Monsoon Rain: ಪ್ರತಿ ವಾರ್ಡ್‌ನಲ್ಲಿ ಒಂದು ರಕ್ಷಣಾ ತಂಡ
ಧಾರವಾಡ, ಮೇ 16: ಮುಂಗಾರು ಮಳೆ ಆರಂಭವಾಗುವ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು.
ಚರಂಡಿಯಲ್ಲಿ ಕಸ, ಹೂಳು ತುಂಬಿ ಪ್ರವಾಹ ಪರಿಸ್ಥಿತಿ ಉಂಟಾಗುವ ಮತ್ತು ಜನಜೀವನ ಅಸ್ತವ್ಯಸ್ತಗೊಳ್ಳುವ ಸಂಭಾವ್ಯ ಪ್ರದೇಶಗಳಲ್ಲಿ ಮಹಾನಗರ ಪಾಲಿಕೆ ಕೈಗೊಂಡಿರುವ ಕಾರ್ಯ ಮತ್ತು ಜನರ ಅಭಿಪ್ರಾಯ ತಿಳಿಯಲು ಜಿಲ್ಲಾಧಿಕಾರಿಗಳು ವಿವಿಧ ಸ್ಥಳಗಳಿಗೆ ಭೇಟಿ ಮಾಡಿದರು.

ಮಹಾನಗರ ಪಾಲಿಕೆ ಅಧಿಕಾರಿಗಳ ಜೊತೆ ಜಿಲ್ಲಾಧಿಕಾರಿಗಳು ಬಸ್ ಡಿಪೋ ಸರ್ಕಲ್, ಬಸ್ ಡಿಪೋ ಪಕ್ಕದ ರಾಜಕಾಲುವೆ, ಮದಿಹಾಳ, ನಿಜಾಮುದ್ದೀನ್ ಕಾಲೋನಿ, ಎಂ. ಆರ್. ನಗರ ನಾಲಾ ಪ್ರದೇಶಗಳಿಗೆ ಭೇಟಿ ನೀಡಿದರು. ನಾಲೆಗಳನ್ನು ಸ್ವಚ್ಛಗೊಳಿಸಿದ್ದರೂ ಕೆಲವಡೆ ಮತ್ತೆ ಜನರು ಕಸ, ಪ್ಲಾಸ್ಟಿಕ್ ಹಾಕಿರುವುದನ್ನು ಗಮನಿಸಿದರು.
ಸಾರ್ವಜನಕರಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ, ತಪ್ಪಿದಲ್ಲಿ ಮಹಾನಗರ ಪಾಲಿಕೆ ನಿಯಮಾವಳಿಗಳ ಪ್ರಕಾರ ದಂಡ ವಿಧಿಸಿ, ಹೆಚ್ಚುವರಿ ಟ್ಯಾಕ್ಸ್ ಹಾಕಿ ಎಂದು ಜಿಲ್ಲಾಧಿಕಾರಿಗಳು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದರು.
ರಕ್ಷಣಾ ತಂಡ ರಚನೆ: ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮುಂಗಾರು ಪೂರ್ವ ಮಳೆ ಮತ್ತು ಮಳೆಗಾಲದಲ್ಲಿ ಉಂಟಾಗುವ ಸಮಸ್ಯೆಗಳನ್ನು ತ್ವರಿತವಾಗಿ ಹಾಜರಾಗಿ, ಬಗೆಹರಿಸಲು ಮತ್ತು ಜನಜೀವನ ಅಸ್ತವ್ಯಸ್ತ ಆಗದಂತೆ ಮುನ್ನೆಚರಿಕೆವಹಿಸಲು ಪ್ರತಿ ವಲಯಕ್ಕೆ ಒಂದು ಕ್ಷಿಪ್ರ ಕಾರ್ಯಪಡೆ ರಚಿಸಲು ಮತ್ತು ಈಗಾಗಲೇ ಇರುವ ಪಡೆಗಳಿಗೆ ಬಡಾವಣೆ ಹಂಚಿಕೆ ಮಾಡಿ, ಜನರ ದೂರು ಬಂದ ತಕ್ಷಣ ಸ್ಥಳಕ್ಕೆ ತೆರಳಲು ಸೂಚಿಸಿದರು.
