Railway Station: ಹೈಟೆಕ್ ರೂಪದಲ್ಲಿ ಆಕರ್ಷಿಸುತ್ತಿರುವ ಗದಗ ರೈಲು ನಿಲ್ದಾಣ, ಒಳಗೆ ಏನೇನಿದೆ?
ಬೆಂಗಳೂರು, ಮೇ 19: 'ಅಮೃತ್ ಭಾರತ್ ಸ್ಟೇಷನ್' ಯೋಜನೆಯಡಿ ಕೇಂದ್ರ ಸರ್ಕಾರ ಕರ್ನಾಟಕದ ಹತ್ತಾರು ರೈಲು ನಿಲ್ದಾಣಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಈಗಾಗಲೇ ಕೆಲವು ರೈಲ್ವೆ ನಿಲ್ದಾಣಗಳು ಪುನರ್ ಅಭಿವೃದ್ಧಿಗೊಂಡಿರುವುದು ಮಾತ್ರವಲ್ಲದೇ ಅತ್ಯಾಧುನಿಕ ವ್ಯವಸ್ಥೆ, ಮೂಲ ಸೌಕರ್ಯಗಳನ್ನು ಒಳಗೊಂಡಿವೆ. ವಿಶಾಲ ಪ್ರಾಂಗಣ, ಉದ್ದನೆಯ ಪ್ಲಾಟ್‌ಫಾರ್ಮ್, ನೇಮ್ ಬೋರ್ಡ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಹೊಂದಿವೆ. ಈ ಪೈಕಿ ಉತ್ತರ ಕರ್ನಾಟಕದ ಅತ್ಯಂತ ಹಳೆಯ ರೈಲು ನಿಲ್ದಾಣವಾದ ಗದಗ ಸ್ಟೇಷನ್ ಹೊಸ ರೂಪ ಪಡೆದುಕೊಂಡಿದೆ. ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಿದೆ.
ಹೌದು, 1882 ರಲ್ಲಿ ಸ್ಥಾಪನೆಯಾಗಿರುವ ಗದಗ ರೈಲು ನಿಲ್ದಾಣವನ್ನು ಸಹ 'ಅಮೃತ್ ಭಾರತ ನಿಲ್ದಾಣ' ಯೋಜನೆಯಡಿ ನವೀಕರಣಕ್ಕೆ ಆಯ್ಕೆ ಮಾಡಲಾಗಿತ್ತು. ಹಲವು ತಿಂಗಳು ಕಾಲ ಈ ನಿಲ್ದಾಣವನ್ನು ಪುನರ್ ಅಭಿವೃದ್ಧಿ ಮಾಡಲಾಗಿದೆ. ಜಿಲ್ಲೆಯು ರಾಜ್ಯದ ಆರ್ಥಿಕತೆಗೆ, ಕೃಷಿಗೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ.

ಗದಗ ವ್ಯಾಪ್ತಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತೀಕವೆಂಬಂತೆ ಆಧುನಿಕ ಸೌಲಭ್ಯಗಳು ಈ ನಿಲ್ದಾಣದಲ್ಲಿ ನಿರ್ಮಿಸಲಾಗಿದೆ. ಈ ಕಾರ್ಯಕ್ಕೆ ಬರೋಬ್ಬರಿ 23 ಕೋಟಿ ರೂ. ವ್ಯಯಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕಾಮಗಾರಿ ಪೂರ್ಣಗೊಂಡು ಹೊಸ ರೂಪದಲ್ಲಿರುವ ರೈಲು ನಿಲ್ದಾಣಗಳು ಫೋಟೋಗಳನ್ನು ನೈಋತ್ಯ ರೈಲ್ವೆ ಹಂಚಿಕೊಂಡಿದೆ. ಈ ಭಾಗದ ಜನರು ರೈಲ್ವೆ ಸ್ಟೇಷನ್ ಕಂಡು ಹರ್ಷ ವ್ಯಕ್ತಪಡಿಸಿದ್ದಾರೆ.
ಸದ್ಯ ಗದಗ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ಗಳು ನವೀಕರಿಸಿದ್ದು, ಶೆಲ್ಟರ್‌ಗಳಿವೆ. ವಾಹನ ಸಂಚಾರ, ಪ್ರಯಾಣಿಕರ ಪ್ರವೇಶಕ್ಕೆ ಹಾಗೂ ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಎರಡು ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ರೈಲು ಸಂಖ್ಯೆ, ಹೆಸರು ಸೇರಿದಂತೆ ಅಗತ್ಯ ಎಲ್‌ಇಡಿ ಸೂಚನಾ ಫಲಕ ಅಳವಡಿಸಲಾಗಿದೆ. ಇದು ಪ್ರಯಾಣಿಕರಿಗೆ ಅಗತ್ಯ ಮಾಹಿತಿ ನೀಡುತ್ತವೆ.

