ಗದಗ: ಜಿಮ್ಸ್ ಆಸ್ಪತ್ರೆಯ ಔಷಧ ಉಗ್ರಾಣ ಜಲಾವೃತ, 4 ಕೋಟಿ ನಷ್ಟ
ಗದಗ, ಸೆಪ್ಟೆಂಬರ್, 09: ತಾಲೂಕಿನ ನಾಗಾವಿ ಗ್ರಾಮದ ವ್ಯಾಪ್ತಿಯಲ್ಲಿರುವ ಜಿಮ್ಸ್ ಆಸ್ಪತ್ರೆ ಔಷಧ ಉಗ್ರಾಣಕ್ಕೆ ನೀರು ನುಗ್ಗಿದ್ದು, ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಜಿಮ್ಸ್ ಆಸ್ಪತ್ರೆ ನೆಲ ಮಹಡಿಯಲ್ಲಿರುವ ಮುಖ್ಯ ಡ್ರಗ್ ಸ್ಟೋರ್‌ನಲ್ಲಿ ಮಳೆ ನೀರು ತುಂಬಿದ ಪರಿಣಾಮ ಕೋಟ್ಯಂತರ ಮೌಲ್ಯದ ಔಷಧಿಗಳು, ಮೆಡಿಕಲ್ ಉಪಕರಣಗಳು ಜಲಾವೃತವಾಗಿವೆ.
ಮಳೆರಾಯನ ಆರ್ಭಟದಿಂದ ಪಕ್ಕದಲ್ಲಿರುವ ಗುಡ್ಡದ ನೀರು ಆಸ್ಪತ್ರೆ ನೆಲ ಮಹಡಿಗೆ ನುಗ್ಗಿ ಅಪಾರ ಪ್ರಮಾಣದ ಔಷಧಿಗಳು ಹಾಳಾಗಿವೆ. ಜಿಲ್ಲೆಯಾದ್ಯಂತ ವರುಣ ಅಬ್ಬರಿಸ್ತಿದ್ದು, ಅದರಲ್ಲೂ ನಾಗಾವಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಳೆ ಸುರಿದ ಬಗ್ಗೆ ವರದಿ ಆಗಿದೆ. ಆಸ್ಪತ್ರೆಯ ಔಷಧಿ ಗೋಡೌನ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ, ಔಷಧಿ ಬಾಕ್ಸ್‌ಗಳೆಲ್ಲ ನೀರು ಪಾಲಾಗಿವೆ. ಈವರೆಗೂ ಉಗ್ರಾಣದಲ್ಲಿ ಸುಮಾರು ಮೂರು ಫೀಟ್‌ನಷ್ಟು ನೀರು ಸಂಗ್ರಹ ಆಗಿದೆ. ಗೋಡೌನ್‌ನಲ್ಲಿ ಇರಿಸಿದ್ದ ಸಿರೆಂಜ್, ಸ್ಯಾನಿಟೈಸರ್, ಟ್ಯಾಬ್ಲೆಟ್ ತುಂಬಿದ ಡಬ್ಬ, ಸರ್ಜಿಕಲ್ ಗ್ಲೌಸ್, ಔಷಧ ಬಾಟಲಿಗಳು ನೀರಿನಲ್ಲಿ ತೇಲಾಡಿವೆ.
ಸತತವಾಗಿ 5 ದಿನಗಳ ಕಾಲ ಗೋಡೋನ್‌ನಲ್ಲಿ ತುಂಬಿದ್ದ ನೀರನ್ನು ಹೊರ ಹಾಕಲು ಹರಸಾಹಸ ಪಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಬಂದು ಪಂಪ್‌ಸೆಟ್ ಮೂಲಕ ನೀರು ಖಾಲಿ ಮಾಡುವುದಕ್ಕೆ ಮುಂದಾಗಿದ್ದರು. ಆದರೆ ಚಿಕ್ಕ ವಸ್ತುಗಳು ಪಂಪ್‌ಸೆಟ್ ಪೈಪ್‌ಗೆ ಸಿಲುಕಿ ನೀರು ಮೇಲೆ ಎತ್ತಲು ಸಾಧ್ಯ ಆಗಿರಲಿಲ್ಲ. ಇದರಿಂದಾಗಿ ಜಿಮ್ಸ್ ಆಸ್ಪತ್ರೆಯ ನರ್ಸಿಂಗ್ ಸ್ಟಾಫ್, ಡ್ರಗ್ ಹೌಸ್ ಸಿಬ್ಬಂದಿಗಳೇ ಸೇರಿ ಔಷಧಿಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಮುಂದಾಗಿದ್ದರು.

