ಮೈಸೂರು ದಸರಾ 2023; ಮೊದಲ ಬಹುಮಾನ ಗೆದ್ದ ಧಾರವಾಡ ಸ್ತಬ್ದ ಚಿತ್ರದ ವಿಶೇಷತೆಗಳು
ಧಾರವಾಡ, ಅಕ್ಟೋಬರ್ 31: ಮೈಸೂರು ದಸರಾ 2023ರ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಧಾರವಾಡ ಜಿಲ್ಲಾ ಪಂಚಾಯಿತಿಯ ಸ್ತಬ್ಧಚಿತ್ರವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ. 'ಧಾರವಾಡಿ ತಳಿ ಎಮ್ಮೆ, ನಮ್ಮ ಹೆಮ್ಮೆ' ಎಂಬ ಶೀರ್ಷಿಕೆಯ ಸ್ತಬ್ಧ ಚಿತ್ರವು ದೇಶ, ವಿದೇಶಿಯರ ಗಮನವ ಸೆಳೆದಿದೆ.
ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೆರವಣಿಗೆಯಲ್ಲಿ ಜಿಲ್ಲೆಗಳ 31 ಹಾಗೂ ಇತರ ಇಲಾಖೆಗಳ 18 ಸೇರಿ ಒಟ್ಟು 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು. ಇವುಗಳಲ್ಲಿ ಆಕರ್ಷಕವಾಗಿ ಮತ್ತು ಅರ್ಥಪೂರ್ಣವಾಗಿ ರೂಪುಗೊಂಡಿದ್ದ ಧಾರವಾಡ ಪೇಡಾವನ್ನು ಒಳಗೊಂಡಿದ್ದ ಸ್ತಬ್ಧಚಿತ್ರ ವೀಕ್ಷಕರ ಗಮನ ಸೆಳೆಯಿತು.

ಜಿಲ್ಲಾ ಪಂಚಾಯಿತಿಯು ಸುಮಾರು 7.80 ಲಕ್ಷ ಅನುದಾನದಲ್ಲಿ ಈ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಿತ್ತು. ಸ್ತಬ್ಧಚಿತ್ರದಲ್ಲಿದ್ದ ಧಾರವಾಡದ ಹೆಮ್ಮೆ ಧಾರವಾಡ ಪೇಡ ಎಲ್ಲರ ಗಮನವನ್ನು ಸೆಳೆಯಿತು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ. ಕೆ. ನೀಡಿದ್ದ ಪರಿಕಲ್ಪನೆ ಹಾಗೂ ವಿಷಯ ವಸ್ತುವಿನ ಆಧಾರದ ಮೇಲೆ ಈ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲಾಗಿತ್ತು.
ಸ್ತಬ್ಧಚಿತ್ರದ ವಿವರಗಳು; ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಕೈ ಕುಸುರಿ ಕಲಾವಿದ ಶಶಿಧರ ಗರಗ ಮೈಸೂರು ಹೊರವಲಯದ ಆರ್.ಎಂ.ಸಿ.ಯ ಬಂಡಿಪಾಳ್ಯದಲ್ಲಿ ಸತತ 12 ದಿನಗಳ ಕಾಲ ತಮ್ಮ ತಂಡದೊಂದಿಗೆ ಸ್ತಬ್ಧಚಿತ್ರವನ್ನು ನಿರ್ಮಾಣ ಮಾಡಲು ಶ್ರಮಿಸಿದ್ದರು. ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಗ್ರಾಮೀಣ ಕೈಗಾರಿಕೆ ಇಲಾಖೆಯ ಉಪನಿರ್ದೇಶಕ ಎ. ಎ. ತಹಶೀಲ್ದಾರ ಮತ್ತು ಹುಬ್ಬಳ್ಳಿಯ ಕೈಗಾರಿಕಾ ವಿಸ್ತರಣಾ ಅಧಿಕಾರಿ ಶಿವಾನಂದ ಕಮ್ಮಾರ ಅವರು ಮಾರ್ಗದರ್ಶನ ಮಾಡಿದ್ದರು.
ಸ್ತಬ್ಧಚಿತ್ರ ನಿರ್ಮಾಣದಲ್ಲಿ ಪಿ.ಓ.ಪಿ., ಬಿದಿರು, ಬೊಂಬು, ಫ್ಲೈವುಡ್, ಥರ್ಮಾಕೊಲ್ ಮತ್ತು ಪೇಂಟ್ ಬಳಕೆ ಮಾಡಲಾಗಿತ್ತು. ಬಳಕೆ ಮಾಡಿದ ಕೈ ಕಲೆ, ಪರಿಕಲ್ಪನೆ (ಥೀಮ್) ಮತ್ತು ರೂಪಿಸಿದ ಆಕೃತಿಗಳು ಸೇರಿ ಒಟ್ಟಾರೆ ರೂಪಕವನ್ನು ಪರಿಗಣಿಸಲಾಗಿದೆ. ಸಾಹಿತ್ಯ, ಸಂಸ್ಕೃತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು.
