National Youth Day 2023 : ಪ್ರಧಾನಿಗೆಂದೇ ವಿಶೇಷ ಉಡುಗೊರೆ ತಯಾರಿಸಿದ ಧಾರವಾಡದ ಯುವ ಕಲಾವಿದ
ಧಾರವಾಡ, ಜನವರಿ, 09: ಪ್ರಧಾನಿ ನರೇಂದ್ರ ಮೋದಿ ನನ್ನ ನೆಚ್ಚಿನ ನಾಯಕರಾಗಿದ್ದಾರೆ. ಆದ್ದರಿಂದ ನಮ್ಮ ಜಿಲ್ಲೆಯ ಮಣ್ಣಿನಲ್ಲಿಯೇ ತಯಾರಾದ ಕಲಾಕೃತಿಯನ್ನು ಅವರಿಗೆ ಯುವ ಜನೋತ್ಸವದ ವೇಳೆ ಉಡುಗೊರೆಯಾಗಿ ಕೊಡಬೇಕೆನ್ನುವ ಆಸೆಯಿದೆ. ಜಿಲ್ಲಾಡಳಿತ ಅವಕಾಶ ಒದಗಿಸಿಕೊಟ್ಟರೆ ಅದು ನನ್ನ ಪಾಲಿನ ಮರೆಯಲಾಗದ ಕ್ಷಣವಾಗಲಿದೆ ಎಂದು ಯುವ ಕಲಾವಿದ ವಿನಾಯಕ ಹಿರೇಮಠ ಧಾರವಾಡದಲ್ಲಿ ಹೇಳಿದ್ದಾನೆ.
ಧಾರವಾಡದ ಯುವಕ ವಿನಾಯಕ ಹಿರೇಮಠ ಬೇಲೂರು ಶಿಲಾಬಾಲಿಕೆ ಕಲಾಕೃತಿಯನ್ನು ಪ್ರಧಾನಿ ಮೋದಿಗೆ ಗಿಫ್ಟ್ ನೀಡಲು ಉತ್ಸುಕನಾಗಿದ್ದಾನೆ. ಕಳೆದ ವರ್ಷ ವಿಶ್ವ ಪ್ರಸಿದ್ಧ ಹಂಪಿಯ ಕಲ್ಲಿನ ರಥವನ್ನು ಮಣ್ಣಿನಲ್ಲಿ ಅರಳಿಸಿದ್ದ. ಇದೀಗ ಬೇಲೂರಿನ ಶಿಲಾಬಾಲಿಕೆ ಪ್ರತಿಕೃತಿ ತಯಾರಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ.
ಯುವ ಕಲಾವಿದನ ಕೈಚಳಕಕ್ಕೆ ಭಾರಿ ಮೆಚ್ಚುಗೆ
ಬೇಲೂರಿನ ಪ್ರಸಿದ್ಧ ಶಿಲಾಬಾಲಿಕೆ ದರ್ಪಣ ಸುಂದರಿಯ ಕಲಾಕೃತಿಯನ್ನು ಸಿದ್ಧಪಡಿಸಿ, ಮೋದಿ ಅವರ ಬರುವಿಕೆಗಾಗಿ ಕಾಯುತ್ತಿದ್ದಾನೆ. ನಗರದ ಕೆಲಗೇರಿ ಬಡಾವಣೆಯ ಪರಿಸರ ಸ್ನೇಹಿ ಗಣೇಶ ವಿಗ್ರಹ ತಾಯಾರಿಸುವ ಕಲಾವಿದ ಮಂಜುನಾಥ್ ಹಿರೇಮಠ ಅವರ ಮಗ ವಿನಾಯಕ ಹಿರೇಮಠ ಇದೀಗ ಇಂತಹದ್ದೊಂದು ಕಲಾಕೃತಿ ತಯಾರಿಸಿದ್ದಾನೆ. ಪ್ರತಿದಿನ ಸುಮಾರು 6 ತಾಸುಗಳಂತೆ 12 ದಿನಗಳ ಕಾಲ ಇಂತಹದ್ದೊಂದು ಅದ್ಭುತ ಕಲಾಕೃತಿಯನ್ನು ಮಣ್ಣಿನಲ್ಲಿಯೇ ತಯಾರಿಸಿದ್ದಾನೆ.

