Get Updates
Get notified of breaking news, exclusive insights, and must-see stories!

Gadag Constituency : ಗದಗದಲ್ಲಿ ಪಾಟೀಲ್‌ ಮನೆತನದ ಹಿಡಿತವನ್ನು ಬಗ್ಗುಬಡಿಯುವುದೇ ಬಿಜೆಪಿ- ವರದಿ,ವಿಶ್ಲೇಷಣೆ

ಈ ಬಾರಿ ಗದಗ ವಿಧಾನಸಭಾ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಿಡಿತವಿದೆ. ಇಲ್ಲಿ ಬಿಜೆಪಿಯ ಬಲವು ಹೆಚ್ಚುತ್ತಿದೆ. ಇದಕ್ಕೆ ಸಂಬಂಧಿಸಿದ ವರದಿ, ವಿಶ್ಲೇಷಣೆ ಓದಿ.

ಗದಗ, ಫೆಬ್ರವರಿ 18: ಕರ್ನಾಟಕದ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳಲ್ಲಿ ಗದಗವೂ ಒಂದು. ಮುದ್ರಣ ಕಾಶಿ ಎಂದೇ ಹೆಸರುವಾಸಿಯಾಗಿರುವ ಗದಗ ನಗರವು ಐತಿಹಾಸಿಕ ಮಹತ್ವವನ್ನೂ ಪಡೆದಿದೆ. ಸಂಗೀತ, ಸಾಹಿತ್ಯ, ಸಂಸ್ಕೃತಿ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಗದಗ ನಗರವು ತನ್ನದೇ ಆದ ಪರಂಪರೆ ಹೊಂದಿದೆ.

ವೀರ ನಾರಾಯಣ ದೇವಸ್ಥಾನ, ತ್ರಿಕುಟೇಶ್ವರ ದೇವಾಲಯ, ಪುಟ್ಟರಾಜ ಕವಿ ಗವಾಯಿಗಳ ಮಠ ಹಾಗೂ ತೋಂಟದಾರ್ಯ ಮಠಗಳು ಗದಗ ಕ್ಷೇತ್ರ ಜನತೆಗೆ ಆಧ್ಯಾತ್ಮಿಕ ಆಸರೆಯನ್ನೂ ನೀಡಿವೆ. ಕುಮಾರವ್ಯಾಸ, ಭೀಮಸೇನ ಜೋಶಿ, ಹುಯಿಲಗೋಳ ಹುಯಿಲಗೋಳ ನಾರಾಯಣ ರಾವ್, ಪಂಡಿತ ಪುಟ್ಟರಾಜ ಕವಿ ಗವಾಯಿಗಳು ಹಾಗೂ ಸುನೀಲ್ ಜೋಶಿ ತರಹದ ಖ್ಯಾತನಾಮರು ಗದಗದಲ್ಲಿ ಜನಿಸಿದ್ದಾರೆ.

ಗದಗ ಕ್ಷೇತ್ರದ ಜನರ ಪ್ರಮುಖ ಉದ್ಯೋಗ ಕೃಷಿಯಾಗಿದೆ. ಗೋಧಿ, ಜೋಳ, ಮೆಕ್ಕೆ ಜೋಳ, ಕಡಲೆಕಾಯಿ, ಸೂರ್ಯಕಾಂತಿ, ಕಬ್ಬು, ಹತ್ತಿ, ಮಾವು, ಸಪೋಟಾ, ಬನಾನಾ, ದ್ರಾಕ್ಷಿಗಳು, ಟೊಮೆಟೊ, ಈರುಳ್ಳಿ, ಬದನೆ ಹಾಗೂ ಮೆಣಸಿನಕಾಯಿಯಂತಹ ಬೆಳೆಗಳನ್ನು ಗದಗ ಕ್ಷೇತ್ರದಲ್ಲಿ ಹೆಚ್ಚು ಬೆಳೆಯುತ್ತಾರೆ. ನೀರಾವರಿ ಪ್ರದೇಶದ ಹೆಚ್ಚಳದಿಂದ ಈ ಕ್ಷೇತ್ರದ ಉತ್ಪಾದಕತೆ ಸುಧಾರಿಸಿದೆ. ಗದಗ ಕ್ಷೇತ್ರವು ಕೃಷಿ ಬೆಳೆಗಳ ವ್ಯಾಪಾರೋದ್ಯಮಕ್ಕೆ ಉತ್ತಮ ಮೂಲ ಸೌಕರ್ಯವನ್ನು ಹೊಂದಿದೆ.