ಧಾರವಾಡ ಪೇಡಾ ಉತ್ಪಾದನೆಯನ್ನು 19 ನೇ ಶತಮಾನದಲ್ಲಿ ಪ್ರಾರಂಭಿಸಲಾಗಿದೆ ಎಂದು ಇತಿಹಾಸ ತಿಳಿಸುತ್ತದೆ. ಮೂಲತಃ ಠಾಕೂರ್ ಮನೆತನದವರು ಉತ್ತರ ಪ್ರದೇಶದ ಉನ್ನಾವೊದಿಂದ ಧಾರವಾಡಕ್ಕೆ ವಲಸೆ ಬಂದು ಪೇಡಾವನ್ನು ತಯಾರಿಸಲು ಪ್ರಾರಂಭಿಸಿದರು. ಇದು ಸುಮಾರು 175 ವರ್ಷಗಳ ಇತಿಹಾಸವನ್ನು ಹೊಂದಿದ್ದು, ಅಂದಿನಿಂದ ಇಂದಿನವರೆಗೂ ಠಾಕೂರ ಮನೆತನದವರು ಧಾರವಾಡದಲ್ಲಿ ನೆಲೆಸಿ, ಪೇಡಾ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಜಿಲ್ಲೆಯಾದ್ಯಂತ ಈಗ ಸಾಕಷ್ಟು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಪೇಡಾ ಉತ್ಪಾದನೆಯಲ್ಲಿ ತೊಡಗಿದ್ದು, ದಿನಂಪ್ರತಿ ಸುಮಾರು 5 ಟನ್ ಪೇಡಾ ಉತ್ಪಾದನೆ ಮಾಡಿ ಮಾರಾಟ ಮಾಡಲಾಗುತ್ತಿವೆ. ಧಾರವಾಡ ಪೇಡಾವು ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದೆ. ಹಬ್ಬ ಮತ್ತು ಇತರ ವಿಶೇಷ ದಿನಗಳಲ್ಲಿ ವಿಶೇಷ ಸಿಹಿ ತಿಂಡಿಯಾಗಿ ಸ್ಥಾನವನ್ನು ಪಡೆದುಕೊಂಡಿದೆ. ಪೇಡಾ ತಯಾರಿಕೆಗಾಗಿ ಧಾರವಾಡ ಪೇಡಾ ಜಿಐ ಟ್ಯಾಗ್ ಪಡೆದುಕೊಂಡಿದೆ.
ಧಾರವಾಡ ಜಿಲ್ಲೆಯು ಅರೆಮಲೆನಾಡು ಪ್ರದೇಶವಾಗಿರುವರಿಂದ ಇಲ್ಲಿನ ಜನರು ಕೃಷಿಯೊಂದಿಗೆ ಹೈನುಗಾರಿಕೆ ವೃತ್ತಿಗೂ ಪ್ರಾಮುಖ್ಯತೆ ನೀಡುತ್ತಾರೆ. ದಿನನಿತ್ಯ ಪೇಡಾ ಉತ್ಪಾದನಾ ಚಟುವಟಿಕೆಯಲ್ಲಿ ಗೌಳಿ ಜನಾಂಗದ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡುವುದರೊಂದಿಗೆ ಪೇಡಾ ತಯಾರಿಕೆಯು ಧಾರವಾಡ ಜಿಲ್ಲೆಯ ಹೆಮ್ಮೆಯ ಕಿರೀಟವಾಗಿದೆ.
ಇನ್ನು ಧಾರವಾಡದ ದೇಸಿ ತಳಿ ಎಮ್ಮೆಗೆ ರಾಷ್ಟ್ರೀಯ ಮನ್ನಣೆ ದೊರೆಕಿದೆ. ಈ ಪ್ರಾಮುಖ್ಯತೆ ಪಡೆದ ರಾಜ್ಯದ ಮೊದಲ ಸ್ಥಳೀಯ ಎಮ್ಮೆಯ ತಳಿ ಇದಾಗಿದೆ. ಈ ಮೂಲಕ ಸ್ಥಳೀಯವಾಗಿ ಧಾರವಾಡಿ ತಳಿ ಎಮ್ಮೆ ಎಂದೇ ಕರೆಯಲ್ಪಡುವ ದೇಸೀಯ ತಳಿಯ ಹಾಲಿನಿಂದ ತಯಾರಿಸಿದ ಖೊವಾ ಮತ್ತು ಸಕ್ಕರೆಯಿಂದ ತಯಾರಿಸುವ ಪೇಡಾ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಹೊಂದಿರುವುದಿಲ್ಲ ಮತ್ತು ಆರೋಗ್ಯ ವೃದ್ಧಿಗಾಗಿ ಇದು ಅಗಾಧವಾದ ಕ್ಯಾಲ್ಸಿಯಂ ಕಣಜವಾಗಿದೆ.
ಈ ಕುರಿತು ಮಾತನಾಡಿರುವ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ. ಕೆ., "ಸ್ತಬ್ಧಚಿತ್ರದ ಆಯ್ಕೆ ಸಮಿತಿ ಪ್ರತಿನಿತ್ಯ ಸ್ತಬ್ಧಚಿತ್ರ ನಿರ್ಮಾಣ ಕಾರ್ಯ ನಿಗಾವಹಿಸುತ್ತದೆ. ಸಾಹಿತ್ಯ, ಸಂಸ್ಕೃತಿಯೊಂದಿಗೆ ಧಾರವಾಡಕ್ಕೆ ಕೀರ್ತಿ ತಂದ ಧಾರವಾಡ ಪೇಡಾ ಮತ್ತು ಧಾರವಾಡ ಎಮ್ಮೆ ತಳಿಗಳ ಬಗ್ಗೆ ಹೆಚ್ಚು ಪ್ರಚುರ ಪಡಿಸುವ ಉದ್ದೇಶದಿಂದ ಈ ಸ್ತಬ್ಧಚಿತ್ರ ರೂಪಿಸಲಾಗಿತ್ತು. ಅಂದುಕೊಂಡಿದ್ದಕ್ಕಿಂತ ಹೆಚ್ಚು ಖುಷಿ ತಂದಿದೆ. ಪ್ರಥಮ ಸ್ಥಾನ ಬಂದಿರುವುದು ಜಿಲ್ಲೆಗೆ ಹೆಮ್ಮೆ" ಎಂದು ಹೇಳಿದರು.












Click it and Unblock the Notifications