ಡಾ.ಎಂ.ಎಂ.ಕಲಬುರ್ಗಿ ಹತ್ಯೆಗೆ ಕಂಬನಿ ಮಿಡಿದ ಗಣ್ಯರು
ಧಾರವಾಡ, ಆ. 30 : ಹಿರಿಯ ಸಂಶೋಧಕ ಮತ್ತು ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಎಂ. ಎಂ. ಕಲಬುರ್ಗಿ ಅವರ ಹತ್ಯೆಗೆ ಗಣ್ಯರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಸಾಹಿತಿಗಳು, ರಾಜಕೀಯ ನಾಯಕರು, ಚಿಂತಕರು ಒತ್ತಾಯಿಸಿದ್ದಾರೆ.
ಭಾನುವಾರ ಬೆಳಗ್ಗೆ 8.40ರ ಸುಮಾರಿಗೆ ಧಾರವಾಡ ಕಲ್ಯಾಣ ನಗರದಲ್ಲಿರುವ ಎಂ.ಎಂ.ಕಲಬುರ್ಗಿ ಅವರ ನಿವಾಸಕ್ಕೆ ಆಗಮಿಸಿದ್ದ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿ ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದಾರೆ. ಕೊಲೆಗೈದ ಹಂತಕರನ್ನು ಬಂಧಿಸಲು ವಿಶೇಷ ತಂಡವನ್ನು ಪೊಲೀಸರು ರಚಿಸಿದ್ದಾರೆ. [ಕಲಬುರ್ಗಿ ಹತ್ಯೆ ತನಿಖೆಗೆ ವಿಶೇಷ ತಂಡ]
ಡಾ ಎಂ.ಎಂ.ಕಲಬುರ್ಗಿ ಅವರ ಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ಸುಸಂಸ್ಕೃತ ನಗರಿ ಎಂದೇ ಹೆಸರಾಗಿದ್ದ ಧಾರವಾಡಕ್ಕೆ ಕಪ್ಪು ಚುಕ್ಕೆಯಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಣಿಸಲಾಗಿದೆ. ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕಾನೂನು ರೀತಿ ಶಿಕ್ಷಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ತಮ್ಮ ಸಂತಾಪದಲ್ಲಿ ತಿಳಿಸಿದ್ದಾರೆ. [ಎಂಎಂ ಕಲಬುರ್ಗಿ ಸಂಕ್ಷಿಪ್ತ ಪರಿಚಯ]
ನಾಡಿನ ಅನೇಕ ಗಣ್ಯರು, ಸಾಹಿತಿಗಳು, ಚಿಂತಕರು ಎಂ.ಎಂ.ಕಲಬುರ್ಗಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹತ್ಯೆ ಮಾಡಿದ ದುಷ್ಕರ್ಮಿಗಳನ್ನು ತಕ್ಷಣ ಬಂಧಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಂಬನಿ ಮಿಡಿದ ಗಣ್ಯರು ಹೇಳಿದ್ದೇನು? ಚಿತ್ರಗಳಲ್ಲಿ ನೋಡಿ......

'ಧಾರವಾಡಕ್ಕೆ ಕಪ್ಪು ಚುಕ್ಕೆಯಾಗಿದೆ'
'ಡಾ ಎಂ. ಎಂ. ಕಲಬುರ್ಗಿ ಅವರು ಧಾರವಾಡದ ತಮ್ಮ ಸ್ವ-ಗೃಹದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ ಎಂಬುದು ನನ್ನಲ್ಲಿ ಆಘಾತ, ದುಃಖ ಹಾಗೂ ನೋವನ್ನುಂಟು ಮಾಡಿದೆ. ಈ ಪ್ರಕರಣವು ಸುಸಂಸ್ಕೃತ ನಗರಿ ಎಂದೇ ಹೆಸರಾಗಿದ್ದ ಧಾರವಾಡಕ್ಕೆ ಕಪ್ಪು ಚುಕ್ಕೆಯಾಗಿದೆ. ಕಲಬುರ್ಗಿ ಅವರು ನೇರ ನಡೆ ಮತ್ತು ನೇರ ನುಡಿಗೆ ಮಾತ್ರವಲ್ಲದೆ, ಸಷ್ಟ ಅಭಿವ್ಯಕ್ತಿಗೆ ಹಾಗೂ ಪ್ರಗತಿಪರ ಚಿಂತನೆಗೆ ಹೆಸರಾಗಿದ್ದರು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

'ಸ್ನೇಹ ಜೀವಿ ಹತ್ಯೆ ಖಂಡನೀಯ'
ಡಾ.ಎಂ.ಎಂ.ಕಲಬುರ್ಗಿ ಅವರ ನಿಧನಕ್ಕೆ ಧಾರವಾಡ ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಅಧ್ಯಕ್ಷ ಪ್ರಹ್ಲಾದ್ ಜೋಶಿ ಸಂತಾಪ ಸೂಚಿಸಿದ್ದಾರೆ. 'ನನ್ನ ಅವರ ಒಡನಾಟ ಚೆನ್ನಾಗಿತ್ತು. ಅವರ ನಿರ್ದೇಶನದಂತೆ ಬಾರೋ ಸಾಧನಕೇರಿಗೆ ಯೋಜನೆಯನ್ನು ನಾನು ಮಾಡಿಸಿದ್ದೆ. ಸ್ನೇಹಜೀವಿಯಾದ ಕಲಬುರ್ಗಿ ಅವರ ಹತ್ಯೆ ನಿಜಕ್ಕೂ ಖಂಡನೀಯ. ಈ ಬಗ್ಗೆ ತನಿಖೆ ನಡೆಸಬೇಕೆಂದು' ಅವರು ಆಗ್ರಹಿಸಿದ್ದಾರೆ.

