ಪ್ರತಿದಿನ ಧೂಳಿನಲ್ಲಿ ಜಳಕ ಮಾಡುತ್ತಿರುವ ಹುಬ್ಬಳ್ಳಿ ಮಂದಿ

By: ಶಂಭು ಹುಬ್ಬಳ್ಳಿ
Subscribe to Oneindia Kannada

ಹುಬ್ಬಳ್ಳಿ,ಜುಲೈ, 13: ಇಷ್ಟು ದಿನ ಬಿಸಿಲಿನ ಬೇಗೆಯಿಂದ ಬಳಲಿದ್ದ ಹುಬ್ಬಳ್ಳಿ ಮಹಾನಗರವು ಮಳೆಗಾಲ ಆರಂಭವಾಗುತ್ತಿದ್ದಂತೆಯೆ ಧೂಳಿನ ಸಮಸ್ಯೆಯಿಂದ ತತ್ತರಿಸಲಾರಂಭಿಸಿದೆ.

ಹೌದು, ಜಿಟಿ ಜಿಟಿ ಮಳೆ ಸುರಿದಾಕ್ಷಣ ಕೆಲ ಹೊತ್ತಿನಲ್ಲಿಯೇ ಬಿಸಿಲು ಮೂಡಿ ರಸ್ತೆಯಲ್ಲಿದ್ದ ಮಣ್ಣು ಧೂಳಾಗಿ ಪರಿವರ್ತಿತವಾಗುತ್ತಿದೆ. ವಾಹನಗಳು ಸಂಚರಿಸುತ್ತಿದ್ದಂತೆಯೇ ನಗರದೆಲ್ಲೆಡೆ ಧೂಳೇ ಧೂಳು ಕಾಣುತ್ತಿದೆ.[ಭಿಕ್ಷೆ ಬೇಡದ ಮಗಳನ್ನು ರೈಲು ನಿಲ್ದಾಣದಲ್ಲಿ ಬಿಟ್ಟು ಹೋದ ತಾಯಿ]

ನಗರದ ಸ್ಟೇಶನ್ ರಸ್ತೆ, ಲ್ಯಾಮಿಂಗ್ಟನ್ ರಸ್ತೆ, ಕಿತ್ತೂರು ಚೆನ್ನಮ್ಮ ವೃತ್ತ, ಧಾರವಾಡ ರಸ್ತೆ, ಗೋಕುಲ ರಸ್ತೆ, ನವಲಗುಂದ ರಸ್ತೆ, ಬೆಂಗಳೂರು ರಸ್ತೆ, ಗದಗ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸುವುದರಿಂದ ಇಲ್ಲಿ ಧೂಳೇಳುವ ಸಾಮಾನ್ಯವಾಗಿದೆ. ರಸ್ತೆ ಪಕ್ಕದ ಅಂಗಡಿಗಳವರಂತೂ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಕುಳಿತುಕೊಳ್ಳುವಂತಾಗಿದೆ. ರಸ್ತೆಯಲ್ಲಿನ ಧೂಳು ಅಂಗಡಿಗಳಲ್ಲಿ ಬರುತ್ತಿರುವುದರಿಂದ ದಿನಕ್ಕಾ ಹತ್ತಾರು ಬಾರಿ ಕಸ ಗುಡಿಸುವುದೇ ಒಂದು ದೊಡ್ಡ ಉದ್ಯೋಗವಾಗಿದೆ ಎಂದು ಅಂಗಡಿಕಾರರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

Unscientific UGD work: Hubballi in Dust

ಇನ್ನು ದ್ವಿಚಕ್ರ ವಾಹನ ಸವಾರರಂತೂ ಕಣ್ಣಿಗೆ ಕನ್ನಡಕ ಹಾಕಿಕೊಂಡೇ ತಿರುಗಬೇಕಾಗಿದೆ. ಇಲ್ಲಾಂದ್ರೆ ಕಣ್ಣಿನಲ್ಲಿ ಮತ್ತು ತಲೆಗೂದಲಲ್ಲಿ ಧೂಳು ತುಂಬಿಕೊಳ್ಳುತ್ತದೆ. ಇದೇ ರೀತಿ ರಸ್ತೆ ಪಕ್ಕದ ಚಹಾ ಅಂಗಡಿಗಳಲ್ಲೂ ಕೂಡ ಜನರು ತಿಂಡಿ-ತಿನಿಸು ತಿನ್ನಲು ಹೆದರುವಂತಾಗಿದೆ. ಏಕೆಂದರೆ ರಸ್ತೆಯ ಧೂಳು ಅಂಗಡಿಗಳೆಲ್ಲಲ್ಲಾ ಆವರಿಸಿಕೊಂಡು ಬಿಡುತ್ತಿದೆ.

