'ಜಾತಿ ಗಣತಿ ವರದಿ' ವಿರೋಧಿಸಿದ ಗದಗಿನ ತೋಂಟದಾರ್ಯ ಮಠದ ಶ್ರೀ: ಲಿಂಗಾಯತರ ಸಂಖ್ಯೆ 1.50 ಕೋಟಿ..
ಗದಗ, ಏಪ್ರಿಲ್ 16: ರಾಜ್ಯದಲ್ಲಿ ಜಾತಿ ಗಣತಿ ವರದಿ ಮಂಡನೆ, ಜಾತಿ ಕುರಿತು ಚರ್ಚೆಗಳು ಆಗುತ್ತಿವೆ. ವಿಪಕ್ಷ ನಾಯಕರು ಮಾತ್ರವಲ್ಲದೇ ವಿವಿಧ ಸಮುದಾಯಗಳು, ಸಮಾಜಗಳು ವಿರೋಧಿಸುತ್ತಿದ್ದಾರೆ. ಈ ಸಮೀಕ್ಷೆ ಸರಿಯಲ್ಲ. ಇಷ್ಟು ಹಳೆಯ ಸಮೀಕ್ಷೆಯ ವರದಿ ಜಾರಿ ಸರಿಯಲ್ಲ ಎಂದಿದ್ದಾರೆ. ಇದೀಗ ಜಾತಿ ಗಣತಿ ವರದಿ ಕುರಿತು ಗದಗಿನ ತೋಂಟದಾರ್ಯ ಮಠದ ಡಾ. ಪೀಠಾಧಿಪತಿಗಳಾದ ತೋಂಟದ ಸಿದ್ಧರಾಮ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬುಧವಾರ ಮಾತನಾಡಿರುವ ಶ್ರೀಗಳು, ರಾಜ್ಯ ಸರ್ಕಾರ ಮಾಡಿರುವ ಈ ಜಾತಿ ಗಣತಿ ವರದಿಯಲ್ಲಿ ಲಿಂಗಾಯತರಿಗೆ ಅನ್ಯಾಯವಾಗಿದೆ. ಜಾತಿ ಗಣತಿಯ ವರದಿ ಸಾರ್ವಜನಿಕರಲ್ಲಿ ಸಂದೇಹ ಹುಟ್ಟು ಹಾಕಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ರಾಜ್ಯ ಸರ್ಕಾರವು ಇನ್ನೊಮ್ಮೆ ಸಮೀಕ್ಷೆ ನಡೆಸಿ ಮತ್ತೊಮ್ಮೆ ಜಾತಿ ಗಣತಿ ವರದಿ ಸಿದ್ದಪಡಿಸಬೇಕು ಎಂದು ಆಗ್ರಹಿಸಿದರು.

ಸುಮಾರು ಏಳೆಂಟು ವರ್ಷಗಳ ಹಿಂದೆ ಜಾತಿ ಗಣತಿ ಸಿದ್ದಪಡಿಸಿದ್ದಾರೆ. ಆ ಜಾತಿ ಗಣತಿ ವರದಿ ಸಮರ್ಪಕವಾಗಿ ಇಲ್ಲ. ಆ ವರದಿಯನ್ನು ಸಿದ್ದಪಡಿಸಿದ ವ್ಯಕ್ತಿಗಳು ಕರ್ನಾಟಕ ಪ್ರತಿಯೊಬ್ಬ ವ್ಯಕ್ತಿಯನ್ನು ಸಂಪರ್ಕಿಸಿಲ್ಲ ಎಂಬ ಆರೋಪ ಎದ್ದು ಕಾಣುತ್ತಿದೆ.
ಕರ್ನಾಟಕದಲ್ಲಿ ಲಿಂಗಾಯತರು ಬಹು ಸಂಖ್ಯಾತರೆಂಬುದು ಎಲ್ಲರಿಗೂ ತಿಳಿದಿದೆ. ನಂತರ ಒಕ್ಕಲಿಗರು ಸೇರಿದಂತೆ ವಿವಿಧ ಜಾತಿಯವರು ಇದ್ದಾರೆ. ಆದರೆ ವರದಿಯಲ್ಲಿ ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ಲಿಂಗಾಯತರು ಮೀಸಲಾತಿಗಾಗಿ ಉಪಜಾತಿಯ ಹೆಸರನ್ನು ಬರೆಸಿರುವುದು ಒಂದು ಕಾರಣವಾಗಿರಬಹುದು.