ಮಣ್ಣಿನಲ್ಲಿ ಅರಳಿದ ಶಿಲಾಬಾಲಿಕೆ ಕಲಾಕೃತಿ
ಈತನ ಕಠಿಣ ಕಲಾತಪಸ್ಸಿನ ಫಲವಾಗಿ ಇದೀಗ 15 ಇಂಚಿನ ಮಣ್ಣಿನ ದರ್ಪಣ ಸುಂದರಿ ಸಿದ್ಧವಾಗಿದ್ದಾಳೆ. ಕಲಾಕೃತಿ ನಿರ್ಮಾಣವಾದ ಬಳಿಕ ಒಂದು ರಾತ್ರಿಯಿಡೀ ಕುಳಿತು ಫೈನಲ್ ಟಚ್ ಅಪ್ ಕೊಟ್ಟಿದ್ದಾನೆ. ಅಚ್ಚರಿಯ ಸಂಗತಿ ಎಂದರೆ, ಆ ಸುಂದರಿಯ ಕಲಾಕೃತಿ ಕೈಯಲ್ಲಿನ ಕನ್ನಡಿಯಲ್ಲಿ ಪ್ರತಿಫಲಿಸುವಷ್ಟು ಅದ್ಭುತವಾಗಿ ನಿರ್ಮಾಣವಾಗಿದೆ.
ಇದಕ್ಕೂ ಮುನ್ನ ವಿನಾಯಕ, ಹಂಪಿಯ ಕಲ್ಲಿನ ರಥದ ಕಲಾಕೃತಿಯನ್ನೂ ಮಣ್ಣಿನಲ್ಲಿಯೇ ನಿರ್ಮಿಸಿದ್ದ. ಇತ್ತೀಚೆಗೆ ಹಂಪಿ ಪ್ರವಾಸಕ್ಕೆ ಹೋದಾಗ, ಅಲ್ಲಿನ ರಥ ನೋಡಿ ಬಂದಿದ್ದ. ಅಲ್ಲಿಂದ ಬಂದ ಮರುದಿನವೇ ಅಂತಹದ್ದೇ ಪುಟ್ಟ ರಥವನ್ನು ಮಣ್ಣಿನಿಂದ ಮಾಡಿದ್ದ. ಅದನ್ನೂ ಕೂಡ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆಯಾಗಿ ಕೊಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾನೆ.

ವಿವಿಧ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು
ಹಾಗೆಯೇ ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗುವ ಕಾರ್ಯಕ್ರಮಗಳಿಗೆ ಶಾಸಕ ಅಮೃತ ದೇಸಾಯಿ ಅವರನ್ನು ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಈ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಈಗಾಗಲೇ ವಿವಿಧ ರಾಜ್ಯಗಳಿಂದ ಯುವಕರು ಆಗಮಿಸಿದ್ದು, ಅವರು ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನಲ್ಲಿ ಉಳಿದುಕೊಂಡಿದ್ದಾರೆ. ಈಗಾಗಲೇ ಶಾಸಕ ಅಮೃತ ದೇಸಾಯಿ ಅವರು, ಯುವ ಜನೋತ್ಸವಕ್ಕೆ ಬಂದಿರುವ ಯುವಕರನ್ನು ಭೇಟಿ ಮಾಡಿ ಸ್ವಾಗತಿಸಿದರು. ಕೃಷಿ ವಿಶ್ವವಿದ್ಯಾಲಯದ ಹಾಸ್ಟೆಲ್‌ಗಳಲ್ಲಿ ಉಳಿದುಕೊಂಡಿರುವವರಿಗೆ ವಸತಿ, ಊಟ ಹಾಗೂ ಕಾರ್ಯಕ್ರಮದ ವ್ಯವಸ್ಥೆಯ ಕುರಿತು ಅಧಿಕಾರಿಗಳ ಜೊತೆ ಶಾಸಕರು ಚರ್ಚೆ ಮಾಡಿದರು.












Click it and Unblock the Notifications