ಬೊಮ್ಮಾಯಿ ಕೂಡ ಕಾಂಗ್ರೆಸ್ ಪಾರ್ಟಿಗೆ ಸೇರಿಸಿಕೊಳ್ಳಿ ಅಂದಿದ್ರು: ಹಳೆ ಘಟನೆ ನೆನೆದ ಜಗದೀಶ್ ಶೆಟ್ಟರ್
ಗದಗ, ಮೇ 05: ನರಗುಂದದಲ್ಲಿ ನನ್ನ ಸಂಬಂಧಿಕರು ಹಲವು ಜನ ಇದ್ದಾರೆ. ಹಲವಾರು ಬಾರಿ ನರಗುಂದಕ್ಕೆ ಬಂದಿದ್ದೇನೆ. ಆವಾಗ ಬಿಜೆಪಿ ನಾಯಕನಾಗಿ ಬರುತ್ತಿದೆ. ಇಂದು ಕಾಂಗ್ರೆಸ್ ನಾಯಕನಾಗಿ ಬಂದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ, ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಹೇಳಿದರು.
ನರಗುಂದ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಆರ್ ಯಾವಗಲ್ ಪರ ಬಹಿರಂಗ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, 30 ವರ್ಷ ತಪಸ್ಸು ಮಾಡಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೆ. ಅಂತಹ ವ್ಯಕ್ತಿಯನ್ನು ಒತ್ತಾಯ ಪೂರ್ವಕವಾಗಿ ಹೊರಗೆ ಹಾಕಿದರು. ಅವರದ್ದು ಹಿಡನ್ ಅಜೆಂಡಾ. ಷಡ್ಯಂತ್ರ ಮಾಡಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಇಲ್ಲದಂತೆ ಮಾಡಿದರು. ಏ. 12ನೇ ರಂದು ಚುನಾವಣೆ ಉಸ್ತುವಾರಿಗಳು ನನಗೆ ಕಾಲ್ ಮಾಡಿ ಹೇಳಿದಾಗ ಬಹಳ ಅಚ್ಚರಿ ಆಯ್ತು. ಜೊತೆಗೆ ಬೇಜಾರು ಆಯ್ತು ಎಂದರು.

' ಜಗದೀಶ್ ಶೆಟ್ರೆ ಪಕ್ಷ ತೀರ್ಮಾನ ಮಾಡಿದೆ, ನಿಮಗೆ ಟಿಕೆಟ್ ಇಲ್ಲ, ನೀವು ತಕ್ಷಣವೇ ಪತ್ರಿಕಾ ಹೇಳಿಕೆ ಕೊಟ್ಟು ರಾಜಕೀಯದಿಂದ ನಿವೃತ್ತಿ ಆಗಬೇಕು. ಒಂದು ಲೆಟರ್ ಕಳಿಸಿ ಕೊಡ್ತೀನಿ, ಅದಕ್ಕೆ ಸಹಿ ಮಾಡಿ ಕಳಿಸಿ ಅಂದ್ರು'. ಈ ರೀತಿ 30 ವರ್ಷದಿಂದ ಪಕ್ಷಕ್ಕಾಗಿ ದುಡಿದ ಲೀಡರ್‌ಗೆ ಅಪಮಾನ ಮಾಡುವುದು ಎಷ್ಟು ಸರಿ? ಎಂದು ಪತ್ನಿಸಿದರು.
10 ದಿನ ಮುನ್ನ ಹೇಳಬಹುದಾಗಿತ್ತು, ಕರೆದು ಕೂರಿಸಿ ಮಾತನಾಡಬಹುದಾಗಿತ್ತು. ಗೌರವಯುತವಾಗಿ ಮಾತನಾಡಿಸಿದ್ದಾರೆ, ನಾನು ಗೌರವಯುತವಾಗಿ ರಾಜಕೀಯ ನಿವೃತ್ತಿ ಆಗುತ್ತಿದ್ದೆ. ಬೆಳಗ್ಗೆ ಏಳು ಘಂಟೆಗೆ ಕರೆ ಮಾಡಿ ಸಣ್ಣ ಹುಡುಗನಿಗೆ ಹೇಳಿದಂಗೆ ಹೇಳಿರುವುದಕ್ಕೆ ಬಹಳ ಬೇಜಾರಾಯಿತು.
