ಜಲದಿಂದ ಮನುಜ ಕುಲ, ಜಲವೇ ಜೀವ ಸಂಕುಲ

Subscribe to Oneindia Kannada

ಧಾರವಾಡ, ಮಾರ್ಚ್, 22- ಇತಿಹಾಸದ ಪುಟ ತೆರೆದು ನೋಡಿದಾಗ, ಹೊನ್ನು, ಮಣ್ಣು ಮತ್ತು ಹೆಣ್ಣಿಗಾಗಿ ಯುದ್ಧಗಳು ನಡೆದಿವೆ. ಆದರೆ ಮುಂದೊಂದು ದಿನ ಕುಡಿಯುವ ನೀರಿಗಾಗಿ ಯುದ್ಧ ನಡೆದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಸಂಜೀವಕುಮಾರ ಭೂಶೆಟ್ಟಿ ಆತಂಕ ವ್ಯಕ್ತಪಡಿಸಿದರು.

ವಿಶ್ವಜಲ ದಿನ ಪ್ರಯುಕ್ತ ಧಾರವಾಡದ ಕನ್ನಡ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ವಿಶ್ವ ಜಲ ದಿನದಂದು ನಾವೆಲ್ಲರೂ ಭೂಮಿಯ ಮೇಲಿನ ಈ ಜೀವ ಜಲವಾದ ನೀರನ್ನು ರಕ್ಷಿಸುವುದರ ಕುರಿತು ಚರ್ಚಿಸುತ್ತೇವೆ, ಈ ವರ್ಷದ ವಿಶ್ವ ಜಲ ದಿನದ ಧ್ಯೇಯ ವಾಕ್ಯ ನೀರು ಮತ್ತು ಉದ್ಯೋಗ ಎಂಬುದಾಗಿದೆ ಎಂದು ಹೇಳಿದರು.[ಕುಡಿಯುವ ನೀರಿಗಾಗಿ 3ನೇ ಮಹಾಯುದ್ಧ ಬೇಕೆ?]

water

ನೀರಿನ ಪ್ರಮಾಣವನ್ನು ಅಂದರೆ ಅಂತರ್ಜಲ ಮಟ್ಟವನ್ನು ಹೆಚ್ಚಿಸುತ್ತಾ ಹೋದಂತೆ ಜಗತ್ತಿನಾದ್ಯಂತ ಉದ್ಯೋಗಗಳ ಪ್ರಮಾಣವನ್ನು ಹೆಚ್ಚಿಸಬಹುದಾಗಿದೆ. ಆದರೆ ನೀರಿನ ಅಸಮರ್ಪಕ ಮತ್ತು ಅವೈಜ್ಞಾನಿಕ ಬಳಕೆಯಿಂದ ವರ್ಷದಿಂದ ವರ್ಷಕ್ಕೆ ಅಂತರ್ಜಲ ಮಟ್ಟ ತೀವ್ರ ಕುಸಿಯುದೆ. ನೀರಿಲ್ಲದ ಈ ಭೂ ಗ್ರಹವನ್ನು ಊಹಿಸಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಕೇವಲ ಶೇ.1 ರಷ್ಟು ನೀರು ಮಾತ್ರ ಕುಡಿಯಲು ಯೋಗ್ಯವಾಗಿದೆ. ಏರುತ್ತಿರುವ ಜನಸಂಖ್ಯೆಯಿಂದ, ಅರಣ್ಯ ನಾಶ ಮತ್ತು ಮಣ್ಣಿನ ಸವಕಳಿ, ನೀರಿನ ತೀವ್ರ ಮಾಲಿನ್ಯ, ಹೆಚ್ಚು ನೀರು ಬೇಡುವ ತಳಿಗಳನ್ನು ಬೆಳೆಯುವುದರಿಂದ, ಅಂತರ್ಜಲದ ವಿಪರೀತ ಬಳಕೆಯಿಂದ, ನೀರಿನ ತೀವ್ರ ಅಭಾವವಾಗಿದೆ. 1970 ರ ದಶಕಕ್ಕೂ ಮೊದಲು ಭಾರತದ ಅಂತರ್ಜಲ ಮಳೆ ನೀರಿನ ಹತ್ತು ಪಟ್ಟು ಅಧಿಕವಾಗಿತ್ತು. ನಿರಂತರವಾಗಿ ಕೊಳವೆ ಬಾವಿಗಳ ಸಂಖ್ಯೆ ಏರುತ್ತಾ ಸಾಗಿ ಅಂತರ್ಜಲ ಮಟ್ಟ ತೀವ್ರ ಕುಸಿದಿದ್ದು, ಅನೇಕ ಕಡೆ ಅದು ಸಂಪೂರ್ಣ ಬತ್ತಿ ಹೋಗಿದೆ ಎಂದು ಆತಂಕ ವ್ಯಕ್ತಪಡಿಸಿದರು.['ಎತ್ತು' ಏರಿಗೆ 'ಹೊಳೆ' ನೀರಿಗೆ ಇದೇ ಎತ್ತಿನಹೊಳೆ ಯೋಜನೆ]

ಹಿಂದೆ ಹಣವನ್ನು ನೀರಿನಂತೆ ಬಳಸಬೇಡ ಎಂದು ಹಿರಿಯರು ಹೇಳುತ್ತಿದ್ದರು. ಆದರೆ ಇವತ್ತು ನೀರನ್ನು ಹಣದಂತೆ ಬಳಸಬೇಡ ಎನ್ನುವಾಗ ನೀರಿನ ಮಹತ್ವದ ಅರಿವಾಗುತ್ತದೆ. ವೈಜ್ಞಾನಿಕ ವಿಧಾನವನ್ನು ಜೀವನದಲ್ಲಿ ಅಳವಡಿಸಿಕೊಂಡು, ಈ ನೆಲ,ಜಲ ಗಳನ್ನು ರಕ್ಷಿಸಬೇಕು ಎಂದು ಕೋರಿದರು.

