ಭಾರೀ ಮಳೆ: ಜುಲೈ 26 & 27ರಂದು ಧಾರವಾಡ ಜಿಲ್ಲೆಯಲ್ಲಿ ಸಂಭವಿಸಿದ ಹಾನಿ ವಿವರ ತಿಳಿಯಿರಿ
ಧಾರವಾಡ, ಜುಲೈ, 28: ಭಾರೀ ಮಳೆಯಿಂದ ಹಲವು ಜಿಲ್ಲೆಗಳಲ್ಲಿ ದೊಡ್ಡ ದೊಡ್ಡ ಅನಾಹುತಗಲೇ ಸಂಭವಿಸಿವೆ. ಹಾಗೆಯೇ ಧಾರವಾಡ ಜಿಲ್ಲೆಯಲ್ಲಿಯೂ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಸಂಭವಿಸಿದೆ. ಹಾಗಾದರೆ ಜಿಲ್ಲೆಯಲ್ಲಿ ಜುಲೈ 26 & 27ರಂದು ಸಂಭವಿಸಿದ ಹಾನಿಯ ವಿವರವನ್ನು ಇಲ್ಲಿ ತಿಳಿಯಿರಿ.
ನಿರಂತರವಾಗಿ ಮಳೆ ಸುರಿಯುತ್ತಿರುವ ಪರಿಣಾಮ ಧಾರವಾಡ ಜಿಲ್ಲೆಯಲ್ಲಿ ಜುಲೈ 26-27ರಂದು ವಿವಿಧ ತಾಲೂಕುಗಳಲ್ಲಿ ಸುಮಾರು 198 ಮನೆಗಳಿಗೆ ಹಾನಿಯಾಗಿದೆ ಎನ್ನುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಧಾರವಾಡ ತಾಲೂಕಿನಲ್ಲಿ 87, ಅಳ್ನಾವರ ತಾಲೂಕಿನಲ್ಲಿ 4, ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 11, ಹುಬ್ಬಳ್ಳಿ ಶಹರ ತಾಲೂಕಿನಲ್ಲಿ 5 ಮತ್ತು 2 ತೀವ್ರ, ಕಲಘಟಗಿ ತಾಲೂಕಿನಲ್ಲಿ 45, ಕುಂದಗೋಳ ತಾಲೂಕಿನಲ್ಲಿ 26, ನವಲಗುಂದ ತಾಲೂಕಿನಲ್ಲಿ 10 ಮತ್ತು ಅಣ್ಣಿಗೇರಿ ತಾಲೂಕಿನಲ್ಲಿ 8 ಸೇರಿದಂತೆ ಜಿಲ್ಲೆಯ 8 ತಾಲೂಕಗಳಲ್ಲಿನ ಸುಮಾರು 198 ಮನೆಗಳಿಗೆ ಹಾನಿಯಾಗಿದೆ.

ಈ ಕುರಿತು ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನೀರಿಕ್ಷಕರು ತಹಶೀಲ್ದಾರರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ. ತನಿಖಾ ತಂಡದಿಂದ ಪರಿಶೀಲನೆ ಕಾರ್ಯ ಜರುಗಿಸಿ, ಅರ್ಹ ಫಲಾನುಭವಿಗಳಿಗೆ ಪರಿಹಾರ ವಿತರಿಸುವಲ್ಲಿ ಸರ್ಕಾರದ ನಿಯಮಾವಳಿಗಳಂತೆ ಅಗತ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಜಿಲ್ಲೆಯ ವಿವಿಧ ತಾಲೂಕುಗಳ ವಿವಿಧ ಗ್ರಾಮ ಹಾಗೂ ನಗರಗಳಲ್ಲಿ ಮಳೆಯಿಂದಾಗಿ ಏಪ್ರಿಲ್ 1ರಿಂದ ಜುಲೈ 27 ರವರೆಗೆ 677 ಮನೆಗಳಿಗೆ ಭಾಗಶಃ ಹಾಗೂ 15 ಮನೆಗಳಿಗೆ ತೀವ್ರ ಹಾನಿಯಾಗಿದೆ. ಒಟ್ಟಾರೆ ಇಲ್ಲಿಯವರೆಗೆ ಸುಮಾರು 692 ಮನೆಗಳಿಗೆ ಹಾನಿಯಾಗಿದ್ದು, ಈ ಕುರಿತು ಪರಿಶೀಲಿಸಿ ಸಂಬಂಧಪಟ್ಟ ಅಧಿಕಾರಿಗಳು ವರದಿ ಸಲ್ಲಿಸಿದ ನಂತರ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ.