ಗದಗ ಕ್ಷೇತ್ರದಲ್ಲಿ ಬಿಂಕದಕಟ್ಟಿ ಮೃಗಾಲಯ ಹಾಗೂ ಕಪ್ಪತ ಗುಡ್ಡ ಪ್ರದೇಶಗಳು ಹಸಿರು ವಲಯದಿಂದ ಕೂಡಿವೆ. ವಿವಿಧ ರೀತಿಯ ಪ್ರಭೇದದ ಪ್ರಾಣಿ ಹಾಗೂ ಸಸ್ಯಗಳಿಗೆ ನೆಲೆಯಾಗಿರುವ ಬಿಂಕದಕಟ್ಟಿ ಮೃಗಾಲಯವು ಕಾಡು ಪ್ರಾಣಿಗಳಿಗೆ ಪುನರ್ವಸತಿಯನ್ನು ಒದಗಿಸಿದೆ. ಇದು ಸಂಶೋಧನಾ ಅಧ್ಯಯನ ಕೇಂದ್ರವಾಗಿದೆ. ಕಪ್ಪತ ಗುಡ್ಡವು ಗದಗ ನಗರದ ದಕ್ಷಿಣ ಭಾಗದಲ್ಲಿದೆ. ಈ ಪ್ರದೇಶವು ಅನೇಕ ಗಿಡಮೂಲಿಕೆಗಳ ಔಷಧಿ ಸಸ್ಯಗಳಿಗೆ ಹೆಸರುವಾಸಿಯಾಗಿದೆ.

 ಗದಗ ಕ್ಷೇತ್ರದ ರಾಜಕೀಯ ಇತಿಹಾಸ

ಗದಗ ಕ್ಷೇತ್ರದ ರಾಜಕೀಯ ಇತಿಹಾಸ

ಗದಗ ಕ್ಷೇತ್ರವು ರಾಜಕೀಯವಾಗಿ ಪ್ರತಿಷ್ಠಿತ ಕ್ಷೇತ್ರವಾಗಿದೆ. ಕಳೆದ 50 ವರ್ಷಗಳಿಂದ ಈ ಕ್ಷೇತ್ರದ ಮೇಲೆ ಹುಲಕೋಟಿಯ ಪಾಟೀಲ್‌ ಮನೆತನದ ಬಿಗಿಹಿಡಿತವಿದೆ. ಮಾಜಿ ಸಹಕಾರಿ ಸಚಿವ ಕೆಎಚ್‌ ಪಾಟೀಲ್‌, ಅವರ ಅಣ್ಣನ ಮಗ ಡಿಆರ್‌ ಪಾಟೀಲ್‌ ಹಾಗೂ ಕೆಚ್‌ ಪಾಟೀಲ್‌ ಅವರ ಪುತ್ರ (ಈಗಿನ ಶಾಸಕ) ಎಚ್‌ಕೆ ಪಾಟೀಲ್‌ ಅವರೇ ಆರಿಸಿಬಂದಿದ್ದಾರೆ.

2008ರಲ್ಲಿ ಮಾತ್ರ ಬಿಜೆಪಿಯ ಶ್ರಿಶೈಲಪ್ಪ ಬಿದರೂರ ಅವರು ಆಯ್ಕೆಯಾಗಿದ್ದರು. ಕಳೆದ ಎಂಟು ವಿಧಾನಸಭಾ ಚುನಾವಣೆಗಳಲ್ಲಿ ಸರಾಸರಿ 18 ರಿಂದ 30 ಸಾವಿರ ಮತಗಳ ಅಂತರದಿಂದ ಕಾಂಗ್ರೆಸ್‌ ಗೆಲುವು ಸಾಧಿಸಿದೆ. ಆದರೆ, 2018ರಲ್ಲಿ ಕೇವಲ 1,868 ಮತಗಳ ಅಂತರದಿಂದ ಎಚ್‌ಕೆ ಪಾಟೀಲ್‌ ಜಯಗಳಿಸಿದ್ದರು. 2008ರಲ್ಲಿ ಬಿಜೆಪಿ, 1978ರಲ್ಲಿ ಜನತಾ ಪಕ್ಷ, 1967ರಲ್ಲಿ ಸ್ವತಂತ್ರ(ಕೆ.ಎಚ್. ಪಾಟೀಲ) ಅಭ್ಯರ್ಥಿ ಗೆಲವು ಹೊರತುಪಡಿಸಿ 1957ರಿಂದ 11 ಬಾರಿ ಕಾಂಗ್ರೆಸ್ ಜಯಗಳಿಸಿದೆ.