ಇದೊಂದು ಆಘಾತಕಾರಿ ಸಂಗತಿ: ಶ್ರೀಗಳು
ಈ ದೋಷಪೂರಿತ ವರದಿಯನ್ನ ಸರ್ಕಾರ ಒಪ್ಪಿಕೊಳ್ಳುವದರಿಂದ ಅನೇಕ ಜನ ಸಮುದಾಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಶಿಕ್ಷಣ, ರಾಜಕಾರಣ, ಉದ್ಯೋಗ ಹಾಗೂ ವ್ಯವಸಾಯ ಸೇರಿದಂತೆ ಅನೇಕ ಜಾತಿ ಉಪಜಾತಿಗಳಿಗೆ ಅನ್ಯಾಯ ವಾಗಬಹುದು. ನೂರಾರು ಉಪಜಾತಿಗಳನ್ನು ವರದಿಯಲ್ಲಿ ಕೈ ಬಿಟ್ಟಿರುವುದು ಅತ್ಯಂತ ಆಘಾತಕಾರಿ ಸಂಗತಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಲಿಂಗಾಯರ ಜನಸಂಖ್ಯೆ 1.50 ಕೋಟಿ: ಶ್ರೀಗಳು
ರಾಜ್ಯ ಸರ್ಕಾರ ನ್ಯಾ.ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿಯಿಂದ ಸ್ವೀಕಾರ ಮಾಡಿರುವ ಜಾತಿ ಗಣತಿ ವರದಿ ಸಮರ್ಪಕವಾಗಿಲ್ಲ. ಲಿಂಗಾಯತರ ಸಂಖ್ಯೆ ಅಂದಾಜಿನ ಪ್ರಕಾರ 1 ಕೋಟಿ 50 ಲಕ್ಷಕ್ಕೂ ಹೆಚ್ಚಿದೆ. ಆದರೆ ವರದಿಯಲ್ಲಿ ಲಿಂಗಾಯತ ಸಂಖ್ಯೆ ಕೇವಲ 72 ಲಕ್ಷಕ್ಕೆ ಇಳಿಸಿದ್ದು ಅತ್ಯಂತ ಆಘಾತಕಾರಿ. ಬೇರೆ ಬೇರೆ ಜಾತಿಯವರು ಮುನ್ನಲೆಗೆ ಬಂದಿದ್ದಾರೆ. ಸರ್ಕಾರ ಇನ್ನೊಮ್ಮೆ ಪರಿಶೀಲನೆ ಮಾಡಿ ನೈಜ ವರದಿ ಬಿಡುಗಡೆ ಮಾಡಬೇಕು ಎಂದು ಹೇಳಿದರು.
ವರದಿಯಿಂದ ಲಿಂಗಾಯತರಿಗೆ ಅನ್ಯಾಯ!
ಯಾರಿಗೂ ಅನ್ಯಾಯವಾಗದಂತಹ ಸರ್ಕಾರ ವರದಿಯನ್ನು ಸಿದ್ದಪಡಿಸಿ ಯೋಜನೆ ಪೂರ್ಣಗೊಳಿಸಬೇಕು. ಜಾತಿ ಗಣತಿ ಮಾಡಿರುವ ಉದ್ದೇಶ ಸ್ಪಷ್ಟವಾಗಿಲ್ಲ ಎಂದಿರು ಶ್ರೀಗಳು, ಒಳಗಡೆ ಯಾವುದೋ ಒಂದು ಉದ್ದೇಶ ಇಟ್ಟಿಕೊಂಡು ಮಾಡಿರಬಹುದು. ಜಾತಿ ಗಣತಿ ವರದಿಗೆ ಬಹುತೇಕ ಲಿಂಗಾಯತರ ವಿರೋಧವಿದೆ. ಸಚಿವ ಸಂಪುಟದಲ್ಲಿ ಇರುವಂತಹ ಕಾಂಗ್ರೆಸ್ ನ ಮಂತ್ರಿಗಳಿಂದಲೇ ಈ ವರದಿಗೆ ವಿರೋಧ ಇದೆ. ಲಿಂಗಾಯತ ಸಮುದಾಯಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅನ್ಯಾಯವಾಗಲಿದೆ ಎಂದು ಅವರು ವಿವರಿಸಿದರು.
