ಟಿಕೆಟ್ ಚೆಕ್ ಮಾಡಲು ಬಸ್ ಹತ್ತಿದವ ಪೊಲೀಸರ ಅತಿಥಿ!
ಹುಬ್ಬಳ್ಳಿ, ನವೆಂಬರ್ 06 : ಧಾರವಾಡದಿಂದ ಹುಬ್ಬಳ್ಳಿಗೆ ಬರುವ ನಗರ ಸಾರಿಗೆ ಬಸ್ ಹತ್ತಿ, ಟಿಕೆಟ್ ಚೆಕ್ ಮಾಡಲು ಹೋದ ಟಿಸಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ನಕಲಿ ಐಡಿ ಕಾರ್ಡ್ ಹಿಡಿದುಕೊಂಡು ಸಾರಿಗೆ ಸಂಸ್ಥೆ ಬಸ್ಸುಗಳ ತನಿಖಾಧಿಕಾರಿ ಎಂದು ಸುಳ್ಳು ಹೇಳಿದ್ದ ಈತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಬಂಧಿತ ಆರೋಪಿಯನ್ನು ಬಳ್ಳಾರಿಯ ಗುರುಬಸವರಾಜ್ ಎಂದು ಗುರುತಿಸಲಾಗಿದೆ. ಗುರುವಾರ ಧಾರವಾಡದಿಂದ ಹುಬ್ಬಳ್ಳಿಗೆ ಬರುವ ನಗರ ಸಾರಿಗೆ ಬಸ್ ಹತ್ತಿದ್ದ ಈತ, ನಕಲಿ ಐಡಿ ಕಾರ್ಡ್ ತೋರಿಸಿ ಕಂಡಕ್ಟರ್ ಚೆಕ್ ಮಾಡಲು ಮುಂದಾಗಿದ್ದ, ಹುಬ್ಬಳ್ಳಿಗೆ ಬಸ್ ಬಂದಾಗ ಇತರೆ ಸಿಬ್ಬಂದಿ ಸಹಕಾರ ಪಡೆದ ಕಂಡಕ್ಟರ್ ಈತನನ್ನು ಹಿಡಿದುಕೊಟ್ಟಿದ್ದಾನೆ. [ksrtc ಮಾಸಿಕ ಪಾಸು ದರ ಹೆಚ್ಚಳ]

ಟಿಕೆಟ್ ತೆಗೆದುಕೊಳ್ಳಲ್ಲ ಅಂದ : ಗುರುಬಸವರಾಜ್ ಬಸ್ ಹತ್ತುತ್ತಿದ್ದಂತೆ ಕಂಡಕ್ಟರ್ ಟಿಕೆಟ್ ತೆಗೆದುಕೊಳ್ಳಿ ಎಂದಾಗ ನಾನು ಟಿಸಿ ಎಂದು ಈತ ಕಂಡಕ್ಟರ್‌ಗೆ ದಬಾಯಿಸಿದ್ದ. ಸಂಶಯಗೊಂಡ ಕಂಡಕ್ಟರ್ ಐಡಿ ಕಾರ್ಡ್ ತೋರಿಸಲು ಸೂಚಿಸಿದ್ದ. [ನೇಮಕಾತಿ ಆದೇಶವಿಲ್ಲ. ಆದರೂ ದುಡಿಯುವುದು ತಪ್ಪಿಲ್ಲ]
ಐಡಿ ಕಾರ್ಡ್ ನೋಡಿದ ಕೂಡಲೇ ಇದು ನಕಲಿ ಎಂದು ತಿಳಿದ ಕಂಡಕ್ಟರ್ ಟಿಕೆಟ್ ತೆಗೆದುಕೊಳ್ಳಲೇಬೇಕು ಎಂದು ಹೇಳಿದ್ದ. ನಂತರ ಟಿಕೆಟ್ ತೆಗೆದುಕೊಂಡ ಗುರುಬಸವರಾಜ್ ಕಂಡಕ್ಟರ್ ಮೇಲೆ ತಪಾಸಣೆ ಮಾಡುತ್ತೇನೆ ಎಂದು ಬೆದರಿಸುತ್ತಿದ್ದ.
ಬಸ್ ಹುಬ್ಬಳ್ಳಿಗೆ ಬಂದ ಮೇಲೆ ಇತರ ಸಿಬ್ಬಂದಿ ಸಹಾಯದಿಂದ ಕಂಡಕ್ಟರ್ ಟಿಸಿಯನ್ನು ಕಚೇರಿಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ವಾಯವ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿಯು ಈತನನ್ನು ತರಾಟೆಗೆ ತೆಗದುಕೊಂಡು ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದರು. ಸ್ಥಳಕ್ಕೆ ಬಂದ ಪೊಲೀಸರು ಗುರುಬಸವರಾಜ್‌ನನ್ನು ಬಂಧಿಸಿದ್ದಾರೆ.












Click it and Unblock the Notifications