ಯಾವ ಕಾರಣಕ್ಕಾಗಿ ನೀವು ಟಿಕೆಟ್ ನೀಡಲ್ಲ ಅಂತ ಕೇಳಿದೆ. 75 ಆದೋರಿಗೆ ಟಿಕೆಟ್ ಕೊಟ್ಟೀರಿ, ಜಗದೀಶ್ ಶೆಟ್ಟರ್‌ಗೆ ಯಾಕೆ ಇಲ್ಲ? ನನ್ನ ಮೇಲೆ ಭ್ರಷ್ಟಾಚಾರ ಕೇಸ್ ಇವೆಯೇ? ಯಾವುದೇ ಆರೋಪ ಇಲ್ಲ. ಯಾವುದಾದರೂ ರೌಡಿ ಶೀಟರ್, ಕ್ರಿಮಿನಲ್ ಕೇಸ್? ಯಾವುದು ಇಲ್ಲ. ಸಿಡಿ ಅದಾವೇನು ಅಂತಾ ಕೇಳಿದೆ. ಆರು ಜನ ಮಂತ್ರಿಗಳ ಸಿಡಿ ಅದಾವು, ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ. ಅವರಿಗೆ ಟಿಕೆಟ್ ಕೊಟ್ಟೀರಿ, ಜಗದೀಶ್ ಶೆಟ್ಟರ್‌ಗೆ ಯಾಕೆ ಇಲ್ಲ? ಅಂತಲೂ ಕೇಳಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಚಿತ್ತಾಪುರದಲ್ಲಿ ರಾಠೋಡ್ ಎನ್ನೋರಿಗೆ ಟಿಕೆಟ್ ಕೊಟ್ಟಿದ್ದಾರೆ. ಅವರ ಮೇಲೆ ಎಂಭತ್ತು ಕೇಸ್ ಇವೆ. ರೌಡಿಶೀಟರ್ ಇದ್ದಾರೆ. ಒಬ್ಬ ಸಚ್ಚಾರಿತ್ರ್ಯ ಉಳ್ಳ ಜಗದೀಶ್ ಶೆಟ್ಟರ್‌ಗೆ ಟಿಕೆಟ್ ಯಾಕೆ ಇಲ್ಲ? ಎಂದು ಪ್ರಶ್ನೆ ಮಾಡಿದೆ. ಆದರೆ, ಅವರ ಕಡೆ ಯಾವುದೇ ಉತ್ತರ ಬರಲಿಲ್ಲ. ನೀವು ಬೇಡ, ನಿಮ್ಮ ಸೊಸೆಗೆ ಟಿಕೆಟ್ ಕೊಡ್ತೀವಿ ಎಂದು ಹೇಳಿದರು. ಕುಟುಂಬ ರಾಜಕಾರಣ ಬೇಡ ಅಂತೀರಿ ನಮ್ಮ ಸೊಸೆಗೆ ಯಾಕೆ ಕೊಡ್ತೀರಿ? 75 ವರ್ಷ ಇದ್ದೋರಿಗೆ ಬೇಡ ಅಂತೀರಿ 76 ವರ್ಷದವರಿಗೆ ಕೊಟ್ಟೀರಿ? ಎಲ್ಲಿ ಹೋಯಿತು ನಿಮ್ಮ ಪ್ರಿನ್ಸಿಪಲ್? ಎಂದು ಕೇಳಿದೆ.ಆಗಲೂ ಉತ್ತರ ಇಲ್ಲ ಎಂದರು.
