ಧಾರವಾಡ; ಎಸ್‍ಡಿಎಂನಲ್ಲಿ ಎಲ್ಲಾ ಕೋವಿಡ್ ಸೋಂಕಿತರು ಗುಣಮುಖ
ಧಾರವಾಡ, ಡಿಸೆಂಬರ್ 13; ಧಾರವಾಡದ ಎಸ್‍ಡಿಎಂ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 306 ಕೋವಿಡ್ ಸೋಂಕಿತರು ಸಂಪೂರ್ಣವಾಗಿ ಗುಣಮುಖಗೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಎಸ್‌ಡಿಎಂ ಕ್ಯಾಂಪಸ್ ಕೋವಿಡ್ ಹಾಟ್‌ಸ್ಪಾಟ್ ಆಗಿತ್ತು.
ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಈ ಕುರಿತು ಮಾಹಿತಿ ನೀಡಿದ್ದಾರೆ. 306 ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಈಗ ಮಹಾವಿದ್ಯಾಲಯದಲ್ಲಿ ಯಾವುದೇ ಸಕ್ರಿಯ ಕೋವಿಡ್ ಪ್ರಕರಣಗಳು ಇರುವುದಿಲ್ಲ ಎಂದು ಹೇಳಿದ್ದಾರೆ.
"ಎಸ್‍ಡಿಎಂ ಮಹಾವಿದ್ಯಾಲಯದಲ್ಲಿ ಕಂಡು ಬಂದಿದ್ದ ಕೋವಿಡ್ ಸೋಂಕಿತರು ಸಂಪೂರ್ಣ ಗುಣಮುಖರಾಗಿದ್ದು, ಆರೋಗ್ಯವಾಗಿದ್ದಾರೆ. ಡಿಸೆಂಬರ್ 13ರಂದು ಧಾರವಾಡ ಜಿಲ್ಲೆಯಲ್ಲಿ ಕೇವಲ 2 ಕೋವಿಡ್ ಸೋಂಕಿತರು ಕಂಡುಬಂದಿದ್ದು, ಒಟ್ಟು 57 ಸಕ್ರಿಯ ಪ್ರಕರಣಗಳು ಇವೆ ಎಂದು ತಿಳಿಸಿದ್ದಾರೆ.

ನವೆಂಬರ್ 20ರ ಬಳಿಕ ಧಾರವಾಡ ಹೊರವಲಯದಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿತ್ತು. ಒಟ್ಟು 306 ಪ್ರಕರಣಗಳು ಕಂಡುಬಂದ ಹಿನ್ನಲೆಯಲ್ಲಿ ಎಸ್‍ಡಿಎಂ ಹೊರರೋಗಿಗಳ ವಿಭಾಗದ ಸೇವೆ ಸ್ಥಗಿತಗೊಳಿಸಲಾಗಿತ್ತು.
ಎಸ್‌ಡಿಎಂ ಆವರಣಕ್ಕೆ ಸಾರ್ವಜನಿಕರ ಪ್ರವೇಶವನ್ನು ಜಿಲ್ಲಾಡಳಿತ ನಿರ್ಬಂಧಿಸಿತ್ತು. ಸೋಂಕು ಕ್ಯಾಂಪಸ್ ಆವರಣದಿಂದ ಹೊರಗೆ ಹರಡದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಜಿಲ್ಲಾಡಳಿತ ಕ್ಯಾಂಪಸ್ ಸುತ್ತಮುತ್ತಲಿನ ಶಾಲೆಗಳಿಗೆ ರಜೆ ನೀಡಿತ್ತು, ಅಂಗಡಿಗಳನ್ನು ಬಂದ್ ಮಾಡಿತ್ತು.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಎಲ್ಲ ರೋಗಿಗಳ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ಬಳಿಕ ಮನೆಗೆ ಕಳಿಸಬೇಕು. ನೆಗೆಟಿವ್ ವರದಿಯೊಂದಿಗೆ ಬಿಡುಗಡೆಯಾದ ವ್ಯಕ್ತಿಗಳು 7 ದಿನಗಳ ಕಾಲ ಹೋಂ ಐಸೋಲೇಷನ್‍ನಲ್ಲಿ ಇರಬೇಕು. 7 ದಿನಗಳ ಬಳಿಕ ಜಿಲ್ಲಾಡಳಿತ ಮತ್ತೊಮ್ಮೆ ಅವರ ಕೋವಿಡ್ ತಪಾಸಣೆ ಮಾಡಬೇಕು ಎಂದು ಸೂಚನೆ ಕೊಡಲಾಗಿತ್ತು.
