ಅನಂತ್, ಜೋಶಿ ಸೋಲ್ಸಿ, ಭಾರತ ಗೆಲ್ಸಿ - ಮುತಾಲಿಕ್
ಧಾರವಾಡ, ಏ. 5 : ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದ ಐದೇ ಗಂಟೆಗಳಲ್ಲಿ ಪಕ್ಷದಿಂದ ಹೊರಹಾಕಿಸಿಕೊಂಡ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪಕ್ಷೇತರ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣೆಗೆ ಧುಮುಕಿದ್ದಾರೆ. ಅವರ ಚುನಾವಣಾ ಚಿಹ್ನೆ 'ತುತ್ತೂರಿ' (ಟ್ರಂಪೆಟ್).
ಬೆಂಗಳೂರು ದಕ್ಷಿಣ ಮತ್ತು ಧಾರವಾಡ ಕ್ಷೇತ್ರದಿಂದ ಏಕಕಾಲಕ್ಕೆ ಸ್ಪರ್ಧಿಸುತ್ತಿರುವ ಅವರು ಬಿರುಸಿನ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದಾರೆ. ಬೆಂಗಳೂರಿನಲ್ಲಿ ಆಟೋಗಳ ಮುಖಾಂತರ ಬೀದಿಬೀದಿಗಳಲ್ಲಿ ಮತ ಯಾಚಿಸುತ್ತಿದ್ದರೆ, ಧಾರವಾಡದಲ್ಲಿ ಶನಿವಾರ ಮನೆಮನೆ ಪ್ರಚಾರದಲ್ಲಿ ತೊಡಗಿದ್ದ ಪ್ರಮೋದ್ ಅವರನ್ನು ಒನ್ಇಂಡಿಯಾ ಮಾತನಾಡಿಸಿತು. ಮಾತುಕತೆಯ ಸಾರಾಂಶ ಇಲ್ಲಿದೆ.

ಪ್ರಶ್ನೆ : ನರೇಂದ್ರ ಮೋದಿ ಅವರನ್ನು ಬೆಂಬಲಿಸ್ತೀನಿ ಅಂತೀರಿ, ಅನಂತ್ ಕುಮಾರ್ ಮತ್ತು ಪ್ರಹ್ಲಾದ್ ಜೋಶಿ ಅವರನ್ನು ಸೋಲಿಸುತ್ತೀನಿ ಅಂತೀರಿ. ಏನಿದರ ಅರ್ಥ?
ಪ್ರಮೋದ್ : ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲ ಏಕೈಕ ಮಾಂತ್ರಿಕ ನರೇಂದ್ರ ಮೋದಿ. ಇದು ನಿಸ್ಸಂಶಯ. ನಾನು ಗೆದ್ದರೆ ಮೋದಿಗೆ ಬೆಂಬಲ. ಆದರೆ, ಅನಂತ್ ಮತ್ತು ಜೋಶಿ ಸೋಲಬೇಕು, ಭಾರತ ಗೆಲ್ಲಬೇಕು. ತಾವೊಬ್ಬರೇ ಮಿಂಚಬೇಕು, ಪಕ್ಷದಲ್ಲಿ ಇತರರೆಲ್ಲ ಅವರ ಬಾಲಂಗೋಚಿಗಳಾಗಬೇಕು ಎನ್ನುವುದು ಅನಂತ್ ಕುಮಾರ್ ಅವರ ಧೋರಣೆ. ಈ ಮಾತು ಈಚೆಗೆ ಜೋಶಿ ಅವರಿಗೂ ಸಲ್ಲುತ್ತದೆ. ಅದಕ್ಕೆ ಇವರಿಬ್ಬರನ್ನು ಅವರ ಗರಡಿಯಲ್ಲಿ ಮಣಿಸಬೇಕು. ಈ ಕಾರಣಕ್ಕೆ ಎರಡೂ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದೇನೆ.
ಪ್ರಶ್ನೆ : ಅನಂತ್ ಮತ್ತು ಜೋಶಿ ಗೆದ್ದರೆ ಅವರ ಬೆಂಬಲ ಮೋದಿ ಕಡೆಗೇ ಇದೆಯಲ್ಲ?