ಹೆಸ್ಕಾಂ ಅಧಿಕಾರಿಗಳಿಗೆ ನಗರದ ಪ್ರತಿ ವಿದ್ಯುತ್ ಕಂಬದ ಶಿಥಿಲತೆ, ತಂತಿಗಳು ಜೊತು ಬಿದ್ದಿರುವುದು, ಸಾರ್ವಜನಿಕರಿಗೆ ತಲುಪುವಂತೆ ಇರುವ ಮತ್ತು ಓಪನ್ ಎಲೆಕ್ಟ್ರಿಕಲ್ ಬೋರ್ಡ್‌ಗಳ ಬಗ್ಗೆ ಪರಿಶೀಲಿಸಿ, ಮೇ ತಿಂಗಳ ಅಂತ್ಯದೊಳಗೆ ಸಾರ್ವಜನಿಕರಿಗೆ ಹಾನಿ ಆಗದಂತೆ ದುರಸ್ತಿ ಮಾಡಬೇಕು. ಮುನ್ನೆಚ್ಚರಿಕೆ ಕ್ರಮವಹಿಸಿ, ವರದಿ ಪಡೆದುಕೊಳ್ಳುವಂತೆ ನಿರ್ದೇಶನ ನೀಡಿದರು.
ಜನರ ಜೊತೆ ಮಾತುಕತೆ ನಡೆಸಿದ ಡಿಸಿ, 'ಪ್ರತಿದಿನ ನಿಮ್ಮ ಮನೆ ಬಾಗಿಲಿಗೆ ಪಾಲಿಕೆಯಿಂದ ಕಸ, ತ್ಯಾಜ ಸಂಗ್ರಹ ಟಿಪ್ಪರ್ ಬರುತ್ತಿದೆ. ಆದರೂ ಕೆಲವರು ಕಸವನ್ನು ಚರಂಡಿಗೆ ಹಾಕುತ್ತಿರುವುದು ಸರಿಯಲ್ಲ. ಸಾರ್ವಜನಿಕರ ಸಹಕಾರ, ನಮ್ಮ ನಗರವೆಂಬ ಹೆಮ್ಮೆ ಇದ್ದರೆ ಮಾತ್ರ ಸರಕಾರದ ಪ್ರಯತ್ನಗಳು ಯಶಸ್ವಿಯಾಗುತ್ತವೆ" ಎಂದರು.
ಜಿಲ್ಲಾಧಿಕಾರಿಗಳು, ಸಿಬಿ ನಗರ, ಭಾವಿಕಟ್ಟಿ ಪ್ಲಾಟ್, ಬಸವನಗರ ಪ್ರದೇಶಗಳಿಗೆ ಭೇಟಿ ನೀಡಿ, ನಾಲಾ ಮತ್ತು ರಾಜಕಾಲುವೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದರು. ಮುಖ್ಯ ರಸ್ತೆ, ಪಾರ್ಕ್, ಬಡಾವಣೆಗಳಲ್ಲಿ ಇರುವ ಹಳೆಯ ಮರ, ಒಣಗಿದ ಮರ, ಚಾಚಿದ ಮರದ ರೆಂಬೆಕೊಂಬೆಗಳನ್ನು ಗುರುತಿಸಿ, ಪಾಲಿಕೆಯಿಂದ ಕತ್ತರಿಸಿ. ಬಡಾವಣೆ ನಿವಾಸಿಗಳಿಗೂ ಈ ಕುರಿತು ಮಾಹಿತಿ ನೀಡಿ ಎಂದರು.
ಮಳೆ, ಪ್ರವಾಹ ಕಾರಣದಿಂದಾಗಿ ಯಾವುದೇ ಜಾನುವಾರು, ಮಾನವ ಜೀವಹಾನಿ ಆಗದಂತೆ ಮತ್ತು ಸಾರ್ವಜನಿಕ ಸ್ವತ್ತು ಹಾನಿ ಆಗದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಸಹಾಯವಾಣಿ, ವಲಯ ಆಯುಕ್ತರ ದೂರವಾಣಿ ಸಂಖ್ಯೆಗಳ ಕುರಿತು ಪ್ರಚಾರ ಮಾಡಿ ಜನರು ತಕ್ಷಣ ಸಂಪರ್ಕಿಸಲು ಅನುಕೂಲವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಮಳೆ, ಗಾಳಿ, ಸಿಡಿಲು, ಗುಡುಗು ಮಿಂಚು ಮುಂತಾದವುಗಳಿಂದ ಜೀವ ಹಾನಿ ಆಗದಂತೆ ಜನರಲ್ಲಿ ಅರಿವು ಮೂಡಿಸಬೇಕು. ಮಹಾನಗರಪಾಲಿಕೆ ಸೇರಿದಂತೆ ಜಿಲ್ಲೆಯ ಎಲ್ಲ ನಗರ, ಪಟ್ಟಣ, ಗ್ರಾಮಗಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಈಗಾಗಲೇ ಸೂಚಿಸಲಾಗಿದೆ ಎಂದರು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನಿಯಂತ್ರಣ ಕೊಠಡಿ ಸಂಖ್ಯೆ 0836-2213888, 2213869, 2213886, 2213889. ವಾಟ್ಸಪ್ ನಂಬರ್ 8277803778. [email protected] ಮೂಲಕವು ಜನರು ದೂರು ನೀಡಬಹುದು.












Click it and Unblock the Notifications