'ತುಂಬಾ ಆಘಾತವಾಗಿದೆ'
ಎಂ.ಎಂ.ಕಲಬುರ್ಗಿ ಅವರ ನಿಧನಕ್ಕೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಸಂತಾಪ ಸೂಚಿಸಿದ್ದಾರೆ. 'ನೇರ ನುಡಿಯ ನಿಷ್ಠುರವಾದಿ ಸಾಹಿತಿ ಎಂ.ಎಂ.ಕಲಬುರ್ಗಿ ಅವರ ನಿಧನದಿಂದ ತುಂಬ ಆಘಾತವಾಗಿದೆ. ಕನ್ನಡ ಸಾಹಿತ್ಯ ಲೋಕ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ. ಈ ಹತ್ಯೆಯ ಬಗ್ಗೆ ಸಮಗ್ರ ತನಿಖೆ ನಡೆಯಬೇಕು' ಎಂದು ಶೆಟ್ಟರ್ ಒತ್ತಾಯಿಸಿದ್ದಾರೆ.

'ಯಾರೊಂದಿಗೂ ದ್ವೇಷವಿರಲಿಲ್ಲ'
'ಕನ್ನಡ ಸಾಹಿತ್ಯ ಲೋಕದ ಮತ್ತೊಂದು ಕೊಂಡಿ ಕಳಚಿದಂತಾಗಿದೆ ಎಂದು ಹಿರಿಯ ಸಾಹಿತಿ ಚನ್ನವೀರ ಕಣವಿ ಸಂತಾಪ ಸೂಚಿಸಿದ್ದಾರೆ. ಕಲಬುರ್ಗಿ ಅವರಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿರಲಿಲ್ಲ. ಏಕಾಗಿ ಈ ಹತ್ಯೆ ನಡೆದಿದೆ ಎಂಬುದು ತಿಳಿದಿಲ್ಲ. ನಿಷ್ಠೆ, ವೃತ್ತಿಪರತೆ, ನೇರ ನುಡಿಗೆ ಕಲಬುರ್ಗಿಯವರು ಹೆಸರಾಗಿದ್ದರು' ಎಂದು ಕಣವಿ ಬಣ್ಣಿಸಿದ್ದಾರೆ.

'ನಮ್ಮ ಭಿನ್ನಾಭಿಪ್ರಾಯ ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿತ್ತು'
'ಎಂ.ಎಂ.ಕಲಬುರ್ಗಿ ಹಾಗೂ ನನ್ನ ನಡುವೆ ವೈಚಾರಿಕವಾಗಿ ಭಿನ್ನಾಭಿಪ್ರಾಯಗಳಿದ್ದವು. ಆದರೆ, ಅದು ಸಾಹಿತ್ಯಕ್ಕೆ ಮಾತ್ರ ಸೀಮಿತವಾಗಿದ್ದು ಎಂದು ಹಿರಿಯ ಸಂಶೋಧಕ ಎಂ.ಚಿದಾನಂದಮೂರ್ತಿ ಸಂತಾಪ ಸೂಚಿಸಿದ್ದಾರೆ. 'ನಾನು ಮತ್ತು ಅವರು ಉತ್ತಮ ಸ್ನೇಹಿತರಾಗಿದ್ದೆವು. ಅವರ ದುರಂತ ಸಾವು ನನಗೆ ಆಘಾತ ತಂದಿದೆ' ಎಂದು ಚಿದಾನಂದಮೂರ್ತಿ ಕಂಬನಿ ಮಿಡಿದಿದ್ದಾರೆ.

'ಕಲಬುರಗಿ ಅವರ ಹತ್ಯೆ ನೋವು ತಂದಿದೆ'
ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರು ಕಲಬುರ್ಗಿ ಅವರ ಹತ್ಯೆಗೆ ಕಂಬನಿ ಮಿಡಿದಿದ್ದಾರೆ. 'ಕನ್ನಡ ಮತ್ತು ಸಂಸ್ಕೃತಿ ಸಚಿವನಾಗಿದ್ದಾಗ ಎಂ.ಎಂ.ಕಲಬುರ್ಗಿಯವರು ನನಗೆ ಅನೇಕ ಸಲಹೆಗಳನ್ನು ನೀಡಿದ್ದರು. ಅವರೊಬ್ಬ ಮೇಧಾವಿ ಸಂಶೋಧಕರಾಗಿದ್ದರು. ಅವರ ಹತ್ಯೆ ನನಗೆ ಅಪಾರ ನೋವು ತಂದಿದೆ' ಎಂದು ಗೋವಿಂದ ಕಾರಜೋಳ ಅವರು ಸಂತಾಪ ಸೂಚಿಸಿದ್ದಾರೆ.

'ಸಾವನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ'
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಅವರು ಕಲಬುರ್ಗಿ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ. 'ಯುವ ಬರಹಗಾರರ ಮಾತುಗಳನ್ನು ಮೌಲ್ಯಯುತವಾಗಿ ತೆಗೆದುಕೊಳ್ಳುವ ಮೂಲಕ ನಮ್ಮಂತಹವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತಿದ್ದವರು. ಅವರ ಇಂತಹ ಸಾವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ' ಎಂದು ಅವರು ಹೇಳಿದ್ದಾರೆ.












Click it and Unblock the Notifications