ಪ್ರಮೋದ್ : ಅವರು ಗೆಲ್ಲುವುದು, ಮೋದಿಯನ್ನು ಬೆಂಬಲಿಸುವುದು ಚುನಾವಣೆ ಫಲಿತಾಂಶ ಬಂದ ನಂತರ! [ಜೋಶಿ, ಅನಂತ್ ವಿರುದ್ಧ ಕಣಕ್ಕಿಳಿದ ಮುತಾಲಿಕ್]
ಪ್ರಶ್ನೆ : ದೆಹಲಿ ಜಮಾ ಮಸೀದಿಯ ಮೌಲ್ವಿ ಇಮಾಮ್ ಬುಖಾರಿ ಕಾಂಗ್ರೆಸ್ಸಿಗೆ ಮತ ಕೊಡಿ, ಎಸ್ಪಿ ಮತ್ತು ಬಿಎಸ್ಪಿಯನ್ನು ತಿರಸ್ಕರಿಸಿ, ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ಸನ್ನು ಬೆಂಬಲಿಸಿ ಎಂದಿದ್ದಾರೆ. ನಿಮ್ಮ ಕಾಮೆಂಟ್?
ಪ್ರಮೋದ್ : ಅವಕಾಶವಾದಿ ರಾಜಕಾರಣದ ಪರಾಕಾಷ್ಠೆ ಇದು. ಶುಕ್ರವಾರ ನಡೆದ ಸೋನಿಯಾ ಗಾಂಧಿ ಮತ್ತು ಬುಖಾರಿ ಅವರ ಸಭೆ ಕಾಂಗ್ರೆಸ್‌ನ ಕೋಮುವಾದಿ ನೀತಿಗೆ ನಿದರ್ಶನ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿ ಮತ್ತು ಬಹುಜನ ಸಮಾಜವಾದಿ ಪಕ್ಷ ಜೊತೆಗಿನ ಮುಸ್ಲಿಂರ ಹನಿಮೂನ್ ಕೊನೆಯಾಗಿದೆ. ಧರ್ಮ ಮತ್ತು ಜಾತಿಯನ್ನು ಮುಂದಿಟ್ಟುಕೊಂಡು ಮತ ಬ್ಯಾಂಕ್ ಗಾಗಿ ದೇಶವನ್ನು ಒಡೆದು ಆಳುವ ಕಾಂಗ್ರೆಸ್ ನೀತಿಗೆ ಈ ಬೆಳವಣಿಗೆ ಸಾಕ್ಷಿ. ಮೋದಿ ದೇಶ ಒಡಿತಾರೆ ಎಂದು ಟೀಕೆ ಮಾಡುತ್ತಾರೆ, ಇದಕ್ಕೇನನ್ನೋಣ?
ಪೂರ್ವಾಂಚಲದಲ್ಲೂ ಕಾಂಗ್ರೆಸ್ ತನ್ನ ಕೋಮುವಾದಿ ಮುಖವಾಡವನ್ನು ಬಿಚ್ಚಿಟ್ಟಿದೆ. ಮಿಜೋರಾಂ, ನಾಗಾಲ್ಯಾಂಡ್ ನಲ್ಲಿ ಚುನಾವಣಾ ಪ್ರಚಾರ ಮಾಡುವಾಗ ಬೈಬಲ್ ಉದ್ಧರಿಸಿ ಭಾಷಣ ಹೊಡೆಯುತ್ತಾರೆ. ಬೈಬಲ್ ಹೇಳಿದಂತೆ ನಡೆದುಕೊಳ್ಳೋಣ ಎಂದು ಸೋನಿಯಾ ಹೇಳ್ತಾರೆ. ಹೀಗಿರುವಾಗ, ಹಿಂದೂಗಳ ಬಗ್ಗೆ, ಹಿಂದೂತ್ವದ ಬಗ್ಗೆ ಅವರಿಗೆ ಮಾತಾಡಲು ಎಳ್ಳಷ್ಟೂ ಹಕ್ಕಿಲ್ಲ.
