ಅಂಡರ್ ಪಾಸ್‌ನಲ್ಲಿ ಸಿಲುಕಿ ಗ್ಯಾಸ್ ಸೋರಿಕೆಯಾಗಿದ್ದ ಟ್ಯಾಂಕರ್ ತೆರವು: ನಿಟ್ಟುಸಿರು ಬಿಟ್ಟ ಧಾರವಾಡ ಜನ
ಧಾರವಾಡ, ಆಗಸ್ಟ್ 17: ಇನ್ನೇನು ಹೆದ್ದಾರಿ ದಾಟಿ ಕಂಪನಿ ಸೇರಬೇಕಾದ ಗ್ಯಾಸ್ ಟ್ಯಾಂಕರ್ ಅಂಡರ್ ಪಾಸ್‌ನಲ್ಲಿ ಸಿಲುಕಿ ಬಹಳ ಅನಾನುಕೂಲತೆಯನ್ನು ಸೃಷ್ಟಿ ಮಾಡಿದ ಘಟನೆ ಧಾರವಾಡದಲ್ಲಿ ನಡೆದಿದ್ದು, ಸತತ 18 ಗಂಟೆಗಳ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದೆ.
ಬುಧವಾರ ಅಧಿಕ ಮಾಸ ಮುಗಿದು, ಬೆನಕನ ಅಮವಾಸ್ಯೆ ಬಂದಿತ್ತು. ಈ ಅಮಾವಾಸ್ಯೆಗೆ ಎಲ್ಲರೂ ಶುಭ ಶ್ರಾವಣಕ್ಕೆ ಪದಾರ್ಪಣೆ ಮಾಡುವ ಸಂದರ್ಭ. ಆದರೆ ಧಾರವಾಡಕ್ಕೆ ಈ ಸಲದ ಬೆನಕನ ಅಮವಾಸ್ಯೆ ದೊಡ್ಡ ಸಂಕಟವೊಂದನ್ನು ತಂದಿಟ್ಟಿತ್ತು. ಅದ್ಯಾರು ಮಾಡಿದ ಪುಣ್ಯದ ಫಲವೋ ಗೊತ್ತಿಲ್ಲ. ಬಹದೊಡ್ಡ ಅವಘಡದಿಂದ ಧಾರವಾಡ ಜಸ್ಟ್ ಮಿಸ್ ಆಗಿದೆ.

ರಸ್ತೆಯ ಅಂಡರ್‌ಪಾಸ್ ಅಡಿಯಲ್ಲಿ ಸಿಲುಕಿರುವ ಟ್ಯಾಂಕರ್, ಅದರಿಂದ ಶಬ್ಧ ಮಾಡುತ್ತ ಹೊರಬರುತ್ತಿರುವ ಗ್ಯಾಸ್ ಕಂಡು ನಿರಂತರ 18 ತಾಸುಗಳ ಕಾಲ ಜೀವ ಕೈಯಲ್ಲಿ ಹಿಡಿದು ಕ್ಷಣ ಕ್ಷಣ ಕಳೆದಿದ್ದ, ಧಾರವಾಡದ ಹತ್ತಾರು ಹಳ್ಳಿಯ ಜನ ಈಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಂ. 4ರ ಹೈಕೋರ್ಟ್ ಬಳಿಯ ಅಂಡರ್‌ಪಾಸ್‌ನಲ್ಲಿ ನಿನ್ನೆ ಎಚ್‌ಪಿ ಕಂಪನಿಯ ಈ ಟ್ಯಾಂಕರ್ ಸಿಲುಕಿ ಬಿಟ್ಟಿದ್ದು, ಅಂಡರ್‌ಪಾಸ್‌ನ ಮೇಲ್ಭಾಗದ ರಸ್ತೆಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗೊದಕ್ಕೆ ಶುರುವಾಗಿತ್ತು. ಇದನ್ನು ಸಮರೋಪಾದಿಯಲ್ಲಿ ತಹಬದಿಗೆ ತರಲು ಸುಮಾರು 18 ಗಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಬೇಕಾಯಿತು.
ಸಣ್ಣದೊಂದು ಬೆಂಕಿ ಕಾಣಿಸಿಕೊಂಡರು ಸಹ ಅವಘಡ ಸಂಭವಿಸುವ ಸಾಧ್ಯತೆ ಇತ್ತು. ಹೀಗಾಗಿ ವಿದ್ಯುತ್ ಕಡಿತಗೊಳಿಸಿ, ಜನರಿಗೆ ಯಾವುದೇ ರೀತಿಯ ಬೆಂಕಿ ಹೊತ್ತಿಸದಂತೆ ಸೂಚಿಸಲಾಗಿತ್ತು. ನಿನ್ನೆ ಸಂಜೆ 6.20ರ ಹೊತ್ತಿಗೆ ಈ ಟ್ಯಾಂಕರ್ ಅಂಡರ್‌ಪಾಸ್ ಅಡಿ ಸಿಲುಕಿತ್ತು. ಸಾಮಾನ್ಯವಾಗಿ ಯಾವುದೇ ದೊಡ್ಡ ವಾಹನಗಳು ಈ ಮಾರ್ಗದಲ್ಲಿ ಬರುವುದಿಲ್ಲ. ಆದರೆ ಚಾಲಕನ ಸಣ್ಣದೊಂದು ಮೈಮರೆವು ಈ ಅವಘಡಕ್ಕೆ ಕಾರಣವಾಗಿದೆ.