 ಗದಗದಲ್ಲಿ ಕಾಂಗ್ರೆಸ್‌ನ ಹಿಡಿತ

ಗದಗದಲ್ಲಿ ಕಾಂಗ್ರೆಸ್‌ನ ಹಿಡಿತ

ಈ ಬಾರಿಯ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ನೇರ ಪೈಪೋಟಿ ಇದೆ. ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ಕಾಂಗ್ರೆಸ್ ಪಕ್ಷಕ್ಕೆ ಕ್ಷೇತ್ರದಲ್ಲಿ ಹಿಡಿತವಿದೆ. ಮೂರು ಬಾರಿ ಶಾಸಕರಾಗಿದ್ದ ಡಿಆರ್‌ ಪಾಟೀಲ್‌ (ಎಚ್‌ಕೆ ಪಾಟೀಲ್‌ರ ದೊಡ್ಡಪ್ಪನ ಮಗ) ಅವರು ಈ ಕ್ಷೇತ್ರದಲ್ಲಿ ಹೆಚ್ಚು ಜನಪ್ರಿಯರಾಗಿದ್ದಾರೆ. ಎಚ್‌ಕೆ ಪಾಟೀಲ್‌ ಅವರ ಗೆಲುವಿಗಾಗಿ ಈ ಬಾರಿಯೂ ಶ್ರಮಿಸಲಿದ್ದಾರೆ. ಎಪಿಎಂಸಿ, ವಾಣಿಜೋದ್ಯಮ, ವರ್ತಕರು ಮತ್ತು ಗ್ರಾಮೀಣ ಪ್ರದೇಶದಲ್ಲಿ ಕಾಂಗ್ರೆಸ್ಸಿನ ಹಿಡಿತವಿದೆ.

 ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು

ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು

ಎಚ್‌ಕೆ ಪಾಟೀಲ್‌ ವಿರುದ್ಧ ಬಿಜೆಪಿಯ ಅನಿಲ ಮೆನಸಿನಕಾಯಿ ಅವರಿಗೆ ಈ ಬಾರಿಯೂ ಟಿಕೆಟ್‌ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ರಾಜು ಕುರಡಗಿ, ವಿಜಯಕುಮಾರ ಗಡ್ಡಿ ಹಾಗೂ ನಾಗೇಶ್ ಹುಬ್ಬಳ್ಳಿ ಅವರೂ ಸಹ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಈ ಬಾರಿ ಎರಡೂ ಪಕ್ಷಗಳ ನಡುವೆ ನೇರ ಹಣಾಹಣಿ ಏರ್ಪಡುವ ಸಾಧ್ಯತೆಗಳು ಹೆಚ್ಚಿವೆ. ಇನ್ನು ಜೆಡಿಎಸ್‌ ಹಾಗೂ ಆಮ್‌ ಆದ್ಮಿ ಪಕ್ಷಕ್ಕೆ ಇಲ್ಲಿ ಯಾವುದೇ ನೆಲೆಯಿಲ್ಲ.

 ಗದಗ ಕ್ಷೇತ್ರದಲ್ಲಿ ಬಲಿಷ್ಠವಾಗುತ್ತಿದೆ ಬಿಜೆಪಿ

ಗದಗ ಕ್ಷೇತ್ರದಲ್ಲಿ ಬಲಿಷ್ಠವಾಗುತ್ತಿದೆ ಬಿಜೆಪಿ

ಸ್ವಾತಂತ್ರ್ಯ ನಂತರದ ಇತಿಹಾಸದಲ್ಲಿ ಗದಗ ಕ್ಷೇತ್ರವು ಕಾಂಗ್ರೆಸ್‌ನ ಬಿಗಿಹಿಡತಕ್ಕೆ ಒಳಗಾಗಿದೆ. ಅದರಲ್ಲೂ ಪಾಟೀಲ್‌ ಮನೆತನದ ಸದಸ್ಯರೇ ಈ ಕ್ಷೇತ್ರದಲ್ಲಿ ವ್ಯಾಪಕ ಹಿಡಿತವನ್ನು ಹೊಂದಿದ್ದಾರೆ. ಆದರೆ, 2008 ರಲ್ಲಿ ಬಿಜೆಪಿ ಗೆಲುವು ಸಾಧಿಸುವ ಮೂಲಕ ಕೇಸರಿ ಪಾಳಯವು ಪಾಟೀಲ್‌ ಮನೆತನಕ್ಕೆ ಸೆಡ್ಡು ಹೊಡೆದಿತ್ತು. ಆ ಸಮಯದಲ್ಲಿ ಶ್ರೀರಾಮುಲು ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

ಅವರ ಜನಪ್ರಿಯತೆ ಗದಗದಲ್ಲಿ ಹೆಚ್ಚು ಪ್ರಭಾವ ಬೀರಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿಯ ಶ್ರೀಶೈಲಪ್ಪ ಬಿದರೂರ ಅವರು ಗೆಲುವು ಸಾಧಿಸಿದ್ದರು. ಈಗ ಗದಗ ನಗರಸಭೆಯ ಚುಕ್ಕಾಣಿಯೂ ಬಿಜೆಪಿಗೆ ಹಿಡಿತದಲ್ಲಿದೆ. ಬಿಜೆಪಿ ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಿರುವುದು ಈ ಬೆಳವಣಿಗೆಗಳಿಂದ ತಿಳಿದುಬರುತ್ತದೆ.

ಕ್ಷೇತ್ರದ ಮತದಾರ ವಿವರ (2018ರಲ್ಲಿ ಚುನಾವಣಾ ಆಯೋಗದ ಮಾಹಿತಿಯ ಪ್ರಕಾರ)
ಪುರುಷರು: 1,09,936
ಮಹಿಳೆಯರು: 1,09,616
ಇತರರು: 23
ಒಟ್ಟು: 2,19,575

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+