ಹುಬ್ಬಳ್ಳಿ ಮೂರು ಸಾವಿರ ಮಠದ ವಿವಾದಕ್ಕೆ ತೆರೆ?
ಹುಬ್ಬಳ್ಳಿ, ಅ. 9 : ಮೂರು ಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಪೀಠ ತ್ಯಜಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ. ಶ್ರೀಗಳ ಮನವೊಲಿಸುವ ಕಾರ್ಯ ಯಶಸ್ವಿಯಾಗಿದ್ದು, ಸದ್ಯ ಉತ್ತರಾಧಿಕಾರಿ ಬಗ್ಗೆ ಯಾವುದೇ ಚರ್ಚೆ ನಡೆಸದಿರಲು ನಿರ್ಧರಿಸಲಾಗಿದೆ. ಇದರಿಂದ ಕಳೆದ ಕೆಲವು ದಿನಗಳಿಂದ ಎದ್ದಿರುವ ವಿವಾದ ಬಗೆಹರಿದಂತಾಗಿದೆ.
ಮೂರು ಸಾವಿರ ಮಠದ ಹಾಲಿ ಪೀಠಾಧ್ಯಕ್ಷರಾಗಿರುವ ಹಾನಗಲ್ ವಿರಕ್ತ ಮಠದ ಶ್ರೀ ರಾಜ ಯೋಗೀಂದ್ರ ಸ್ವಾಮೀಜಿಯವರು ಪೀಠ ತ್ಯಾಗ ಮಾಡಲು ಮುಂದಾಗಿದ್ದು, ದಿಂಗಾಲೇಶ್ವರ ಸ್ವಾಮೀಜಿಯನ್ನು ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಇದನ್ನು ಕೆಲವು ಭಕ್ತರು ವಿರೋಧಿಸಿದ್ದರು. [ಹುಬ್ಬಳ್ಳಿ ಮೂರು ಸಾವಿರ ಮಠದಲ್ಲಿ ಏನಿದು ವಿವಾದ?]

ಬೆಳಗಾವಿಯ ಘಟಪ್ರಭಾದಲ್ಲಿರುವ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳನ್ನು ಉತ್ತರಾಧಿಕಾರಿಗಳನ್ನಾಗಿ ನೇಮಿಸಬೇಕೆಂದು 1998ರಲ್ಲಿ ಉಯಿಲು ಬರೆಯಲಾಗಿದೆ. ಆದರೆ, ರಾಜ ಯೋಗೀಂದ್ರ ಶ್ರೀಗಳು ಬಾಳೆ ಹೊಸೂರು ಮಠದ ದಿಂಗಾಲೇಶ್ವರ ಸ್ವಾಮಿಗಳನ್ನು ಉತ್ತರಾಧಿಕಾರಿನ್ನಾಗಿ ನೇಮಕ ಮಾಡಲು ತೀರ್ಮಾನಿಸಿರುವುದು ಅಸಮಾಧಾನಕ್ಕೆ ಕಾರಣವಾಗಿತ್ತು.
ಈ ಉತ್ತರಾಧಿಕಾರಿ ನೇಮಕದ ವಿವಾದದ ಬಗ್ಗೆ ಚರ್ಚಿಸಲು ಭಾನುವಾರ ಕರೆಯಲಾಗಿದ್ದ ಮಠದ ಉನ್ನತ ಮಟ್ಟದ ಸಮಿತಿ ಸಭೆಯೂ ಸ್ವಾಮೀಜಿಗಳ ಗೈರಿನಿಂದಾಗಿ ಸ್ಥಗಿತಗೊಂಡಿತ್ತು. ಸದ್ಯ, ಮಠದಲ್ಲಿ ಬುಧವಾರ ಸಂಜೆ ನಡೆದ ರಹಸ್ಯ ಸಭೆಯಲ್ಲಿ ರಾಜಯೋಗೀಂದ್ರ ಸ್ವಾಮೀಜಿ ಪೀಠಾಧ್ಯಕ್ಷರಾಗಿ ಮುಂದುವರೆಯಲು ತೀರ್ಮಾನಿಸಿದ್ದಾರೆ ಎಂದು ತಿಳಿದುಬಂದಿದೆ. ಇನ್ನೆರಡು ದಿನದಲ್ಲಿ ಸ್ವಾಮೀಜಿಗಳು ಈ ಕುರಿತು ಅಧಿಕೃತ ಹೇಳಿಕೆ ನೀಡುವ ಸಾಧ್ಯತೆ ಇದೆ. [ಮೂರು ಸಾವಿರ ಮಠದ ಉತ್ತರಾಧಿಕಾರಿ ಯಾರು?]
ಸೋಮವಾರ ಸಂಜೆಯಿಂದ ಸ್ವಾಮೀಜಿಗಳು ಅಜ್ಞಾತ ಸ್ಥಳದಲ್ಲಿದ್ದು ಮಾಧ್ಯಮಗಳಿಗೆ ಹೇಳಿಕೆ ನೀಡಿಲ್ಲ. ಅತ್ತ ಕೆಂಪಯ್ಯಸ್ವಾಮಿ ಮಠದ ಪೀಠಾಧಿಕಾರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಮೌನ ವ್ರತ ಕೈಗೊಂಡಿದ್ದು, ಉತ್ತರಾಧಿಕಾರಿ ವಿವಾದದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಸದ್ಯದ ಮಟ್ಟಿಗೆ ಮೂರು ಸಾವಿರ ಮಠದ ವಿವಾದ ಬಗೆಹರಿದಿರುವ ಸಾಧ್ಯತೆಗಳಿದ್ದು, ಈ ಬಗ್ಗೆ ಸ್ವಾಮೀಜಿಗಳು ಅಂತಿಮ ನಿರ್ಧಾರವನ್ನು ಪ್ರಕಟಿಸಬೇಕಾಗಿದೆ.












Click it and Unblock the Notifications