ಸೋರುತಿಹುದು ಬಸ್ ನಿಲ್ದಾಣ ಕಟ್ಟಡದ ಮೇಲ್ಛಾವಣಿ
ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಧಾರವಾಡ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಸ್ವಾಮ್ಯದ ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿವೆ. ಇದಕ್ಕೆ ಸಾಕ್ಷಿ ಎಂಬುವಂತೇ ಹುಬ್ಬಳ್ಳಿಯಿಂದ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರೀಯ ಹೊಸ ಬಸ್‌ನಿಲ್ದಾಣದ ಕಟ್ಟಡದ ಮೇಲ್ಛಾವಣಿ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದೆ. ಸಿಬ್ಬಂದಿ ವಿಶ್ರಾಂತಿ ಗೃಹದ ಗೋಡೆಗಳು ಮಳೆಗೆ ತೇವವಾಗಿದ್ದು, ನೆಮ್ಮದಿಯ ನಿದ್ದೆಗೂ ಅವರು ಪರದಾಡುವಂತಹ ಪರಿಸ್ಥಿನಿ ನಿರ್ಮಾಣವಾಗಿದೆ.
ಶಿಥಿಲಗೊಂಡಿರುವ ಮೇಲ್ಛಾಣಿಯಿಂದ ಮಳೆ ನೀರು ಸೋರುತ್ತಿದ್ದು, ಪ್ರಯಾಣಿಕರು ಕೊಡೆಗಳನ್ನು ಹಿಡಿದು ಆಸನದಲ್ಲಿ ಕೂರುವಂತಾಗಿದೆ. ಬಸ್ ನಿಲ್ದಾಣದ ಮೇಲ್ಛಾವಣಿ ಮೇಲೆ ನೀರು ನಿಂತು ಪುಟ್ಟ ಕೆರೆಯಂತಾಗಿದೆ. ಇನ್ನು ನಿಲ್ದಾಣದಲ್ಲಿನ 15 ಪ್ಲಾಟ್‌ಫಾರ್ಮ್‌ಗಳು ಸೋರುತ್ತಿದ್ದು, 12ನೇ ಪ್ಲಾಟ್‌ಫಾರ್ಮ್ ಸಂಪೂರ್ಣ ಜಲಾವೃತವಾಗಿದೆ.
ಪ್ರವೇಶ ದ್ವಾರದ ಬಲಭಾಗದಲ್ಲಿ ಟೆಂಡರ್ ಪಡೆದಿರುವ ಎರಡು ಅಂಗಡಿಗಳಿದ್ದು, ಸೋರುವ ಮಳೆ ನೀರಿನಿಂದ ರಕ್ಷಿಸಿಕೊಳ್ಳಲು, ಮುಂಭಾಗಕ್ಕೆ ಚಾವಣೆ ಹಾಕಿಕೊಂಡಿದ್ದಾರೆ. ಪ್ರಯಾಣಿಕರು ಸೂಟ್‌ಕೇಸ್, ಬ್ಯಾಗ್‌ಗಳನ್ನು ಹೊತ್ತುಕೊಂಡು ಆಯಾ ಪ್ಲಾಟ್‌ಫಾರ್ಮ್‌ಗಳಿಗೆ ನೀರಿನಲ್ಲೇ ದಾಟಿಕೊಂಡು ಹೋಗಬೇಕಾಗಿದ್ದು, ಮಳೆ ನೀರು ಸೋರದಂತೆ ನಿಯಂತ್ರಿಸಲು ಕಟ್ಟಡದ ಕೆಲ ಕಡೆ ಭೀಮ್‌ಗಳಿಗೆ ಶೀಟ್ ಹಾಕಲಾಗಿದೆ. ಸಿಬ್ಬಂದಿ ವಿಶ್ರಾಂತಿಗೃಹದ ಗೋಡೆಗಳು ತೇವಗೊಂಡಿದ್ದು, ಒಂದು ಭಾಗವನ್ನು ಈತ್ತೀಚೆಗಷ್ಟೇ ಸರಿಪಡಿಸಿ ಪ್ಲಾಸ್ಟರ್ ಮಾಡಲಾಗಿದೆ. ಆದರೆ, ಪೂರ್ಣ ಪ್ರಮಾಣದ ಸುವ್ಯವಸ್ಥೆ ಮಾಡಲಾಗಿಲ್ಲ.
