ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತನ ಮನೆ ಮೇಲೆ ಐಟಿ ದಾಳಿ
ಧಾರವಾಡ, ಅಕ್ಟೋಬರ್ 28: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆಪ್ತನ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆಯ ಮೇಲೆ ಐಟಿ ದಾಳಿ ನಡೆದಿದೆ.
ಧಾರವಾಡದ ದಾಸನಕೊಪ್ಪ ಸರ್ಕಲ್‌ನಲ್ಲಿ ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆಯಿದೆ. ಇದೇ ಸಂದರ್ಭದಲ್ಲಿ ಡಿ.ಕೆ. ಶಿವಕುಮಾರ್ ಆಪ್ತರಾದ ರಾಬರ್ಟ್ ದದ್ದಾಪುರಿ ಮತ್ತು ಆನಂದ ಜಾಧವ್ಗೆ ಐಟಿ ಅಧಿಕಾರಿಗಳು ಬುಲಾವ್ ನೀಡಿದ್ದಾರೆ.
ಕಾಂಗ್ರೆಸ್ ಮುಖಂಡರಿಬ್ಬರೂ ಯು.ಬಿ. ಶೆಟ್ಟಿ ಮನೆಗೆ ಆಗಮಿಸಿದಾಗ ಅವರನ್ನೂ ಅಧಿಕಾರಿಗಳು ಮನೆಯೊಳಗೆ ಕರೆದೊಯ್ದಿದ್ದಾರೆ. ಗೋವಾದಿಂದ ಬಂದಿರುವ ಐವರು ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆದಿದೆ.
80ನೇ ಇಸ್ವಿಯಿಂದಲೂ ಡಿಕೆ ಶಿವಕುಮಾರ್ಗೆ ಯು.ಬಿ. ಶೆಟ್ಟಿ ಆಪ್ತ
ಗುತ್ತಿಗೆದಾರ ಯು.ಬಿ. ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ ದಾಳಿ ಹಿನ್ನೆಲೆ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಹೇಳಿಕೆ ನೀಡಿದ್ದು, ಮಾಧ್ಯಮದಲ್ಲಿ ಐಟಿ ದಾಳಿ ಸುದ್ದಿ ನೋಡಿ ಬಂದಿದ್ದೇನೆ. ನಮಗೆ ಒಳಗೆ ಹೋಗಲು ಬಿಡಲಿಲ್ಲ. ಬಳಿಕ ಶೆಟ್ಟಿ ಅವರೇ ಫೋನ್ ಮಾಡಿದರು. ಇಬ್ಬರು ಸಾಕ್ಷಿ ಬೇಕು ಅಂತಾ ಕೇಳಿದರು. ಇಬ್ಬರು ಸಾಕ್ಷಿದಾರರನ್ನು ಕೊಟ್ಟಿದ್ದೇವೆ. ಇತ್ತೀಚಿಗೆ ಅವರು ಶಿಕ್ಷಣ ಕ್ಷೇತ್ರಕ್ಕೆ ಬಂದಿದ್ದಾರೆ. ಇತ್ತೀಚೆಗೆ ಗುತ್ತಿಗೆ ಕಾಮಗಾರಿ ಬಿಟ್ಟಿದ್ದಾರೆ.
80ನೇ ಇಸ್ವಿಯಿಂದಲೂ ಡಿ.ಕೆ. ಶಿವಕುಮಾರ್ ಅವರೊಂದಿಗೆ ಒಡನಾಟ ಹೊಂದಿದ್ದಾರೆ. ಉಡುಪಿ, ಮಂಗಳೂರಿನಲ್ಲಿ ಚುನಾವಣೆಗೆ ಯು.ಬಿ. ಶೆಟ್ಟಿ ಯತ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದಾಳಿಯಾಗಿರಬಹುದು ಎಂದು ತಿಳಿಸಿದ್ದಾರೆ. ರಾಜ್ಯದ ಪ್ರತಿಷ್ಠಿತ ಗುತ್ತಿಗೆದಾರರಾಗಿರುವ ಯು.ಬಿ. ಶೆಟ್ಟಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಉಪ್ಪುಂದ ಗ್ರಾಮದವರು.
ಯು.ಬಿ. ಶೆಟ್ಟಿ ಅವರ ಸಹೋದರನ ಮನೆಯ ಮೇಲೂ ಸಹ ಅಧಿಕಾರಿಗಳು ಭೇಟಿ ನೀಡಿ ಕೆಲ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ:
"ಯು.ಬಿ. ಶೆಟ್ಟಿ ಅವರ ಮನೆ ಮೇಲೆ ಐಟಿ ದಾಳಿ ನಡೆದಿರುವುದರಿಂದ ಉಪಚುನಾವಣೆಯ ಮೇಲೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಸಿಂದಗಿ ಮತ್ತು ಹಾನಗಲ್ ಕ್ಷೇತ್ರದ ಉಪಚುನಾವಣೆಯ ಮತದಾನ ಅ.30.ರಂದು ನಡೆಯಲಿದೆ. ಎರಡೂ ಕ್ಷೇತ್ರಗಳಲ್ಲಿ ಈಗಾಗಲೇ ಕಾಗ್ರೆಸ್ ಪರವಾದ ಅಲೆ ಇದ್ದು, ಈ ರೀತಿಯ ಐಟಿ ದಾಳಿಗಳು ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅವರು ಗುರುವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.