ನಮ್ಮ ಜನಕ್ಕೆ ಮತ್ತು ನಮಗೆ ಸ್ವಾಭಿಮಾನಕ್ಕೆ ಧಕ್ಕೆ ಆದಾಗ ನಾನು ತೀರ್ಮಾನ ಮಾಡಿದೆ. ಈ ಸಲ ಚುನಾವಣೆಗೆ ನಿಲ್ಲೋದೇ, ಸ್ಪರ್ಧೆ ಮಾಡೋದೇ ಎಂದು ಹಠ ಹಿಡಿದೆ. ಆಗ ಮತ್ತೆ ರಾಜಿಗೆ ಬಂದರು. ಸಿಎಂ ಸೇರಿ ಮೂರ್ನಾಲ್ಕು ಜನ ನಮ್ಮ ಮನೆಗೆ ಬಂದರು. ನಿಮ್ಮನ್ನು ರಾಜ್ಯಸಭಾ ಸದಸ್ಯ ಮಾಡುತ್ತೇವೆ ಎಂದರು. ನಾನು ಜನರ ಮಧ್ಯೆ ಇದ್ದವನು, ರಾಜ್ಯಸಭಾ ಸದಸ್ಯನಾಗಿ ಮೂಲೇಲಿ ಕೂಡಬೇಕಾ? ಎಂದು ಜಗದೀಶ್ ಶೆಟ್ಟರ್ ಪ್ರಶ್ನಿಸಿದರು.
ನಾನು ಜನರ ಮಧ್ಯ ಇದ್ದವನು ಇಲ್ಲೇ ಸ್ಪರ್ಧೆ ಮಾಡುತ್ತೇನೆ ಅಂದೆ. ಇದು ಕೇವಲ ಜಗದೀಶ್ ಶೆಟ್ಟರ್‌ಗೆ ಆದ ಅನ್ಯಾಯ ಅಲ್ಲ. ಇಡೀ ಈ ಭಾಗಕ್ಕೆ, ಸಮುದಾಯಕ್ಕೆ ಆದಂತಹ ಅನ್ಯಾಯವಿದು. ಒಂದೆರಡು ದಿನ ಹೇಳಿಕೆ ಕೊಡುತ್ತಾರೆ, ಆಮೇಲೆ ಸುಮ್ಮನಾಗ್ತಾರೆ ಅಂದುಕೊಂಡಿದ್ದರು. ನನ್ನ ವೆಲ್ ವಿಶರ್ ಒಂದು ರಾಷ್ಟ್ರೀಯ ಪಕ್ಷದಲ್ಲಿ ಇದೀರಾ ಇನ್ನೊಂದು ರಾಷ್ಟ್ರೀಯ ಪಕ್ಷಕ್ಕೆ ಹೋಗು ಎಂದರು. ಹಾಗಾಗಿ ನಾನು 100 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆದೆ ಎಂದು ವಿವರಿಸಿದರು.
ಕಾಂಗ್ರೆಸ್ ಪಾರ್ಟಿಗೆ ಬದ್ಧನಾಗಿದ್ದೇನೆ. ಬೊಮ್ಮಾಯಿಯವರ ಅವರು ನನ್ನ ಕ್ಷೆತ್ರದಲ್ಲಿ ಓಡಾಡಿದ್ದಾರಂತೆ. ಶೆಟ್ರು ಕಾಂಗ್ರೆಸ್‌ಗೆ ಯಾಕೆ ಹೋದ್ರು ಅಂದ್ರಂತೆ. ಬೊಮ್ಮಾಯಿ ಅವರೇ ನೀವು 10-15 ವರ್ಷದ ಹಿಂದೆ ಬಿಜೆಪಿಗೆ ಬಂದವರು. ಬಿಜೆಪಿಗೆ ಬಂದ ಮೇಲೆ ನೀರಾವರಿ ಸಚಿವರಾದ್ರಿ, ಗೃಹ ಮಂತ್ರಿಯಾದರು, ಆಮೇಲೆ ಮುಖ್ಯಮಂತ್ರಿಯೂ ಆದರು. ಎಲ್ಲಾ ಅಧಿಕಾರವನ್ನು ಉಂಡು ಈಗ ಹಿಂಗೆ ಮಾತಾಡೋದು ಬಿಡಿ ಎಂದರು.
