PM Modi Secret: ನರೇಂದ್ರ ಮೋದಿ ಪ್ರಧಾನಿಯಾಗಿದ್ದು ಹೇಗೆ ಎನ್ನುವ ಗುಟ್ಟು ಬಿಚ್ಚಿಟ್ಟ ಮಲ್ಲಿಕಾರ್ಜುನ ಖರ್ಗೆ
ಧಾರವಾಡ, ಏಪ್ರಿಲ್, 27: ಕಾಂಗ್ರೆಸ್ 70 ವರ್ಷಗಳ ಅವಧಿಯಲ್ಲಿ ಈ ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಉಳಿಸಿಕೊಂಡು ಬಂದಿದೆ. ಹೀಗಾಗಿಯೇ ನರೇಂದ್ರ ಮೋದಿ ಅವರು ಈ ದೇಶದ ಪ್ರಧಾನಿ ಆಗಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಧಾರವಾಡದಲ್ಲಿ ಹೇಳಿದರು.
ಧಾರವಾಡದ ಕಡಪಾ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಹಮ್ಮಿಕೊಂಡಿದ್ದ ಬಹಿರಂಗ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಸದ್ಯ ರಾಜ್ಯದಲ್ಲಿ ಬಂದಿರುವ ಚುನಾವಣೆ ದೇಶದ ಭವಿಷ್ಯವನ್ನು ಬದಲಾಯಿಸುವ ಚುನಾವಣೆ ಆಗಿದೆ. ಬಿಜೆಪಿ ಆಡಳಿತ ಎಂದರೆ ಅದು ಕಮೀಷನ್ ಆಡಳಿತ ಎನ್ನುವಂತಾಗಿದೆ. ಶೇಕಡಾ 40% ಕೊಟ್ಟರೆ ಎಲ್ಲ ಕೆಲಸ ಆಗುತ್ತಿದ್ದವು ಎಂದು ದೂರಿದರು.

ಅಲ್ಲದೆ ಶಿಕ್ಷಣ ಕ್ಷೇತ್ರ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಹಣ ಕೊಡದೇ ಯಾವುದೇ ಕೆಲಸಗಳು ಈ ಸರ್ಕಾರದ ಅವಧಿಯಲ್ಲಿ ಆಗಲಿಲ್ಲ. ಗುತ್ತಿಗೆದಾರರ ಬಿಲ್ ಕೂಡ ಇದುವರೆಗೂ ಕ್ಲಿಯರ್ ಆಗಿಲ್ಲ. ಇದನ್ನು ಸ್ವತಃ ಗುತ್ತಿಗೆದಾರರೇ ರಾಷ್ಟ್ರಪತಿ ಹಾಗೂ ಪ್ರಧಾನಿ ಸೇರಿದಂತೆ ಹಲವರಿಗೆ ಪತ್ರ ಬರೆದಿದ್ದಾರೆ ಎಂದರು.
ಕಮಿಷನ್ ಆರೋಪಕ್ಕೆ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಪ್ರೂಫ್ ಕೇಳುತ್ತಾರೆ. ಮೋದಿ ತಾನು ತಿನ್ನುವುದಿಲ್ಲ ತಿನ್ನುವವರಿಗೂ ಬಿಡುವುದಿಲ್ಲ ಎನ್ನುತ್ತಾರೆ. ಆದರೆ, ಮೋದಿ ಅವರು ತಿನ್ನುವವರನ್ನೇ ತಮ್ಮ ಬಳಿ ಕುಳ್ಳಿರಿಸಿಕೊಂಡಿದ್ದಾರೆ. ಆದರೆ, ಅವರ ಬಗ್ಗೆ ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
70 ವರ್ಷದ ಅವಧಿಯಲ್ಲಿ ಕಾಂಗ್ರೆಸ್ ಎಲ್ಲರಿಗೂ ಸಮಾನ ಹಕ್ಕು ನೀಡಿದೆ. ಗಾಂಧಿ ಕುಟುಂಬದಲ್ಲಿ ರಾಜೀವ ಗಾಂಧಿ ನಂತರ ಯಾರೂ ಮಂತ್ರಿಯಾಗಿಲ್ಲ. ಸಾಂವಿಧಾನಿಕ ಹುದ್ದೆಯನ್ನು ಯಾರೂ ಪಡೆದಿಲ್ಲ. ಹೀಗಿದ್ದರೂ ಬಿಜೆಪಿವರು ಗಾಂಧಿ ಪರಿವಾರದಿಂದ ದೂರ ಇರಿ ಎಂದು ಹೇಳುತ್ತಾರೆ. ಇಂದು ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ನಿರಂತರವಾಗಿ ಏರುತ್ತಲೇ ಇದೆ. ಇದು ಡಬಲ್ ಎಂಜಿನ್ ಸರ್ಕಾರದ ಕಾರ್ಯವೈಖರಿ. ಬಿಜೆಪಿಯವರದ್ದು ಒಡೆದು ಆಳುವ ನೀತಿ ಎಂದು ವಾಗ್ದಾಳಿ ನಡೆಸಿದರು.












Click it and Unblock the Notifications