ಸರ್ಕಾರದ ಕಟ್ಟಡದ ಬಾಳಿಕೆ ಅವಧಿ ಕನಿಷ್ಠ 60 ವರ್ಷಗಳಾಗಿವೆ. 2000ನೇ ಇಸವಿಯಲ್ಲಿ ಬಸ್ ನಿಲ್ದಾಣ ಉದ್ಘಾಟನೆಯಾಗಿದೆ. ಅನುದಾನ ಕೊರತೆಯಿಂದ ಬಸ್ ನಿಲ್ದಾಣ ನಿರ್ವಹಣೆ ಕಷ್ಟವಾಗಿದೆ. ಪೈಪ್‌ಗಳಲ್ಲಿ ಕಸ ತುಂಬಿದ್ದು, ಮಳೆ ನೀರು ಹರಿಯುವುದಿಲ್ಲ. ಆದ್ದರಿಂದ ಚಾವಣಿ ಮೇಲೆ ನೀರು ಹರಿಯದೇ ಸೋರುತ್ತದೆ. ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಾಯವ್ಯ ಸಾರಿಗೆ ಸಂಸ್ಥೆಯ ಕಾರ್ಯನಿರ್ವಾಹಕ ಎಂಜಿನಿಯರ್ ಮಾಹಿತಿ ನೀಡಿದ್ದಾರೆ. ಹೆದ್ದಾರಿಗೆ ಉರುಳಿದ ಬೃಹತ್ ಗಾತ್ರದ ಮರ ಇನ್ನು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬಿಡುವಿಲ್ಲದೆ ಅಬ್ಬರಿಸುತ್ತಿದೆ. ನಿರಂತರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಹೊರನಾಡು ಹಾಗೂ ಕೊಟ್ಟಿಗೆಹಾರಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರವೊಂದು ಬಿದ್ದು ಕೆಲ ಗಂಟೆಗಳ ಕಾಲ ಸಂಪರ್ಕ ಅಸ್ತವ್ಯಸ್ಥವಾದ ಘಟನೆ ಇತ್ತೀಚೆಗಷ್ಟೇ ನಡೆದಿತ್ತು
ಸ್ಥಳೀಯರು ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮರ ತೆರವು ಕಾರ್ಯಾಚರಣೆ ಬಳಿಕ ವಾಹನ ಸವಾರರು ನಿಟ್ಟುಸಿರು ಬಿಡುವಂತಾಗಿದೆ. ಧರ್ಮಸ್ಥಳ ವಿಪತ್ತು ನಿರ್ವಹಣಾ ತಂಡ ಹಾಗೂ ಸ್ಥಳೀಯರ ನೆರವಿನಿಂದ ರಸ್ತೆಯಲ್ಲಿ ಬಿದ್ದಿದ್ದ ಮರ ತೆರವು ಕಾರ್ಯಾಚರಣೆ ನಡೆದಿದ್ದು, ಧಾರಾಕಾರ ಮಳೆಯ ನಡುವೆಯೂ ವಿಪತ್ತು ನಿರ್ವಹಣಾ ತಂಡದ ಕಾರ್ಯಾಚರಣೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು.












Click it and Unblock the Notifications