Ration: ಅಕ್ಟೋಬರ್ ಆಹಾರ ಧಾನ್ಯ ಬಿಡುಗಡೆಗೊಳಿಸಿದ ಸರ್ಕಾರ, ಪಡಿತರು ಗಮನಿಸಿ
ಧಾರವಾಡ, ಅಕ್ಟೋಬರ್ 09: ಸಾಲು ಸಾಲು ಹಬ್ಬಗಳು ಎದುರಾಗಿವೆ. ಸದ್ಯ ವಿಜೃಂಭಣೆಯಿಂದ ದಸರಾ ಹಬ್ಬ ಆಚರಿಸಲಾಗುತ್ತಿದೆ. ಇದೇ ತಿಂಗಳಾಂತ್ಯಕ್ಕೆ ದೀಪಾವಳಿ ಸಹ ಬರಲಿದ್ದು, ಗೃಹಿಣಿಯರು ಅಕ್ಟೋಬರ್ ತಿಂಗಳ ರೇಷನ್ ಯಾವಾಗ ಕೊಡ್ತಾರೆ ಎಂದು ಕಾಯುತ್ತಿದ್ದರು. ಅವರಿಗೆಲ್ಲ ಸರ್ಕಾರ ಸಿಹಿ ಸುದ್ದಿ ನೀಡಿದೆ. ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಅಕ್ಟೋಬರ-2024 ರ ಮಾಹೆಯ ಆಹಾರಧಾನ್ಯ ಬಿಡುಗಡೆ ಮಾಡಿದೆ.
ಅಕ್ಟೋಬರ್ 2024ರಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಚಾಲ್ತಿಯಲ್ಲಿರುವ ಪಡಿತರ ಚೀಟಿದಾರರಿಗೆ ಪಡಿತರ ಆಹಾರಧಾನ್ಯಗಳನ್ನು ಬಿಡುಗಡೆ ಮಾಡಿದೆ. ಇನ್ನೇನು ಎಂದಿನಂತೆ ವಿತರನೆ ಸಹ ಶುರುವಾಗಲಿದ್ದು, ಈ ಮೂಲಕ ಮಹಿಳೆಯರ ಚಿಂತೆಯನ್ನು ದೂರ ಮಾಡಿದೆ ಎನ್ನಬಹುದು.

ಅಕ್ಕಿ, ಜೋಳ ಉಚಿತ ವಿತರಣೆ
ಅಕ್ಟೋಬರ್ ತಿಂಗಳಲ್ಲಿ ಪಡಿತರ ವಿತರಣೆಯಲ್ಲಿ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ ಪ್ರತಿ ಪಡಿತರ ಚೀಟಿಗೆ ಅಕ್ಕಿ 21 ಕೆಜಿ, ಜೋಳ 14 ಕೆಜಿ ಉಚಿತ ನೀಡಲಾಗುತ್ತದೆ. PHH (ಬಿಪಿಎಲ್) ಪಡಿತರ ಚೀಟಿದಾರರ ಕುಟುಂಬ ಪ್ರತಿ ಸದಸ್ಯರಿಗೆ ತಲಾ 3ಕೆ.ಜಿ. ಅಕ್ಕಿ, ಎರಡು ಕೆ.ಜಿ. ಜೋಳ ಉಚಿತವಾಗಿ ನೀಡಲಾಗುತ್ತಿದೆ.
ಅಂತಾರಾಜ್ಯ ಪೋರ್ಟೆಬಿಲಿಟಿ ಮೂಲಕ ಪಡಿತರ ಪಡೆಯುವವರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ಸದಸ್ಯರಿಗೆ 5 ಕೆಜಿ ಅಕ್ಕಿ ಉಚಿತವಾಗಿ ಪೂರೈಕೆ ಮಾಡಲಾಗುತ್ತಿದೆ. ಇನ್ನು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪಡಿತರ ಚೀಟಿದಾರರು ತಮ್ಮ ಜಾತಿ ಪ್ರಮಾಣ ಪತ್ರವನ್ನು (ಆರ್‌ಡಿ ಸಂಖ್ಯೆ ಹೊಂದಿರುವ) ತೆಗೆದುಕೊಂಡು ತಮಗೆ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.
ಜಿಲ್ಲೆಯ ಫಲಾನುಭವಿಗಳ ವಿವರ
ಧಾರವಾಡ ಜಿಲ್ಲೆಯಲ್ಲಿ ಒಟ್ಟು 29,430 ಅಂತ್ಯೋದಯ ಕಾರ್ಡ್ ಫಲಾನುಭವಿಗಳು, ಒಟ್ಟು 3,55,200 ಬಿಪಿಎಲ್ ಒಟ್ಟು 3,84,630 ಪಡಿತರ ಚೀಟಿ ಫಲಾನುಭವಿಗಳು ಆಹಾರಧಾನ್ಯ ಪಡೆಯಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ..

ಅಕ್ಟೋಬರ್ ತಿಂಗಳ ಒಂದನೇ ದಿನಾಂಕದಿಂದ ತಿಂಗಳ ಕೊನೆಯವರೆಗೆ ಬೆಳಗ್ಗೆ 07 ರಿಂದ ಮಧ್ಯಾಹ್ನ 12 ಗಂಟೆಯವರೆಗೆ, ಸಾಯಂಕಾಲ 04 ರಿಂದ ರಾತ್ರಿ 09 ಗಂಟೆಯವರೆಗೆ ಬಾಕಿ ಇರುವ ಪಡಿತರದಾರರು ಇ- ಕೆವೈಸಿ ಮಾಡಿಸಿಕೊಳ್ಳಬೇಕು. ಮಂಗಳವಾರ ರಜಾ ದಿನ ಹಿನ್ನೆಲೆಯಲ್ಲಿ ಅಂದು ಕೆವೈಸಿ ಮಾಡಿಸಿಕೊಳ್ಳಲು ಆಗುವುದಿಲ್ಲ.
ಅಲ್ಲದೇ ಎನ್‍ಎಫ್‍ಎಸ್‍ಎ ಯಡಿ ಪಡಿತರ ವಿತರಣೆ ಕಾರ್ಯ ಜರುಗಲಿದೆ. ಈ ಕಾರಣ ಪಡಿತರ ಚೀಟಿದಾರರು ಬಯೋ ನೀಡಿದ ತಕ್ಷಣವೇ ಪಡಿತರ ಪಡೆಯಲು ತಿಳಿಸಿದೆ. ಇ-ಕೆವೈಸಿ ಸಂಪೂರ್ಣ ಉಚಿತವಾಗಿದೆ. ಯಾವುದೇ ಶುಲ್ಕ ಇರುವುದಿಲ್ಲ. ಪಡಿತರ ಚೀಟಿದಾರರು ತಮಗೆ ಹಂಚಿಕೆ ಮಾಡಿದ ಆಹಾರಧಾನ್ಯವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಅಂತಹವರ ಪಡಿತರ ಚೀಟಿಯನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ತಿಳಿಸಿದೆ..
ಇನ್ನೂ ಇಲ್ಲಿ ರೇಷನ್ ಪಡೆದು ಅನಧಿಕೃತ ಕಾಳಸಂತೆಯಲ್ಲಿ ಆಹಾರಧಾನ್ಯ ಮಾಡಿದರೆ, ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.












Click it and Unblock the Notifications