ಹು-ಧಾ ಪಾಲಿಕೆ ಚುನಾವಣೆ; 420 ಅಭ್ಯರ್ಥಿಗಳು ಕಣದಲ್ಲಿ
ಧಾರವಾಡ, ಆಗಸ್ಟ್ 27; ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 82 ವಾರ್ಡ್‌ಗಳಿಗೆ ನಡೆಯುವ ಚುನಾವಣೆಗೆ 420 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಸೆಪ್ಟೆಂಬರ್ 3ರಂದು ಬೆಳಗ್ಗೆ 7ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.
ಮಹಾನಗರ ಪಾಲಿಕೆ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಗುರುವಾರ ಕೊನೆಯ ದಿನವಾಗಿತ್ತು. ವಿವಿಧ ವಾರ್ಡುಗಳಲ್ಲಿ ನಾಮಪತ್ರ ಸಿಂಧುವಾಗಿದ್ದ 486 ಅಭ್ಯರ್ಥಿಗಳ ಪೈಕಿ 66 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದಿದ್ದಾರೆ.
ಅಂತಿಮವಾಗಿ 82 ವಾರ್ಡ್‌ಗಳಲ್ಲಿ 420 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ. ಸೆಪ್ಟೆಂಬರ್ 3ರಂದು ಮತದಾನ ನಡೆಯಲಿದ್ದು, ಸೆಪ್ಟೆಂಬರ್ 6ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

ಯಾವ ಪಕ್ಷ ಎಷ್ಟು?; ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎಲ್ಲ 82 ವಾರ್ಡ್‍ಗಳಲ್ಲಿ ಕಣದಲ್ಲಿದ್ದಾರೆ. ಜೆಡಿಎಸ್ 49, ಸಿಪಿಐ (ಎಮ್) 1, ಬಿಎಸ್‍ಪಿ 7, ಎಎಪಿ 1, ಉತ್ತಮ ಪ್ರಜಾಕೀಯ 11, ಕರ್ನಾಟಕ ರಾಷ್ಟ್ರ ಸಮಿತಿ 4, ಎಐಎಮ್‍ಐಮ 12, ಎಸ್‍ಡಿಪಿಐ 4, ಕರ್ನಾಟಕ ಶಿವಸೇನೆ 4, ಕರ್ನಾಟಕ ಜನಸೇವೆ ಪಾರ್ಟಿ 1, ಪಕ್ಷೇತರ 122 ಸೇರಿದಂತೆ ಒಟ್ಟು 420 ಅಭ್ಯರ್ಥಿಗಳು ಅಂತಿಮವಾಗಿ ಕಣದಲ್ಲಿದ್ದಾರೆ.
ಅತಿ ಹೆಚ್ಚು ಅಂದರೆ 11 ಜನ ಉಮೇದುವಾರರು ಒಂದು ವಾರ್ಡ್‌ನಲ್ಲಿ ಕಣದಲ್ಲಿ ಇದ್ದಾರೆ. ಹಿಂದುಳಿದ 'ಬ' ವರ್ಗಕ್ಕೆ ಮೀಸಲಿರುವ ವಾರ್ಡ್ 14, ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ವಾರ್ಡ್ 19, 44, 57, 80 ಹಾಗೂ ಪರಿಶಿಷ್ಟ ಜಾತಿ ಮೀಸಲಾಗಿರುವ ವಾರ್ಡ್ 58ರಲ್ಲಿ ಅತಿ ಕಡಿಮೆ ಅಂದರೆ ತಲಾ ಇಬ್ಬರು ಅಭ್ಯರ್ಥಿಗಳು ಮಾತ್ರ ಕಣದಲ್ಲಿ ಉಳಿದಿದ್ದಾರೆ.
ಮತದಾನದ ಅವಧಿ ವಿಸ್ತರಣೆ; ಆಗಸ್ಟ್ 11ರಂದು ಮಹಾನಗರ ಪಾಲಿಕೆಯ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದೆ. ಸೆಪ್ಟೆಂಬರ್ 3ರಂದು ಬೆಳಗ್ಗೆ 7ರಿಂದ ಸಂಜೆ 5 ಗಂಟೆಯ ತನಕ ಮತದಾನ ಮಾಡಬಹುದು ಎಂದು ತಿಳಿಸಲಾಗಿತ್ತು. ಈಗ ಮತದಾನದ ಅವಧಿ ವಿಸ್ತರಣೆ ಮಾಡಲಾಗಿದೆ.