ರೈಲು ನಿಲ್ದಾಣದ ವಿಶೇಷತೆಗಳನ್ನು ನೋಡುವುದಾದರೆ, 2 ಲಿಫ್ಟ್‌ಗಳು ಮತ್ತು 2 ಎಸ್ಕಲೇಟರ್‌ಗಳನ್ನು ನೀಡಲಾಗಿದೆ. ಇದು ವಯೋವೃದ್ಧರು, ಮಹಿಳೆಯರು, ಅನಾರೋಗ್ಯ ಪೀಡಿತರಿಗೆ ಅನುಕೂಲ ಒದಗಿಸುತ್ತದೆ. ಅಲ್ಲದೇ 12 ಮೀಟರ್ ಅಗಲದ ಪಾದಾಚಾರಿ ಮೇಲ್ಸೇತುವೆ (Foot Over Bridge), ವಿಶಾಲವಾದ ಕಾರ್ಯನಿರ್ವಾಹಕ ಕೊಠಡಿ, ವೈಫೈ ವ್ಯವಸ್ಥೆ, ರೈಲು ತಡವಾದರೂ ಸಹಿತ ಆರಾಮದಾವಾಗಿ ಕಾಯುವ, ಕೂರಲು ಪ್ರದೇಶಗಳ ನಿರ್ಮಿಸಲಾಗಿದೆ.
ಪ್ರಯಾಣಿಕರು ಒಳ-ಹೊರಗೆ ಓಡಾಡಲು, ಶೌಚಾಯಯ, ವಿಶ್ರಾಂತಿ ಕೊಠಡಿ, ಲಿಫ್ಟ್, ಮೇಲ್ಸೇತುವೆ ಮಾಹಿತಿ ನೀಡುವ ಸೈನೇಜ್ ಬೋರ್ಡ್, ರೈಲ್ವೆ ಕೌಂಟರ್ ಬಳಿಕ ವಿಶಾಲ ವರ್ಧಿತ ಪರಿಚಲನಾ ಪ್ರದೇಶ, ರೈಲ ಬಂದು ನಿಲ್ಲುವಾಗ ಕೋಚ್‌ಗಳು ಎಲ್ಲೆಲ್ಲಿ ಬರುತ್ತವೆ ಎಂಬ ಬೋರ್ಡ್, ವಿಶೇಷಚೇತನರಿಗೆ ಅನುಕೂಲವಾಗುವ ವ್ಯವಸ್ಥೆ, ವರ್ಗೀಕರಿಸಿದ ಟಿಕೆಟ್ ವಿತರಣಾ ಪ್ರದೇಶ ನಿರ್ಮಿಸಲಾಗಿದೆ.
ನವೀಕರಣಗೊಂಡ ರೈಲು ನಿಲ್ದಾಣದ ಸಂಕ್ಷಿಪ್ತ ವಿವರ
* ಕುಡಿಯಲು ನೀರಿನ ವ್ಯವಸ್ಥೆ
* ಶೌಚಾಲಯಗಳು
* 2 ಲಿಫ್ಟ್‌ಗಳು
* 2 ಎಸ್ಕಲೇಟರ್‌ಗಳು
* 12 ಮೀಟರ್ ಅಗಲದ FOB
* ವಿಶಾಲ ಕೋಣೆ
* ವೈಫೈ ವ್ಯವಸ್ಥೆ
* ವಿಶ್ರಾಂತಿ ಕೊಠಡಿ
* ವರ್ಧಿತ ಪರಿಚಲನಾ ಪ್ರದೇಶ
* ಸಿಗ್ನೇಜ್ ಬೋರ್ಡ್‌ಗಳು
* ಕೋಚ್ ಮಾರ್ಗದರ್ಶನ ಪ್ರದರ್ಶನ ಫಲಕಗಳು
* ವ್ಯಾಂಗ ಸ್ನೇಹಿ ವ್ಯವಸ್ಥೆ
* ಎಲ್ಲ ಅಗತ್ಯ ಮೂಲ ಸೌಕರ್ಯಗಳ ಸಹಿತ ಪುನರಾಭಿವೃದ್ಧಿ
* ಒಟ್ಟು ಖರ್ಚು 23 ಕೋಟಿ ರೂಪಾಯಿ












Click it and Unblock the Notifications