ಎಂಎಂ ಕಲ್ಬುರ್ಗಿ ಹತ್ಯೆ ಪ್ರಕರಣ: ಸುಪ್ರೀಂ ಮೆಟ್ಟಿಲೇರಿದ ಕುಟುಂಬಸ್ಥರು
ಧಾರವಾಡ, ಜನವರಿ 8: ಸಂಶೋಧಕ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಆರೋಪಿಗಳ ಪತ್ತೆಗೆ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿರುವುದಾಗಿ ಮೃತರ ಕುಟುಂಬದವರು ತಿಳಿಸಿದ್ದಾರೆ. ಆಗಸ್ಟ್ 30, 2015ರಲ್ಲಿ ಧಾರವಾಡದ ಅವರ ಮನೆಯಲ್ಲೇ ಸಂಶೋಧಕರು ಹಾಗೂ ವಿಚಾರವಾದಿಯೂ ಆಗಿದ್ದ ಎಂ.ಎಂ.ಕಲ್ಬುರ್ಗಿ ಅವರ ಹತ್ಯೆಯಾಗಿತ್ತು.
ಈ ಹತ್ಯೆ ಪ್ರಕರಣವನ್ನು ಕುರಿತಾಗಿ ರಾಜ್ಯ ಸರಕಾರವು ಸಿಐಡಿ ತನಿಖೆಗೆ ವಹಿಸಿತ್ತು. ಈ ಪ್ರಕರಣ ನಡೆದು ಎರಡು ವರ್ಷವೇ ಕಳೆದರೂ ಹಂತಕರ ಸುಳಿವು ಪತ್ತೆಯಾಗದ ಹಿನ್ನೆಲೆಯಲ್ಲಿ ಮೃತರ ಕುಟುಂಬದವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಕಳೆದ ಡಿಸೆಂಬರ್ ಹದಿನಾರನೇ ತಾರೀಕು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.

ಮಹಾರಾಷ್ಟ್ರ ಮೂಲದ ವಕೀಲ ಅಭಯ ನೆವಗಿ ಅವರು ಅರ್ಜಿ ಹಾಕಿದ್ದಾರೆ. ಈ ಬಗ್ಗೆ ಎಂ.ಎಂ.ಕಲ್ಬುರ್ಗಿ ಅವರ ಮಗ ಶ್ರೀವಿಜಯ ಹೇಳಿಕೆ ನೀಡಿದ್ದಾರೆ. ಕಲ್ಬುರ್ಗಿ ಹತ್ಯೆ ನಂತರ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು ಬೆಂಗಳೂರಿನ ಅವರ ಮನೆಯ ಬಳಿಯೇ ಸೆಪ್ಟೆಂಬರ್ ನಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಆ ಪ್ರಕರಣದಲ್ಲೂ ಆರೋಪಿಗಳು ಪತ್ತೆಯಾಗಿಲ್ಲ.












Click it and Unblock the Notifications