ಈ ಜಾತಿ ಗಣತಿ ವರದಿ ಕುರಿತು ಸಮಾಜದ ಪ್ರಮುಖರು, ಗಣ್ಯ ವ್ಯಕ್ತಿಗಳು, ಮಠಾಧೀಶರು ಸಮಾಲೋಚನೆ ಮಾಡಿ ಮುಂದಿನ ತೀರ್ಮಾನ ತಗೆದುಕೊಳ್ಳುತ್ತೇವೆ. ಯಾವ ಜಾತಿಗೂ ಅನ್ಯಾಯವಾಗಬಾರದು ಎಂಬುದೇ ತೋಂಟದಾರ್ಯ ಮಠದ ನಿಲುವಾಗಿದೆ.
ರಾಜಕೀಯ ಉದ್ದೇಶದಿಂದ ವರದಿ ಜಾರಿ..
ಸರ್ಕಾರ ಸಾಮಾಜಿಕ ನ್ಯಾಯದ ಪರ ಇರಬೇಕು. ಯಾವುದೇ ರಾಜಕೀಯ ಉದ್ದೇಶದಿಂದ ಜಾತಿ ಗಣತಿ ಜಾರಿ ತರುತ್ತಿರಬಹುದು. ಜಾತಿ ಗಣತಿಯಲ್ಲಿ ಲಿಂಗಾಯತರಿಗೆ ಹೇಗೆ ಅನ್ಯಾಯವಾಗಿದೆ?. ಅದೇ ರೀತಿ ಒಕ್ಕಲಿಗರಿಗೂ ಅನ್ಯಾಯವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಸಚಿವ ಸಂಪುಟದ ಪ್ರಮುಖ ಸಚಿವರೇ ಹೇಳಿದ್ದಾರೆ. ಸಂಪುಟದಲ್ಲಿರುವ ಲಿಂಗಾಯತ ಹಾಗೂ ಒಕ್ಕಲಿಗ ಸಚಿವರು ಈ ವರದಿಯಲ್ಲಿ ದೋಷವಿದೆ, ವರದಿ ಸಮರ್ಪಕವಾಗಿಲ್ಲ. ವರದಿಯನ್ನು ಮರಳಿ ಪರಿಶೀಲನೆ ಮಾಡಬೇಕು ಎಂದು ಆ ಸಚಿವರು ಹೇಳಿದ್ದಾರೆ ಎಂಬುದನ್ನು ಶ್ರೀಗಳು ಸರ್ಕಾರಕ್ಕೆ ನೆನಪಿಸಿದರು.
ಈ ಜಾತಿ ಗಣತಿ ವರದಿಯ ಸಂಪುಟಗಳ ಅಧ್ಯಯನಕ್ಕೆ ಸಚಿವರಿಗೆ ನೀಡಲಾಗಿದೆ. ಬಳಿಕ ಏಪ್ರಿಲ್ 17 ರಂದು ಮಹತ್ವದ ಸಚಿವ ಸಂಪುಟ ಸಬೆ ನಡೆಸಿ ನಿರ್ಧಾರ ತಿಳಿಸಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಈ ಸಂಬಂಧ ಏಪ್ರಿಲ್ 17ರಂದು ಜರುಗಲಿರುವ ವಿಶೇಷ ಸಚಿವ ಸಂಪುಟದಲ್ಲಿ ಏನು ನಿರ್ಧಾರ ಕೈಗೊಳ್ಳುತ್ತಾರೋ ಕಾದು ನೋಡೋಣ ಎಂದು ಶ್ರೀಗಳು ಹೇಳಿದ್ದಾರೆ.












Click it and Unblock the Notifications