ಸೆಪ್ಟೆಂಬರ್ 3ರಂದು ನಡೆಯಲಿರುವ ಮತದಾನದ ಅವಧಿಯನ್ನು 1 ಗಂಟೆ ವಿಸ್ತರಿಸಿ ಅಂದರೆ ಸಂಜೆ 5 ಗಂಟೆಯ ಬದಲಾಗಿ 6 ಗಂಟೆಯವರೆಗೆ ವಿಸ್ತರಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ.
ಪ್ರಸ್ತುತ ಕೊವಿಡ್ ಸೋಂಕಿನ ಹಿನ್ನೆಲೆಯಲ್ಲಿ ಹಾಗೂ ಕೇಂದ್ರ ಗೃಹ ಮಂತ್ರಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಯಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಿ ಚುನಾವಣೆ ನಡೆಸುವುದು ಅವಶ್ಯವಿದೆ.
ಚುನಾವಣೆ ನಡೆಯಲಿರುವ ಎಲ್ಲ ಮತಗಟ್ಟೆಗಳಿಗೆ ಕೋವಿಡ್ ಮುಂಜಾಗ್ರತಾ ಪರಿಕರಗಳು, ಕೋವಿಡ್ ಸುರಕ್ಷತಾ ಕಿಟ್‍ಗಳನ್ನು ಜಿಲ್ಲಾಡಳಿತದ ಮೂಲಕ ಪೂರೈಸಲು ಚುನಾವಣಾ ಆಯೋಗದಿಂದ ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯ 82 ವಾರ್ಡ್‌ಗಳಲ್ಲಿ ಒಟ್ಟು 8,11,537 ಮತದಾರರು ಇದ್ದಾರೆ. ಸೆಪ್ಟೆಂಬರ್ 3ರಂದು ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲ. ಬೆಳಗಾವಿಯ 58 ವಾರ್ಡ್, ಕಲಬುರಗಿ ಮಹಾನಗರ ಪಾಲಿಕೆಯ 55 ವಾರ್ಡ್‌ಗಳಿಗೆ ಸಹ ಮತದಾನ ನಡೆಯಲಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ 67 ವಾರ್ಡ್‌ಗಳಿದ್ದವು. ಈಗ ವಾರ್ಡ್‌ಗಳ ಪುನರ್ ವಿಂಗಡನೆಯಾಗಿದ್ದು ವಾರ್ಡ್‌ಗಳ ಸಂಖ್ಯೆ 82ಕ್ಕೆ ಏರಿಕೆಯಾಗಿದೆ. ವಾರ್ಡ್‌ಗಳ ಪುನರ್ ವಿಂಗಡನೆ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ಚುನಾವಣಾ ಪ್ರಚಾರ; ಮಹಾನಗರ ಪಾಲಿಕೆ ಚುನಾವಣೆಗೆ ಈಗಾಗಲೇ ಅಭ್ಯರ್ಥಿಗಳು ಪ್ರಚಾರವನ್ನು ನಡೆಸುತ್ತಿದ್ದಾರೆ. ರಾಜ್ಯ ಚುನಾವಣಾ ಆಯೋಗ ಕೋವಿಡ್ ಪರಿಸ್ಥಿತಿಯಲ್ಲಿ ಚುನಾವಣೆ ಘೋಷಣೆ ಮಾಡಿದೆ. ಆದ್ದರಿಂದ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಹಾಗೂ ಬಹಿರಂಗ ಪ್ರಚಾರ ನಡೆಸಲು ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.
ಅಭ್ಯರ್ಥಿಯೂ ಸೇರಿ ಗರಿಷ್ಠ 5 ಜನ ಬೆಂಬಲಿಗರೊಂದಿಗೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಮನೆ ಮನೆಗೆ ಭೇಟಿ ನೀಡಿ ಪ್ರಚಾರ ನಡೆಸಬಹುದು. ಪ್ರಚಾರಕ್ಕೆ ವಾಹನ ಬಳಸುವುದನ್ನು ಮತ್ತು ಗುಂಪು ಗುಂಪು ಸೇರಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ.












Click it and Unblock the Notifications