ಬೇಲೂರು ಕೈಗಾರಿಕಾ ಪ್ರದೇಶದಲ್ಲಿರೋ ಎಚ್‌ಪಿಸಿಎಲ್ ಘಟಕಕ್ಕೆ ಮುಂಬೈನಿಂದ ಬಂದಿರುವ ಈ ಟ್ಯಾಂಕರ್ ತಲುಪಬೇಕಿತ್ತು. ಆದರೆ ಚಾಲಕ ತೀರಾ ಮುಂದೆ ಬಂದು ಬಿಟ್ಟಿದ್ದು, ಹೀಗಾಗಿ ಹೈಕೋರ್ಟ್ ಮುಂದೆ ಎಡಕ್ಕೆ ಟರ್ನ್ ತೆಗೆದುಕೊಂಡು ಸರ್ವಿಸ್ ರಸ್ತೆಗೆ ಇಳಿದ ಚಾಲಕ ಬಳಿಕ ಈ ಅಂಡರ್‌ಪಾಸ್ ಮೂಲಕ ಆಚೆ ರಸ್ತೆ ಸೇರಲು ಪ್ರಯತ್ನಿಸಿದ್ದಾನೆ. ಈ ವೇಳೆ ರಸ್ತೆಯ ಮೇಲ್ಭಾಗ ತಾಗಿದೆ. ಆ ಕ್ಷಣವೇ ಟ್ಯಾಂಕರ್ ಮೇಲ್ಭಾಗಕ್ಕೆ ಧಕ್ಕೆ ಆಗಿದೆ.
ವಾಲ್ವ ಬಳಿಯಿಂದಲೇ ಗ್ಯಾಸ್ ಸೋರಿಕೆ ಶುರುವಾಗಿಯೇ ಬಿಟ್ಟಿದೆ. ಆ ಕ್ಷಣವೇ ಸ್ಥಳೀಯರು ಪೊಲೀಸರು ಮತ್ತು ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದಾರೆ. ಬೇಲೂರು ಘಟಕದ ಅಗ್ನಿಶಾಮಕ ದಳದ ಸಿಬ್ಬಂದಿ ಕೇವಲ ಹತ್ತೆ ನಿಮಿಷದಲ್ಲಿ ಸ್ಥಳಕ್ಕೆ ಬಂದಿದ್ದಾರೆ. ಸುಮಾರು 18 ಟನ್ ಸಾಮರ್ಥ್ಯದ ಗ್ಯಾಸ್ ಇದ್ದ ಕಾರಣಕ್ಕೆ ಬೇಗ ಖಾಲಿ ಮಾಡುವುದೇ ಸವಾಲಾಗಿತ್ತು. ಹೀಗಾಗಿ ನಿಧಾನವಾಗಿ ಅದೆಲ್ಲ ಗ್ಯಾಸ್ ಖಾಲಿ ಆಗೋವರೆಗೂ ಕಾದು, ಬೆಳಗ್ಗೆ 11ರ ಹೊತ್ತಿಗೆ ನಿರಂತರ 16 ಗಂಟೆಗಳ ಕಾಲ ಗ್ಯಾಸ್ ಖಾಲಿಯಾದಾಗ ಟ್ಯಾಂಕರ್ ಮೇಲ್ಭಾಗಕ್ಕೆ ತೆರಳಿ ವಾಲ್ವಾ ಸರಿಪಡಿಸಿ ಉಳಿದ ಗ್ಯಾಸ್‌ನ್ನು ಮತ್ತೊಂದು ಖಾಲಿ ಟ್ಯಾಂಕರ್‌ಗೆ ಡಂಪ್ ಮಾಡಿ, ಅಲ್ಲಿಂದ ತೆರವು ಮಾಡಿದ್ದಾರೆ.
ಇದೆಲ್ಲವೂ ಆಗುವ ಹೊತ್ತಿಗೆ, ಸುಮಾರು 20 ಗಂಟೆಗಳು ಕಳೆದು ಹೋಗಿದ್ದವು. ಇಷ್ಟು ಸುದೀರ್ಘ ಅವಧಿ ಬಳಿಕ ಎಲ್ಲರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ರಸ್ತೆ ಸಂಚಾರವೂ ಸುಗಮವಾಗಿದೆ ಎಂದು ಅಗ್ನಿಶಾಮಕದಳದ ಅಧಿಕಾರಿ ಅಮೃತ ತಿಳಿಸಿದ್ದಾರೆ.
ಒಟ್ಟಿನಲ್ಲಿ ಚಾಲಕನ ಸಣ್ಣ ಮೈಮರೆವು ದೊಡ್ಡ ಅವಘಡಕ್ಕೆ ಕಾರಣವಾಗಿ ಹೋಗಿದ್ದು, ಅವಘಡ ಸಂಭವಿಸದೇ ಹೋದರೂ ಸುತ್ತಮುತ್ತಲಿನ ಗ್ರಾಮಗಳ ಜನ ಆತಂಕದಲ್ಲಿ 20 ಗಂಟೆಗಳು ಕಳೆಯಬೇಕಾಯಿತು. ಇದರಿಂದ ಅನೇಕರು ತೊಂದರೆ ಅನುಭವಿಸುವಂತಾಗಿದೆ.












Click it and Unblock the Notifications