ಅಂದಾಜು 1 ಕೋಟಿ ರೂಪಾಯಿ ಔಷಧಿ ಜಲಾವೃತ
ಡ್ರಗ್ ಗೋಡೌನ್‌ನಲ್ಲಿ ಅಂದಾಜು 4 ಕೋಟಿ ರೂಪಾಯಿ ಮೌಲ್ಯದ ಔಷಧಿ ಸಂಗ್ರಹವಾಗಿತ್ತು ಎನ್ನಲಾಗಿದೆ. ಅದರಲ್ಲಿ ಸುಮಾರು ಒಂದು ಕೋಟಿ ಮೌಲ್ಯದ ಸಾಮಗ್ರಿ ಹಾಳಾಗಿರುವ ಬಗ್ಗೆಯೂ ಅಂದಾಜಿಸಲಾಗುತ್ತಿದೆ. ವಿಷಯವನ್ನು ತಿಳಿದು ಸ್ಥಳಕ್ಕೆ ಬಂದಿದ್ದ ಜಿಮ್ಸ್ ನಿರ್ದೇಶಕಿ ರೇಖಾ ಸೋನವಣೆ, "ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅನ್ನುವುದು ನೆಮ್ಮದಿಯ ವಿಚಾರವಾಗಿದೆ. ಊಹೆಗೂ ನಿಲುಕದ ರೀತಿಯಲ್ಲಿ ಗೋಡೌನ್‌ಗೆ ನೀರು ನುಗ್ಗಿದೆ. ಮೊದಲು ಔಷಧಿಗಳನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲು ಮುಂದಾಗಿದ್ದೇವೆ. ಬಹುತೇಕ ಔಷಧಿಗಳ ಪ್ಯಾಕೆಟ್ ಏರ್ ಸೀಲ್ ಆಗಿದೆ. ಸಮಿತಿ ರಚನೆ ಮಾಡಿ ಮರುಬಳಕೆ ಮಾಡಬಹುದಾದ ಔಷಧಿಗಳ ಪಟ್ಟಿ ಮಾಡುತ್ತೇವೆ. ಔಷಧಿ ಕೊರತೆ ಆಗದಂತೆ ನೋಡಿಕೊಳ್ಳುತ್ತೇವೆ," ಎಂದರು.
4 ತಿಂಗಳ ಹಿಂದೆಯೇ ಸ್ಥಳಾಂತರಕ್ಕೆ ಶಿಫಾರಸು:
ಆಸ್ಪತ್ರೆ ನೆಲ ಮಹಡಿಯೂ ಇತ್ತೀಚೆಗೆ ಸೋರುತ್ತಿದೆ. ಮಳೆ ಬಂದಾಗ ಸಣ್ಣಮಟ್ಟದಲ್ಲಿ ನೀರು ಹರಿದು ಬರುತ್ತಿತ್ತು. ಹೀಗಾಗಿ ಮುಖ್ಯ ಮತ್ತು ಉಪ ಗೋಡೌನ್‌ಗಳನ್ನ ಶಿಫ್ಟ್ ಮಾಡೋಣ ಅನ್ನುವ ಪ್ರಸ್ತಾಪವನ್ನು ಗೋಡೌನ್ ಅಧಿಕಾರಿಗಳು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು. ಇನ್ನು ಗೌಡೌನ್ ಸ್ಥಳಾಂತರ ಮಾಡದಿರುವುದು ಇಷ್ಟೆಲ್ಲ ಅವಾಂತರಕ್ಕೆ ಕಾರಣವಾಗಿದೆ ಎಂದು ಅಲ್ಲಿನ ಸಿಬ್ಬಂದಿಗಳ ಅಭಿಪ್ರಾಯ ಆಗಿದೆ.

ವೈದ್ಯರು ಬರೆದುಕೊಟ್ಟ ಔಷಧಿಯಲ್ಲಿ ಅರ್ಧದಷ್ಟು ಔಷಧಿಯನ್ನು ಮಾತ್ರ ಜಿಮ್ಸ್‌ನಲ್ಲಿ ಕೊಡುತ್ತರೆ ಎನ್ನುವ ಆರೋಪ ಹಿಂದಿನಿಂದ ಕೇಳಿಬರುತ್ತಿದೆ. ವೈದ್ಯರನ್ನು ಈ ಬಗ್ಗೆ ಕೇಳಿದರೆ ಔಷಧ ಕೊರತೆ ಇದೆ ಎಂದು ಕಾರಣ ಹೇಳುತ್ತಾರೆ. ಇದೀಗ ಔಷಧ ಗೋಡೌನ್‌ನಲ್ಲಿ ನೀರು ತುಂಬಿದ್ದು, ಔಷಧಿ ಕೊರತೆ ಆಗದಂತೆ ಯಾವ ರೀತಿ ನಿಭಾಯಿಸುತ್ತಾರೆ ಎನ್ನುವುದು ಸಾರ್ವಜನಿಕರ ಪ್ರಶ್ನೆ ಆಗಿದೆ.
ಮಲಪ್ರಭಾ ನದಿ ತೀರದ ಜನರು ತತ್ತರ:
ಮತ್ತೊಂದೆಡೆ ಮಲಪ್ರಭಾ ನದಿಯಿಂದ ಅಪಾರ ಪ್ರಮಾಣದ ನೀರು ಹರಿಬಿಡಲಾಗಿದ್ದು, ನರಗುಂದ ಹಾಗೂ ರೋಣ ತಾಲೂಕಿನ ಹಲವಾರು ಹಳ್ಳಿಗಳು ಮುಳಗುಡೆ ಭೀತಿಯಲ್ಲಿವೆ. ಈಗಾಗಲೇ ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮವು ಅರ್ಧಕ್ಕಿಂತ ಹೆಚ್ಚು ಮುಳಗಡೆ ಆಗಿದೆ. ಯಾವುದೇ ದಾರಿಯಿಲ್ಲದೆ ಕೊನೆಗೆ ಗ್ರಾಮಸ್ಥರು ಜಾನುವಾರು ಸಮೇತ ಬೇರೆಡೆಗೆ ವಲಸೆ ಹೋಗಿದ್ದಾರೆ. ಇನ್ನು ಗದಗ ತಾಲೂಕಿನ ನಾಗಾವಿ ಗ್ರಮದ ಬಳಿ ಇರುವ ಜಿಮ್ಸ್ ಆಸ್ಪತ್ರೆಯ ಔಷಧ ಉಗ್ರಾಣವು ಜಲಾವೃತವಾಗಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.












Click it and Unblock the Notifications