ವೈದ್ಯರು ಏನನ್ನುತ್ತಾರೆ:
ರಸ್ತೆಯಲ್ಲಿನ ಧೂಳಿನಿಂದ ಅಸ್ತಮಾದಂತಹ ಕಾಯಿಲೆಗಳು ಬರುತ್ತವೆ ಎನ್ನುತ್ತಾರೆ. ಖ್ಯಾತ ವೈದ್ಯ ಡಾ.ವಿಜಯಕುಮಾರ್. ಹೀಗಾಗಿ ರಸ್ತೆ ಪಕ್ಕದಲ್ಲಿ ಸಂಚಾರ ನಿಯಂತ್ರಿಸುವ ಟ್ರಾಫಿಕ್ ಪೊಲೀಸರು ಮತ್ತು ಹೋಮ ಗಾರ್ಡ್ ಗಳು ಕಡ್ಡಾಯವಾಗಿ ಬಾಯಿ ಮತ್ತು ಮೂಗು ಮುಚ್ಚಿಕೊಳ್ಳುವಂತಹ ಬಟ್ಟೆ ಹಾಕಿಕೊಳ್ಳಬೇಕು. ಜೊತೆಗೆ ಚಿಕ್ಕಮಕ್ಕಳು, ವೃದ್ಧರೂ ಕೂಡ ಕಡ್ಡಾಯವಾಗಿ ಬಾಯಿಗೆ ಬಟ್ಟೆ ಕಟ್ಟಿಕೊಂಡು ಧೂಳು ಬರದಂತೆ ರಕ್ಷಣೆ ಪಡೆದುಕೊಂಡು ಓಡಾಡಬೇಕು ಎಂದು ವೈದ್ಯರು ಹೇಳುತ್ತಾರೆ.[ಹುಬ್ಬಳ್ಳಿ ಕಿಮ್ಸ್ ನಲ್ಲಿ ಪಾರ್ಕಿಂಗ್ ನಿರ್ವಹಣೆ ಬೇಕಿತ್ತಾ?]

Unscientific UGD work: Hubballi in Dust


ಧೂಳು ಬರುತ್ತಿರುವುದೇಕೆ ?:
ಮಳೆ ಬಂದು ನಿಂತ ಕೂಡಲೇ ರಸ್ತೆ ಪಕ್ಕದ ಮಣ್ಣು ವಾಹನಗಳ ಗಾಲಿಗಳಿಗೆ ಅಂಟಿಕೊಂಡು ಆಮೇಲೆ ಆರಿ ಧೂಳಾಗುತ್ತಿದೆ. ಇದಕ್ಕೆ ನಗರದಲ್ಲಿ ನಡೆಯುತ್ತಿರುವ ಯುಜಿಡಿ ಕಾಮಗಾರಿಯೂ ಕಾರಣವಾಗಿದೆ.

ನಗರದಲ್ಲಿ ಎಲ್ಲಿ ನೋಡಿದಲ್ಲಿ ತಗ್ಗು ತೋಡಲಾಗಿದೆ. ತಗ್ಗು ತೋಡಿದ ನಂತರ ಅದನ್ನು ಸರಿಯಾಗಿ ಮುಚ್ಚುತ್ತಿಲ್ಲ. ಇದರಿಂದ ರಸ್ತೆಯೆಲ್ಲಾ ರಾಡಿಯಾಗಿ ಬಿಸಿಲನ ಸಮಯದಲ್ಲಿ ಧೂಳಾಗುತ್ತಿದೆ. ಇದನ್ನು ಪಾಲಿಕೆಯ ಪೌರ ಕಾರ್ಮಿಕರು ಕಸ ಗುಡಿಸಲೂ ಕೂಡ ಆಗುವುದಿಲ್ಲ. ಏಕೆಂದರೆ ಇಡೀ ನಗರವೇ ಯುಜಿಡಿ ಕಾಮಗಾರಿಯಲ್ಲಿರುವುದರಿಂದ ಎಲ್ಲಿ ಅಂತ ನಾವು ಸ್ವಚ್ಛ ಮಾಡಬೇಕು ಎಂದು ಪೌರ ಕಾರ್ಮಿಕರು ಹತಾಶೆಯ ಉತ್ತರ ನೀಡುತ್ತಾರೆ.

ಎಲ್ಲೆಲ್ಲಿ ಕಾಮಗಾರಿ ನಡೆದಿದೆಯೋ ಅಲ್ಲಿ ಡಾಂಬರೀಕರಣವಾದರೆ ಧೂಳಿನ ಸಮಸ್ಯೆ ಪರಿಹಾರವಾಗಬಹುದು. ಆದರೆ ರಸ್ತೆ ಕಾಮಗಾರಿಯನ್ನು ಮಳೆಗಾಲದಲ್ಲಿ ಸಮಯದಲ್ಲಿ ಕೈಗೊಳ್ಳಲಾಗುವುದಿಲ್ಲ. ಮಾಡಿದ ಕಾಮಗಾರಿಯು ಮಳೆಗಾದಲ್ಲಿ ಸರಿಯಾಗಿ ಆಗುವುದಿಲ್ಲ.

ಒಟ್ಟಿನಲ್ಲಿ ಹುಬ್ಬಳ್ಳಿ ನಾಗರಿಕರು ಧೂಳಿನ ಸ್ನಾನ ಮಾಡುವುದು ಇಡೀ ಮಳೆಗಾಲದಾದ್ಯಂತ ತಪ್ಪುವುದಿಲ್ಲ ಎಂಬುದಂತೂ ಸತ್ಯ. ಜಾಗರೂಕತೆ ವಹಿಸಿಕೊಳ್ಳದಿರುವವರು ರೋಗ ರುಜಿನಗಳಿಗೆ ತುತ್ತಾಗುವುದರಲ್ಲಿ ಸಂಶಯವೇ ಇಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Huballi: The city has witnessed Monsoon session but Hubballi facing Dust problem because of UGD works. Hubballi people are facing many health problem.
Please Wait while comments are loading...