬಿದ್ದರು. ಈ ವೇಳೆ ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.
ಮೂವರು ಮೃತ ಯುವಕರ ಮನೆಗೆ ಭೇಟಿ ನೀಡಿದ ನಂತರ ಯಶ್ ವಾಪಾಸ್ ಆಗುವ ವೇಳೆ ಮತ್ತೊಂದು ದುರಂತ ನಡೆದಿದೆ. ಯಶ್ ನೋಡಲು ಬಂದ ಮತ್ತೋರ್ವ ಅಭಿಮಾನಿ ನಿಖಿಲ್ ಕರೂರ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದನು. ಈ ವೇಳೆ ಯಶ್ ಆಸ್ಪತ್ರೆಗೆ ಭೇಟಿ ನೀಡಿ ಆತನ ಆರೋಗ್ಯ ವಿಚಾರಿಸಿ ಪೋಷಕರಿಗೆ ಧೈರ್ಯ ತುಂಬಿ ವಾಪಸ್ ಆಗಿದ್ದರು. ದುರಾದೃಷ್ಟವಶಾತ್ ನಿಖಿಲ್ ಕರೂರ್ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.












Click it and Unblock the Notifications