ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕ್ರಮ: ಜಿ.ಪರಮೇಶ್ವರ
ಧಾರವಾಡ, ಆಗಸ್ಟ್, 18: ನಮ್ಮ ಸರ್ಕಾರ ಹಾಗೂ ಗೃಹ ಇಲಾಖೆ ಇಡೀ ರಾಜ್ಯದಲ್ಲಿ ಡ್ರಗ್ಸ್ ಮೇಲೆ ಯುದ್ಧವನ್ನೇ ಸಾರಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಧಾರವಾಡದಲ್ಲಿ ಹೇಳಿದರು.
ಧಾರವಾಡದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಪೊಲೀಸ್ ಅಧಿಕಾರಿಗಳ ಜೊತೆಗೆ ಸಭೆ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಒಳ್ಳೆಯ ರೀತಿಯಲ್ಲಿ ಜಾರಿ ಬರಬೇಕು, ಏನಾದರೂ ಮಾಡಿ ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಬೇಕು ಅಂತಾ ನಿರ್ಧರಿಸಿದ್ದು, ಇದರಲ್ಲಿ ಪ್ರಮುಖವಾಗಿ ಡ್ರಗ್ಸ್ ಹತ್ತಿಕ್ಕಲು ಪ್ರಯತ್ನ ನಡೆದಿದೆ. ಖಂಡಿತವಾಗಿಯೂ ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು.

ರಾಜ್ಯದಲ್ಲಿ ಗಮನಿಸುವುದಾದರೆ ಧಾರವಾಡ ಜಿಲ್ಲೆಯಲ್ಲಿ ಡ್ರಗ್ಸ್ ಉಪಯೋಗ, ಪೆಡ್ಲರ್‌ಗಳ ಸಂಖ್ಯೆ ಕಡಿಮೆ ಇದೆ. ಇರುವ ಹಾವಳಿ ತಡೆಗೆ ಆರು ತಿಂಗಳ ಗಡುವನ್ನು ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ್ ಅವರಿಗೆ ನೀಡಿದ್ದೇನೆ. ಅಷ್ಟರೊಳಗೆ ಈಗ ಇರುವ ಡ್ರಗ್ಸ್ ಚಟುವಟಿಕೆ ಸಂಪೂರ್ಣ ತಡೆಯಬೇಕು ಅಂತಲೂ ಸೂಚಿಸಿದ್ದೇನೆ ಎಂದರು.
ಧಾರವಾಡ ಜಿಲ್ಲೆಯ ಪೊಲೀಸ್ ಕಾರ್ಯವೈಖರಿ ಪರಿಶೀಲಿಸಿ, ಜಿಲ್ಲೆಯಲ್ಲಿನ ಅನೇಕ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಹಾಗೂ ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ. ಆದರೆ ಅನೇಕ ವಿಚಾರ ಮಾಧ್ಯಮಗಳಿಗೆ ಹೇಳಲು ಆಗುವುದಿಲ್ಲ. ಇಲ್ಲಿ ಗೌಪ್ಯ ಕಾಪಾಡಿಕೊಳ್ಳಬೇಕಾಗುತ್ತದೆ ಎಂದ ಅವರು ಇವೆಲ್ಲವೂ ರಹಸ್ಯವಾಗಿ ಇರುವಂತಹ ವಿಚಾರವಾಗಿವೆ ಎಂದರು.
ಕ್ರಿಮಿನಲ್ ಮತ್ತು ಇತರೆ ಚಟುವಟಿಕೆಗಳ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಧಾರವಾಡ ಜಿಲ್ಲೆ ಅಪರಾಧ ಚಟುವಟಿಕೆಗಳಲ್ಲಿ ಕಡಿಮೆ ಇದೆ. ಇನ್ನು ಹೆಚ್ಚು ಸೈಬರ್ ಕ್ರೈಮ್ ಕೇಸ್‌ಗಳು ನಡೆಯುತ್ತಲೇ ಇವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ, ಸಮಾಜದ ವಿರುದ್ಧ, ಶಾಂತಿ ಕದಡುವ ಪೋಸ್ಟ್ ಮಾಡುವವರ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ. ಹಾಗೆಯೇ ಫೇಕ್ ನ್ಯೂಸ್ ಹರಡುವವರು, ಬ್ಯಾಂಕ್ ಅಕೌಂಟ್ ಪಡೆದು ವಂಚಿಸುವವರ ಮೇಲೆ ಕ್ರಮಕ್ಕೆ ಸೂಚಿಸಿದ್ದೇನೆ ಎಂದರು.
ಈ ವೇಳೆ ಶಾಸಕ ಅಬ್ಬಯ್ಯಾ ಪ್ರಸಾದ್, ಪೊಲೀಸ್ ವರಿಷ್ಠಾಧಿಕಾರಿ ಲೊಕೋಶ್ ಜಗಳಾಸಕರ ಸೇರಿದಂತೆ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.












Click it and Unblock the Notifications