ಲಸಿಕಾಕರಣಕ್ಕೆ ಉತ್ತಮ ಸ್ಪಂದನೆ; ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ವಿರುದ್ಧದ ಲಸಿಕಾಕರಣ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದಾರೆ. ನಗರ ಹಾಗೂ ಗ್ರಾಮೀಣ ಸೇರಿದಂತೆ ಶೇ 97ರಷ್ಟು ಮೊದಲ ಡೋಸ್ ಲಸಿಕಾಕರಣ ಮಾಡಲಾಗಿದೆ. 2ನೇ ಡೋಸ್ ಲಸಿಕಾಕರಣವು ಪ್ರಗತಿಯಲ್ಲಿದೆ.
ಜಿಲ್ಲೆಯ 120 ಗ್ರಾಮಗಳಲ್ಲಿ ಕೋವಿಡ್ ಮೊದಲ ಡೋಸ್ ನೀಡಿಕೆಯಲ್ಲಿ ಶೇ100ರಷ್ಟು ಸಾಧನೆ ಮಾಡಲಾಗಿದ್ದು, ಕೋವಿಡ್ ರೋಗ ನಿರೋಧಕ ಲಸಿಕಾಕರಣದಲ್ಲಿ ಧಾರವಾಡ ಜಿಲ್ಲೆ ರಾಜ್ಯದಲ್ಲಿ 10ನೇ ಸ್ಥಾನದಲ್ಲಿದೆ.
ಜನರು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಬೇಕು ಮತ್ತು ಸಾಧ್ಯವಾದಷ್ಟು ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆ ಗುರುತಿಸಿರುವ ಹೈರಿಸ್ಕ್ ಹೊಂದಿರುವ ಮತ್ತು ಅಡ್ವೈಸರಿ ಇರುವ 14 ರಾಷ್ಟ್ರಗಳಿಂದ ಯಾವುದೇ ವ್ಯಕ್ತಿಗಳು ಜಿಲ್ಲೆಗೆ ಬಂದಿರುವುದಿಲ್ಲ. ಆದರೆ ಹೈರಿಸ್ಕ್ ಹೊಂದಿರದ ಹೊರ ರಾಷ್ಟ್ರದಿಂದ ಓರ್ವ ವ್ಯಕ್ತಿ ಜಿಲ್ಲೆಗೆ ಆಗಮಿಸಿದ್ದು, ಅವರಿಗೆ ಕೋವಿಡ್ ಮಾರ್ಗಸೂಚಿಗಳ ಪ್ರಕಾರ ಕೋವಿಡ್ ಟೆಸ್ಟಿಂಗ್ ಮಾಡಿ ಪ್ರತ್ಯೇಕವಾಗಿ ಇಡಲಾಗಿದೆ.
ಅವರಲ್ಲಿ ಕೋವಿಡ್ ಸೋಂಕು ಕಂಡು ಬಂದಿದ್ದು, ಬಂದಾಗಿನಿಂದಲೂ ಹೋಂ ಐಸೋಲೇಷನ್‍ನಲ್ಲಿ ಇದ್ದು, ಆರೋಗ್ಯವಾಗಿದ್ದಾರೆ. ಆರೋಗ್ಯ ಇಲಾಖೆಯ ಸಿಬ್ಬಂದಿ ಪ್ರತಿದಿನ ಈ ಕುರಿತು ಜಾಗೃತಿ ವಹಿಸಿ ಅಗತ್ಯವಿರುವ ಚಿಕಿತ್ಸೆ, ಆರೋಗ್ಯ ಸಲಹೆ ನೀಡುತ್ತಿದ್ದಾರೆ.
ಜಿಲ್ಲೆಯ ಜನರು ಯಾವುದೇ ರೀತಿಯ ಭಯ, ಆತಂಕ ಪಡುವ ಅಗತ್ಯವಿಲ್ಲ. ಅವರು ಸಹ ಶೀಘ್ರದಲ್ಲಿ ಗುಣಮುಖರಾಗಿ ಹೊರಬರಲಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಪ್ರತಿದಿನ ಸುಮಾರು 250 ತಂಡಗಳಿಂದ ಎಲ್ಲ ಸರ್ಕಾರಿ ಆಸ್ಪತ್ರೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಲಸಿಕಾಕರಣ ಮಾಡಲಾಗುತ್ತಿದೆ ಮತ್ತು ಪ್ರತಿದಿನ ನಾಲ್ಕು ಸಾವಿರಕ್ಕೂ ಅಧಿಕ ಕೋವಿಡ್ ಪರೀಕ್ಷೆಗಳನ್ನು ಮಾಡಲಾಗುತ್ತಿದೆ.












Click it and Unblock the Notifications