ಪ್ರಶ್ನೆ : ಅದ್ಸರಿ, ನೀವು ಎರಡೆರಡು ಕ್ಷೇತ್ರದಲ್ಲಿ ನಿಲ್ಲಲು ಕಾರಣವೇನು?
ಪ್ರಮೋದ್ : ಆಗಲೇ ಹೇಳಿದ ಹಾಗೆ, ಧಾರವಾಡ ನನ್ನ ಕರ್ಮ ಭೂಮಿ, ಬೆಂಗಳೂರು ದಕ್ಷಿಣ ನನ್ನ ಯುದ್ಧ ಭೂಮಿ. ನಮ್ಮ ಸಂಸ್ಕೃತಿ, ನಮ್ಮ ಧರ್ಮ ಮತ್ತು ನಮ್ಮ ದೇಶವನ್ನು ಅಪಾರವಾಗಿ ಪ್ರೀತಿಸುವ ಹಿಂದೂ ಕುಟುಂಬಗಳು ಧಾರವಾಡದಲ್ಲಿವೆ. ಮನೆಮನೆ ಪ್ರಚಾರ ಮಾಡುತ್ತೇನೆ. ಜೋಶಿಯನ್ನು ಮತ್ತು ಕಾಂಗ್ರೆಸ್ಸಿನ ವಿನಯ್ ಕುಲಕರ್ಣಿ ಅವರನ್ನು ಹಿಂದಿಕ್ಕಿ ಸಂಸತ್ತಿಗೆ ಹೋಗುವುದು ನನ್ನ ಗುರಿ. ಬೆಂಗಳೂರು ದಕ್ಷಿಣದಲ್ಲೂ ನನ್ನದು ಇದೇ ಮಂತ್ರ.
ಪ್ರಶ್ನೆ : ನಿಮ್ಮ ಸ್ಪರ್ಧೆಯಿಂದ ಎರಡೂ ಕ್ಷೇತ್ರಗಳಲ್ಲಿ ಹಿಂದೂ ಮತ ವಿಭಜನೆಯಾಗಿ ಕಾಂಗ್ರೆಸ್ಸಿಗೆ ಲಾಭವಾಗುವುದಿಲ್ಲವೆ?
ಪ್ರಮೋದ್ : ಮತ ವಿಭಜನೆಯಾಗುವ ಪ್ರಶ್ನೆಯೇ ಇಲ್ಲ. ಹಿಂದೂ ದೇಶ, ಹಿಂದೂ ವಾದದಲ್ಲಿ ಮತ್ತು ನನ್ನ ವೈಚಾರಿಕ ನಿಲುವಿನಲ್ಲಿ ನಂಬಿಕೆ ಇಟ್ಟ ಮತದಾರರು ನನಗೇ ಮತ ಹಾಕುತ್ತಾರೆ. ಮೋದಿ ಮಂತ್ರವನ್ನು ಅನೇಕರು ಜಪಿಸುತ್ತಿರಬಹುದು. ಆದರೆ, ನನ್ನದು ಯಜ್ಞ. [ಮುತಾಲಿಕ್ ಬಿಜೆಪಿ ಸೇರ್ಪಡೆ ರದ್ದು]
ಪ್ರಶ್ನೆ : ಕರ್ನಾಟಕದಲ್ಲಿ ಯಾವ ಯಾವ ಪಕ್ಷಗಳಿಗೆ ಎಷ್ಟು ಸೀಟು ಸಿಗುತ್ತವೆ?
ಪ್ರಮೋದ್ : ನಾನು ಪೋಲ್ ಸರ್ವೇ ಮಾಡಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಮತ್ತು ಜೆಡಿಎಸ್ ಗೆ ಎಷ್ಟು ಸೀಟುಗಳು ಸಿಕ್ತಾವೆ ಎಂಬುದರ ಬಗ್ಗೆ ನಾನು ಲೆಕ್ಕಾಚಾರ ಹಾಕಿಲ್ಲ. ನಾನು ಗೆಲ್ಲುವುದೇ ನನ್ನ ಲೆಕ್ಕ ಮತ್ತು ಜಮಾ.












Click it and Unblock the Notifications