ಗದಗದಲ್ಲಿ ಗುತ್ತಿಗೆದಾರನಿಂದ ಲಂಚ ಪಡೆಯುತ್ತಿರುವ ವೇಳೆ ಜೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆ
ಗದಗ, ಮೇ, 11: ಗುತ್ತಿಗೆರಾದರನಿಂದ ಲಂಚ ಪಡೆಯುತ್ತಿರುವ ವೇಳೆ ಜೂನಿಯರ್ ಇಂಜಿನಿಯರ್ ಲೋಕಾಯುಕ್ತ ಬಲೆಗೆ ಬಿದ್ದಿರುವವ ಘಟನೆ ಗದಗದಲ್ಲಿ ನಡೆದಿದೆ.
ಗುತ್ತಿಗೆದಾರನ ಬಳಿ ಲಂಚ ಪಡೆಯುತ್ತಿದ್ದ ವೇಳೆ ಜೆ.ಇ.ವಿರೇಂದ್ರ ಸಿಂಗ್ ಕಾಟೆವಾಲೆ ಎಂಬುವವರನ್ನು ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಬಲೆಗೆ ಕೆಡವಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜೆ.ಇ.ವಿರೇಂದ್ರ ಅವರು ನಗರಸಭೆ ವ್ಯಾಪ್ತಿಯ ಕಾಮಗಾರಿಯ ಬಿಲ್ ಪಡೆಯಲು ಗುತ್ತಿಗೆದಾರನ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಗುತ್ತಿಗೆದಾರನಿಂದ 1 ಲಕ್ಷ 50 ಸಾವಿರ ರೂಪಾಯಿ ಹಣ ಪಡೆದಿದ್ದಾರೆ. ನಂತರ ಆ ಹಣವನ್ನು ವಾಹನದಲ್ಲಿ ಇಡುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಜೆ.ಇ.ವಿರೇಂದ್ರ ಅವರನ್ನು ಬಲೆಗೆ ಕೆಡವಿದ್ದಾರೆ ಎನ್ನಲಾಗಿದೆ.
ಲೋಕಾಯುಕ್ತ ಎಸ್.ಪಿ.ಸತೀಶ್ ಎಸ್ ಚಿಟಗುಬ್ಬಿ ನೇತೃತ್ವದಲ್ಲಿ ಸಿಪಿಐ ರವಿ ಪುರುಷೋತ್ತಮ, ಪಿಎಸ್‌ಐ ಅಜಿತ್ ಕಲಾದಗಿ ಅವರು ಜೆ.ಇ.ವಿರೇಂದ್ರ ಅವರ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡಿದ್ದಾರೆ.

ಜೆಸ್ಕಾಂ ಎಇಇ ಮನೆ ಮೇಲೆ ಲೋಕಾಯುಕ್ತ ದಾಳಿ
ಮತ್ತೊಂದೆಡೆ ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆ ಜೆಸ್ಕಾಂ ಎಇಇ ಆಗಿರುವ ಹುಸೇನ್ ಸಾಬ್ ಅವರ ಮನೆ ಮೇಲೆ ಇತ್ತೀಚೆಗಷ್ಟೇ ಲೋಕಾಯುಕ್ತ ದಾಳಿ ನಡೆಸಿತ್ತು. ಬೆಂಗಳೂರು ಮತ್ತು ಬಳ್ಳಾರಿಯ ಲೋಕಾಯುಕ್ತ ತಂಡಗಳು ಹುಸೇನ್ ಸಾಬ್ ಅವರ ಬಳ್ಳಾರಿ ಬುಡಾ ಕಾಂಪ್ಲೆಕ್ಸ್‌ನಲ್ಲಿರುವ ಕಚೇರಿ, ರಾಘವೇಂದ್ರ ಕಾಲೋನಿಯಲ್ಲಿರುವ ಮನೆ ಮತ್ತು ಹುಟ್ಟೂರು ಶಿಡಿಗಿನಮೊಳದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದವು.
ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ
ಇನ್ನು ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ನಡೆಸಿತ್ತು. ಅಲ್ಲದೆ ಇದೇ ವೇಳೆ ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಕೆಲ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗಿತ್ತು.
ಹಾಗೆಯೆ ಬಿಬಿಎಂಪಿ ಎಡಿಟಿಪಿ ಗಂಗಾಧರಯ್ಯ ಅವರ ಮನೆ ಮೇಲೆ ದಾಳಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಯಲಹಂಕದಲ್ಲಿರುವ ಗಂಗಧರಯ್ಯ ನಿವಾಸದಲ್ಲಿ ಪರಿಶೀಲನೆ ಮಾಡಲಾಗುತ್ತು. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ದಾಳಿ ಮಾಡಿತ್ತು. ಲೋಕಾಯುಕ್ತ ಎಸ್‌ಪಿ ಅಶೋಕ ನೇತೃತ್ವದಲ್ಲಿ ಈ ದಾಳಿ ಮಾಡಲಾಗಿದ್ದು, ಆಸ್ತಿ, ತೆರಿಗೆ ಹಣದ ಬಗ್ಗೆ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿತ್ತು.
