ಬಿಂಕದಕಟ್ಟಿ ಮೃಗಾಲಯದಿಂದ ತನ್ನ ಹುಟ್ಟುಹಬ್ಬಕ್ಕೆ ಚಿರತೆ ದತ್ತು ಪಡೆದ 5 ವರ್ಷದ ಪೋರ
ಗದಗ, ಸೆಪ್ಟೆಂಬರ್, 16: ಐದು ವರ್ಷದ ಶೌರ್ಯ ಎಂಬ ಬಾಲಕ ತನ್ನ ಹುಟ್ಟಿದ ದಿನದ ಸಂಭ್ರಮಕ್ಕೆ ಜಿಲ್ಲೆಯ ಬಿಂಕದಕಟ್ಟಿ ಮೃಗಾಲಯದಿಂದ ಚಿರತೆಯನ್ನು ದತ್ತು ಪಡೆದಿದ್ದಾನೆ.
ಗದಗದ ಬಿಂಕದಕಟ್ಟಿ ಮೃಗಾಲಯದ ಭೀಮಾ ಎಂಬ ಚಿರತೆಯನ್ನು ಶೌರ್ಯ ಮರೆಣ್ಣವರ್ ಎಂಬ ಐದು ವರ್ಷದ ಬಾಲಕ ದತ್ತು ಪಡೆದಿದ್ದಾನೆ. ಮೃಗಾಲಯದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಆರ್‌ಎಫ್‌ಓ ಮಹೇಶ್ ಮರೆಣ್ಣವರ್ ಅವರ ಪುತ್ರನ ಐದನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ, ಚಿರತೆಯನ್ನು ದತ್ತು ಪಡೆಯಲಾಗಿದೆ. ನಿಗದಿ ಪಡಿಸಿದ 50 ಸಾವಿರ ರೂಪಾಯಿ ಪಾವತಿಸಿ ವರ್ಷದ ಮಟ್ಟಿಗೆ ಚಿರತೆಯನ್ನು ದತ್ತು ಪಡೆಯಲಾಗಿದೆ. ಹುಟ್ಟಿನಿಂದ ಶೌರ್ಯನಿಗೆ ಚಿರತೆ ಅಂದರೆ ಇಷ್ಟ, ಹಾಗಾಗಿ ಹುಟ್ಟು ಹಬ್ಬದ ಉಡುಗೊರೆ ರೂಪದಲ್ಲಿ ಶೌರ್ಯನಿಗೆ ಚಿರತೆ ದತ್ತು ಪಡೆದಿದ್ದೇನೆ ಎಂದು ಅವರ ತಂದೆ ಮಹೇಶ್ ತಿಳಿಸಿದ್ದಾರೆ.
ಚಿರತೆಯನ್ನು ದತ್ತು ಪಡೆದ 5 ವರ್ಷದ ಪೋರ
ಮಹೇಶ್ ಅರಣ್ಯ ಇಲಾಖೆ ಅಧಿಕಾರಿಯಾಗಿರುವುದರಿಂದ ಶೌರ್ಯ ಅವರಿಗೆ ಪ್ರಾಣಿ, ಪಕ್ಷಿಗಳ ಬಗ್ಗೆ ವಿಶೇಷ ಆಸಕ್ತಿ. ಮಹೇಶ್ ಅವರು ಈ ಹಿಂದೆ ಬ್ಯಾಡಗಿ ರೇಂಜ್‌ನಲ್ಲಿದ್ದಾಗ ಚಿರತೆ ಗಣತಿ, ಕ್ಯಾಮೆರಾ ಅಳವಡಿಸುವ ಕೆಲಸಕ್ಕೆ ಶೌರ್ಯ ಜೊತೆಗೆ ಹೋಗುತ್ತಿದ್ದ. ಅಲ್ಲದೆ ಚಿರತೆಯನ್ನು ರಕ್ಷಣೆ ಮಾಡುವಾಗ, ಸ್ಥಳಕ್ಕೆ ಭೇಟಿ ಕೊಟ್ಟು ಚಿರತೆ ಬಗ್ಗೆ ಆಸಕ್ತಿಯಿಂದ ಮಾಹಿತಿ ಪಡೆಯುತ್ತಿದ್ದ. ಹಾಗಾಗಿ ಮಗನ ಆಸೆಯಂತೆ ಬಿಂಕದಕಟ್ಟಿ ಮೃಗಾಲಯದಲ್ಲಿ ಪ್ರಾಣಿ ದತ್ತು ಪಡೆಯಲಾಗಿದೆ ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಾವಿರ ರೂ.ಯಿಂದ ದತ್ತು ಸ್ವೀಕಾರಕ್ಕೆ ಅವಕಾಶ
ಮಹಾಮಾರಿ ಕೊರೊನಾ ನಂತರ ಪ್ರಾಣಿಗಳ ದತ್ತು ಸ್ವೀಕಾರ ಮಾಡುವುದಕ್ಕೆ ಜನರು ಹೆಚ್ಚಿನದಾಗಿ ಆಸಕ್ತಿವಹಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಸ್ವಲ್ಪ ಮಟ್ಟಿಗೆ ದತ್ತು ಸ್ವೀಕಾರ ಮಾಡುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ದತ್ತು ಪ್ರಕ್ರಿಯೆಯಿಂದಾಗಿ ಸುಮಾರು 70 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಒಂದು ಸಾವಿರ ರೂಪಾಯಿಯಿಂದ ದತ್ತು ಪಡೆಯಲು ಅವಕಾಶ ಇದೆ. ಹುಲಿ, ಸಿಂಹಗಳಿಗೆ 2 ಲಕ್ಷ ರೂಪಾಯಿ ಪಾವತಿಸಬೇಕಾಗುತ್ತದೆ. ಆಹಾರ ಕ್ರಮ ನಿರ್ವಹಣೆಗೆ ಅನುಸಾರವಾಗಿ ದರ ನಿಗದಿ ಮಾಡಲಾಗಿದೆ. ಆಸಕ್ತರು ಮೃಗಾಲಯಕ್ಕೆ ಭೇಟಿ ನೀಡಿ ವಿವರ ಪಡೆಯಬಹುದು. ಚೆಕ್, ಆರ್‌ಟಿಜಿಎಸ್ ಮೂಲಕ ಹಣ ಪಾವತಿಸಿ ರಶೀದಿ ಪಡೆಯಬಹುದು. ಆನ್‌ಲೈನ್ ಮೂಲಕ ದತ್ತು ಸ್ವೀಕಾರ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಇಲಾಖೆಯವರು ಮಾಹಿತಿಯನ್ನು ನೀಡಿದ್ದಾರೆ.












Click it and Unblock the Notifications