ಧಾರವಾಡ ಡಿಸಿ ನಿವಾಸದ ಆವರಣದಲ್ಲಿ ಶ್ರೀಗಂಧ ಮರ ಕಳ್ಳತನ
ಧಾರವಾಡ, ಫೆಬ್ರವರಿ 21; ಧಾರವಾಡ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿ ಶ್ರೀಗಂಧದ ಮರ ಕಳ್ಳತನವಾಗಿದೆ. ಅರಣ್ಯ ಇಲಾಖೆಯಿಂದ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ.
ಭಾನುವಾರ ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿನ ಶ್ರೀಗಂಧದ ಮರ ಕಳ್ಳತನವಾಗಿದೆ. ಸೋಮವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲನೆ ಮಾಡಿದರು.
ಶ್ರೀಗಂಧದ ಮರ ಕಳ್ಳತನದ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ ಆರ್. ಎಸ್. ಉಪ್ಪಾರ ಹೇಳಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

ಫೆಬ್ರವರಿ 20 ತಡರಾತ್ರಿ ಜಿಲ್ಲಾಧಿಕಾರಿಗಳ ನಿವಾಸದ ಆವರಣದಲ್ಲಿದ್ದ ಶ್ರೀಗಂಧದ ಮರ ಕಳ್ಳತನವಾಗಿದೆ. ಬೆಳಗ್ಗೆ ಮಾಹಿತಿ ಬಂದ ತಕ್ಷಣ ಪೊಲೀಸ್ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಮರ ಕಡಿದ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಈಗಾಗಲೇ ಅರಣ್ಯ ಇಲಾಖೆಯಿಂದ ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಮರ ಕಳ್ಳರನ್ನು ಬಂಧಿಸಲಾಗುವುದು ಎಂದು ಧಾರವಾಡ ವಲಯ ಅರಣ್ಯ ಅಧಿಕಾರಿ ಆರ್. ಎಸ್. ಉಪ್ಪಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ನಡೆದಿತ್ತು; ಜಿಲ್ಲಾಧಿಕಾರಿಗಳ ನಿವಾಸದಲ್ಲಿ ಶ್ರೀಗಂಧ ಮರ ಕಳ್ಳತನ ಇದೇ ಮೊದಲ ಪ್ರಕರಣವಲ್ಲ. 2019ರಲ್ಲಿ ವಿಜಯಪುರದ ಜಿಲ್ಲಾಧಿಕಾರಿ ನಿವಾಸದ ಆವರಣದಲ್ಲಿನ ಶ್ರೀಗಂಧದ ಮರ ಕಳುವಾಗಿತ್ತು.
ಜಿಲ್ಲಾಧಿಕಾರಿಗಳ ನಿವಾಸದ ಸುತ್ತಮುತ್ತಲಿದ್ದ 10 ಮರಗಳ ಪೈಕಿ 8 ಮರಗಳನ್ನು ಕಳವು ಮಾಡಲಾಗಿತ್ತು. ನಿವಾಸ ಸುತ್ತ ಇರುವ ಕಾಪೌಂಡ್ ಗೋಡೆಯನ್ನು ಹಾರಿ ಕಳ್ಳರು ಮರದೊಂದಿಗೆ ಪರಾರಿಯಾಗಿದ್ದರು.
ಕಡಲೆ ಖರೀದಿ ಕೇಂದ್ರ ಆರಂಭ; ಧಾರವಾಡ ಜಿಲ್ಲೆಯ ಬ್ಯಾಹಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಬೆಂಬಲ ಬೆಲೆ ಯೋಜನೆಯಡಿ ಕಡಲೆ ಖರೀದಿ ಕೇಂದ್ರ ಉದ್ಘಾಟನೆಗೊಂಡಿದೆ.
ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಕೇಂದ್ರ ಉದ್ಘಾಟಿಸಿ ಮಾತನಾಡಿ, "ರೈತರ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ಕೇಂದ್ರ ಸರ್ಕಾರವು 2.37 ಸಾವಿರ ಕೋಟಿ ರೂ. ಹಣ ನೀಡಿದೆ" ಎಂದರು.
"ಧಾರವಾಡ ಜಿಲ್ಲೆಯಲ್ಲಿ 21 ಸ್ಥಳಗಳಲ್ಲಿ ಕಡಲೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದೆ. ರೈತನ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸುವುದು, ಸಾಲ ಮನ್ನಾಕ್ಕಿಂತಲೂ ಅತ್ಯುತ್ತಮ ಹಾಗೂ ಅತ್ಯಗತ್ಯ ಕಾರ್ಯವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯೂ ಕೂಡ ಇದಾಗಿದೆ" ಎಂದು ಸಚಿವರು ಹೇಳಿದರು.
"ಬೆಂಬಲ ಬೆಲೆ ಯೋಜನೆಯಡಿ ಖರೀದಿಯಾದ ಉತ್ಪನ್ನಗಳ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ವರ್ಗಾವಣೆ ಮಾಡುವ ವ್ಯವಸ್ಥೆ ಇದೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ನೋಂದಾಯಿತ 1 ಲಕ್ಷ 26 ಸಾವಿರ ರೈತರಿಗೆ ಈವರೆಗೆ 332 ಕೋಟಿ ರೂ. ಒದಗಿಸಲಾಗಿದೆ" ಎಂದು ತಿಳಿಸಿದರು.
ಕೈಮಗ್ಗ,ಜವಳಿ ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮಾತನಾಡಿ, "ದಲ್ಲಾಳಿ, ಮಧ್ಯಮರ್ತಿಗಳ ಹಸ್ತಕ್ಷೇತ ತಪ್ಪಿಸಲು ಬೆಂಬಲ ಬೆಲೆ ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿ ಮಾಡಲಾಗುತ್ತಿದೆ" ಎಂದರು.
"ಇದು ಜನಪರ, ರೈತಪರ ಕಾರ್ಯಕ್ರಮವಾಗಿದೆ. ಧಾರವಾಡ ಜಿಲ್ಲೆಯಲ್ಲಿ ಮೊದಲು 7 ಕಡಲೆ ಖರೀದಿ ಕೇಂದ್ರಗಳಿರುತ್ತಿದ್ದವು, ನಂತರ 17 ಕ್ಕೆ ಹೆಚ್ಚಿಸಲಾಯಿತು. ಈ ಬಾರಿ 21 ಸ್ಥಳಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
"ಇದರಲ್ಲಿ ನವಲಗುಂದ ಮತ ಕ್ಷೇತ್ರವೊಂದರಲ್ಲಿಯೇ 13 ಕಡಲೆ ಖರೀದಿ ಕೇಂದ್ರಗಳು ಇರಲಿವೆ. ಕೇಂದ್ರ ಸ್ಥಾಪನೆಗೆ ಸ್ಥಳೀಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಆಸಕ್ತಿ ವಹಿಸಿದರೆ ಅಲ್ಲಿ ಪ್ರಾರಂಭಿಸಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಒತ್ತಾಸೆಯಾಗಿ ನಿಂತಿದ್ದಾರೆ" ಎಂದರು.











Click it and Unblock the Notifications