ನಾನೊಂದು ಕೇಳ್ತೀನಿ ಬೊಮ್ಮಾಯಿ ಅವರಿಗೆ, 2012ರಲ್ಲಿ ನಾನು ಸಿಎಂ ಇದ್ದಾಗ ಯಡಿಯೂರಪ್ಪನವರು ಪಾರ್ಟಿ ಬಿಟ್ಟು ಕೆಜೆಪಿ ಮಾಡಿದ್ರು, ರಾಮುಲು ಬಿಎಸ್‌ಆರ್ ಮಾಡಿದರು. ಈ ವೇಳೆ ಇದೇ ಬೊಮ್ಮಾಯಿ ಅವರು ಅಂದು ಕಾಂಗ್ರೆಸ್ ನಾಯಕರಿಗೆ ಭೇಟಿ ಆಗಿ ಬಿಜೆಪಿಯಲ್ಲಿ ನಮಗೆ ಭವಿಷ್ಯ ಇಲ್ಲ, ಕೆಜೆಪಿಗೆ ಅಸ್ತಿತ್ವ ಇಲ್ಲ, ನನ್ನನ್ನು ಕಾಂಗ್ರೆಸ್ ಪಾರ್ಟಿಗೆ ಸೇರಿಸಿಕೊಳ್ಳಿ ಅಂದಿದ್ರು ಎಂದು ಹಳೆಯ ಘಟನಾವಳಿಗಳನ್ನು ಜಗದೀಶ್ ಶೆಟ್ಟರ್ ಬಿಚ್ಚಿಟ್ಟರು.
ಈ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ರಾಜಕೀಯ ಧ್ರುವೀಕರಣ ಆಗುತ್ತಿದೆ. ಸಮುದಾಯದ ಬದಲಾವಣೆ ಆಗುತ್ತಿದೆ. ಇಂದು ಇಷ್ಟು ಜನ ಸೇರಿದ್ದೀರಿ. ಇದೇ ತೋರಿಸುತ್ತಿದೆ. ಕಾಂಗ್ರೆಸ್ ಶಕ್ತಿ, ಕಾಂಗ್ರೆಸ್ ಅಭ್ಯರ್ಥಿ ಬಿಆರ್ ಯಾವಗಲ್ ಅವರ ಶಕ್ತಿ ಇದು. ಇದನ್ನ ಪ್ರಚಾರ ಸಭೆ ಎಂದು ತಿಳಿದುಕೊಂಡಿಲ್ಲ. ಇದು ವಿಜಯೋತ್ಸವ ಸಭೆ ಅಂತಾ ಭಾವಿಸಿರುವೆ ಎಂದರು.
ಎದುರಾಳಿ ಪಕ್ಷದ ಅಭ್ಯರ್ಥಿಗೆ ಹಣ ಬಲ ಬಹಳ ಇದೆ. ಹಣಬಲ, ಗೂಂಡಾಗಿರಿ ಎಲ್ಲಾ ಎದುರಿಸಿ ಗಟ್ಟಿಯಾಗಿ, ಮನಸ್ಸು ಮಾಡಿದರೆ ಬಿ ಆರ್ ಯಾವಗಲ್ ಅವರು ಅತೀ ಹೆಚ್ಚು ಮತದಿಂದ ಗೆಲ್ಲುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ 140-150 ಸ್ಥಾನ ಪಡೆದು ಅಧಿಕಾರಕ್ಕೆ ಬರತ್ತದೆ ಎಂದು ಭವಿಷ್ಯ ನುಡಿದರು.












Click it and Unblock the Notifications