ಗ್ರಾಮ ಸಹಾಯಕನ ಬಂಧನ
ಇನ್ನು ನಿವೇಶನ ಹಕ್ಕುಪತ್ರದ ಚಕ್ಕುಬಂಧಿ ಸರಿಪಡಿಸಿಕೊಡುತ್ತೇನೆ ಎಂದು ಗ್ರಾಮ ಸಹಾಯಕನೋರ್ವ ಮಹಿಳೆಯೊಬ್ಬರಿಂದ 7 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ. ಈ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಗ್ರಾಮ ಸಹಾಯಕನನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ಇತ್ತೀಚೆಗಷ್ಟೇ ನಡೆದಿತ್ತು.
ಗ್ರಾಮ ಸಹಾಯಕ ಶಿವಣ್ಣ ಬಂಧಿತ ಆರೋಪಿಯಾಗಿದ್ದು, ಈತ ಪಟ್ಟಣ ಸಮೀಪದ ಶ್ರೀರಾಂಪುರ ಗ್ರಾಮದ ನಿವಾಸಿ ಸರೋಜಮ್ಮ ಎಂಬುವರಿಂದ ಲಂಚ ಸ್ವೀಕರಿಸುತ್ತಿದ್ದ. ಈ ವೇಳೆ ಈತ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸರೋಜಮ್ಮ ಅವರು ಪತಿ ಗೋವಿಂದಪ್ಪ ಎಂಬುವವರ ಹೆಸರಿನಲ್ಲಿದ್ದ ನಿವೇಶನದ ಹಕ್ಕುಪತ್ರವನ್ನು 94(ಸಿ) ಯೋಜನೆಯಡಿ 2022, ಆಗಸ್ಟ್ 3ರಂದು ಪಡೆದಿದ್ದರು. ಅದರ ಚಕ್ಕುಬಂಧಿಯಲ್ಲಿದ್ದ ಲೋಪ ಸರಿಪಡಿಸಲು 2022, ಡಿಸೆಂಬರ್ 8ರಂದು ಅರ್ಜಿ ಸಲ್ಲಿಸಿದ್ದರು.
ಈ ಸಂಬಂಧ ಪಟ್ಟಣದಲ್ಲಿರುವ ಕಸಬಾ ಹೋಬಳಿ ರಾಜಸ್ವ ನಿರೀಕ್ಷಕರ ಕಚೇರಿಯಲ್ಲಿದ್ದ ಗ್ರಾಮ ಸಹಾಯಕ ಶಿವಣ್ಣ ಎಂಬಾತ, ಚಕ್ಕುಬಂಧಿ ಸರಿಪಡಿಸಲು ಸರ್ವೇಯರ್, ಶಿರಸ್ತೇದಾರ್, ತಹಶೀಲ್ದಾರ್ ಬಳಿ ಓಡಾಡಿ ಕೆಲಸ ಮಾಡಿಸಬೇಕು. ಆದ್ದರಿಂದ 10 ಸಾವಿರ ರೂಪಾಯಿ ಹಣ ನೀಡಬೇಕು ಎಂದು ಸೂಚಿಸಿದ್ದರು. ಸರೋಜಮ್ಮ ಮುಂಗಡವಾಗಿ ಶಿವಣ್ಣನಿಗೆ 3 ಸಾವಿರ ರೂಪಾಯಿ ಹಣವನ್ನು ನೀಡಿದ್ದರು.
ಗ್ರಾಮ ಸಹಾಯಕ ಶಿವಣ್ಣ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬಗ್ಗೆ ಸರೋಜಮ್ಮ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಈ ದೂರಿನ ಮೇರೆಗೆ ಬುಧವಾರ ಸರೋಜಮ್ಮ ಅವರಿಂದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾ ಎಂದು ತಿಳಿದುಬಂದಿದೆ. ಬಂಧಿತ ಶಿವಣ್ಣ ಅವರನ್ನು ರಾತ್ರಿ ಚಿಕ್ಕಮಗಳೂರು ನ್ಯಾಯಾಲಯದಲ್ಲಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು ಎನ್ನುವ ಮಾಹಿತಿ ಲಭ್ಯವಾಗಿತ್ತು.












Click it and Unblock the Notifications