ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್: ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದ ಮುತಾಲಿಕ್
ಧಾರವಾಡ, ಜನವರಿ, 08: ಬೆಳಗಾವಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷನ ಮೇಲೆ ಗುಂಡಿನ ದಾಳಿಯನ್ನು ನಾನು ಖಂಡಿಸುತ್ತೇನೆ. ಪೊಲೀಸರು ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡದಲ್ಲಿ ಆಗ್ರಹಿಸಿದ್ದಾರೆ.
ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಮುತಾಲಿಕ್, ಬೆಳಗಾವಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ರವಿ ಮೇಲೆ ದುಷ್ಕರ್ಮಿಗಳಿಂದ ಫೈರಿಂಗ್ ಆಗಿದೆ. ರವಿ ಕುತ್ತಿಗೆಗೆ ಗುಂಡು ತಾಗಿ ಚಾಲಕನ ಕೈಗೆ ಹೋಗಿ ಸಿಕ್ಕಿಹಾಕಿಕೊಂಡಿದೆ. ಬಹಳ ದೊಡ್ಡ ಪ್ರಮಾಣದ ಹಲ್ಲೆ ಇದಾಗಿದೆ. ದೇವರ ದಯೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಲ್ಲೆಯನ್ನು ನಾನು ಖಂಡಿಸುತ್ತೇನೆ. ಈ ಆಟ ನಡೆಯುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ
ಹಿಂದೂಗಳಿಗೋಸ್ಕರ ಇರುವ ಸಂಘಟನೆ ನಿಮ್ಮ ಗುಂಡು, ಬಾಂಬ್ ಹಾಗೂ ಕತ್ತಿಗೆ ಹೆದರಲ್ಲ. ನಿಮಗೆ ಎಚ್ಚರಿಕೆ ಕೊಡುತ್ತೇನೆ. ಸಿಸಿಟಿವಿ ನೋಡಿ ಬೈಕ್ ಮೇಲೆ ಬಂದಿದ್ದ ದುಷ್ಕರ್ಮಿಗಳನ್ನು ಕಂಡುಹಿಡಿದು ಪೊಲೀಸರು ಬಂಧಿಸಬೇಕು. ನಾಳೆ ನಾವು ಇಡೀ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ. ಗುಂಡು ಹೊಡೆದವರಿಗೆ ಉತ್ತರ ಕೊಡುವುದಕ್ಕೆ ಪ್ರತಿಭಟನೆ ಮಾಡುತ್ತೇವೆ. ಹಿಂದೂ ಸಂಘಟನೆ ತಾಕತ್ತಿನಿಂದ ಕೂಡಿದೆ. ಹಿಂದೂ ಸಮಾಜ ಧೈರ್ಯದಿಂದ ಇದೆ. ನಿಮ್ಮ ಗುಂಡುಗಳಿಗೆ ಹೆದರುವುದಿಲ್ಲ. ದುಷ್ಕರ್ಮಿಗಳು ಈ ರೀತಿಯ ಪುಂಡಾಟಿಕೆಯನ್ನು ನಿಲ್ಲಿಸಬೇಕು. ಬೆಳಗಾವಿಯಲ್ಲಿ ನಾಳೆ ಹಿಂದೂ ಸಮಾಜೋತ್ಸವ ಇದ್ದು, ನಾನು ಬರುತ್ತಿದ್ದೇನೆ. ಕಾರ್ಯಕ್ರಮ ಯಶಸ್ವಿಯಾಗಲಿದೆ. ನಿಮ್ಮ ನಾಚಿಕೆಗೇಡಿತನಕ್ಕೆ ಕಾರ್ಯಕ್ರಮದ ಮೂಲಕ ಉತ್ತರ ಕೊಡುವಂತಹ ಸಭೆ ಮಾಡಿ ನಿಶ್ಚಯ ಮಾಡುತ್ತೇವೆ ಎಂದಿದ್ದಾರೆ.

ರಾಮಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ
ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ನಮ್ಮ ವಿರೋಧವಿಲ್ಲ. ರಾಮಮಂದಿರವನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು. ನಾನು ಹಿಂದೂ ವಿರೋಧಿಯಲ್ಲ, ಹಿಂದೂತ್ವದ ವಿರೋಧಿಯಾಗಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇನ್ನೊಂದು ಧರ್ಮದ ವಿರುದ್ಧ ಎತ್ತಿಕಟ್ಟಲು ಅದನ್ನು ರಾಜಕೀಯವಾಗಿ ಬಳಸಿಕೊಳ್ಳಬಾರದು ಎಂಬುದು ನಮ್ಮ ವಿರೋಧವಾಗಿದೆ. ಪ್ರತಿ ಹಳ್ಳಿಯಲ್ಲಿ ರಾಮ ಹಾಗೂ ಆಂಜನೇಯ ಮಂದಿರಗಳಿವೆ.

ನಾವು ಅವನ್ನು ಕಟ್ಟಿಲ್ಲವೇ, ಸುಮ್ಮನೆ ರಾಜಕಾರಣ ಮಾಡಬಾರದು ಎಂದರು. ಹಾಗೆಯೇ ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಧರ್ಮ ಹಾಗೂ ಜಾತಿ ಹೆಸರಿನಲ್ಲಿ ರಾಜಕೀಯ ಮಾಡಿದರೆ ಅದು ತಪ್ಪು. ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮಾನವಾಗಿವೆ. ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಹಿಂದೂ ವಿರೋಧಿಯಲ್ಲ, ಹಿಂದೂತ್ವದ ವಿರೋಧಿಯಾಗಿದ್ದೇನೆ ಎಂದು ಹೇಳಿದರು.












Click it and Unblock the Notifications