ಜಪಾನಿನ ವಿನೈಲ್ ಕ್ಲೋರೈಡ್ ಕೈಗಾರಿಕೆಯಿಂದ ಬಿಡುಗಡೆಯಾದ ಮಕ್ರ್ಯರಿ ಮಿನಮಾಟದ ಕೊಲ್ಲಿಯನ್ನು ಸೇರತೊಡಗಿ, ಕ್ರಮೇಣ ಅಲ್ಲಿದ್ದ ಮೀನು, ಏಡಿ, ಹಾಗೂ ಮೃದ್ವಂಗಿಗಳ ದೇಹವನ್ನು ಸೇರತೊಡಗಿತು. ಇಂಥ ಪ್ರಾಣಿಗಳನ್ನು ಆಹಾರವಾಗಿ ಸೇವಿಸಿದ ಜನ ಒಂದು ಬಗೆಯ ರೋಗಕ್ಕೆ ತುತ್ತಾದರು. 1956 ರಲ್ಲಿ ಈ ರೋಗಕ್ಕೆ ಮಿನಮಾಟ ರೋಗ ಎಂದು ಹೆಸರಿಸಲಾಯಿತು ಮತ್ತು ಸಾಕಷ್ಟು ಜನರು ಈ ರೋಗಕ್ಕೆ ಬಲಿಯಾದರು ಎಂದು ಇತಿಹಾಸವನ್ನು ತೆರೆದಿರಿಸಿದರು.

ಕೆರೆಗಳ-ಕಟ್ಟೆಗಳ ಸಂರಕ್ಷಣೆಯಾಗಲಿ: ದೊಡ್ಡ ಸಮುದ್ರಕ್ಕೂ ಕೆರೆಯ ನೀರೇ ಆಸರೆ. ಇನ್ನೇನು ಮಳೆಗಾಲ ಆರಂಭವಾಗುವುದರಿಂದ ತಕ್ಷಣದಿಂದಲೇ ರಾಜ್ಯದಲ್ಲಿರುವ ಕೆರೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸುವುದರ ಮೂಲಕ ಮಲೀನ ಮುಕ್ತಗೊಳಿಸಿ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. ದೇಶಾದ್ಯಂತ ಯಾವುದೇ ಇ-ತ್ಯಾಜ್ಯಗಳಾಗಲಿ ಅಥವಾ ಕೈಗಾರಿಕಾ ತ್ಯಾಜ್ಯ ಹಾಗೂ ಆಸ್ಪತ್ರೆ ತ್ಯಾಜ್ಯಗಳು ನೀರನ್ನು ಸೇರದಂತೆ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಸಲಹೆ ನೀಡಿದರು.

ಮಳೆ ನೀರು ಕೊಯ್ಲು ಕಡ್ಡಾಯವಾಗಬೇಕು. ಶಾಲಾ ಕಾಲೇಜುಗಳಲ್ಲಿ ಮಳೆ ನೀರು ಕೊಯ್ಲು ವಿಧಾನಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಅಂತರ್ಜಲ ಮಟ್ಟವನ್ನು ಕಾಯ್ದುಕೊಳ್ಳಲು ಪ್ರೇರೇಪಿಸುವುದು. ಸರಕಾರಿ ಅಥವಾ ಸರಕಾರೇತರ ಸಂಸ್ಥೆಗಳಲ್ಲಿ, ಕಟ್ಟಡಗಳಿಗೆ ಪರವಾಣಿಗೆ ಕೊಡುವಾಗ ಮಳೆ ನೀರು ಕೊಯ್ಲು ವಿಧಾನ ಕಡ್ಡಾಯವಾಗಿ ಅಳವಡಿಸಲು ಆದೇಶಿಸಬೇಕು ಎಂದು ಒತ್ತಾಯ ಮಾಡಿದರು.

ನಾವೆಲ್ಲಾ ನವೀನ ನೀರು ಸಂಪನ್ಮೂಲ ಅಥವಾ ಆಕರಗಳನ್ನು ಶೋಧಿಸುವ ಭರದಲ್ಲಿ ಸಾಗುತ್ತಿದ್ದೇವೆ. ಆದರೆ ಲಭ್ಯವಿರುವ ಆಕರಗಳಲ್ಲಿ ಅಥವಾ ದೈನಂದಿನ ಬದುಕಿನಲ್ಲಿ ವಿನಾಕಾರಣ ಪೋಲಾಗುತ್ತಿರುವ ನೀರನ್ನು ಸದುಪಯೋಗಪಡಿಸಿಕೊಳ್ಳುವತ್ತ ಹೆಚ್ಚು ಗಮನ ನೀಡುತ್ತಿಲ್ಲ. ಶಹರಗಳ ವಿಸ್ತಾರ ಒಂದು ಕಡೆ ಹಾಗೂ ಗ್ರಾಮಗಳಲ್ಲಿ ಬರಗಾಲದ ಛಾಯೆ ಮತ್ತೊಂದು ಕಡೆ ಹೀಗೆ ಮಾನವ ತನ್ನ ಸಾವಿನ ಗುಂಡಿಯನ್ನು ತಾನೇ ತೊಡಿಕೊಳ್ಳುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Dharwad: Water is the most precious natural resource in the earth. On the occasion of World Water Day a even held at Dharwad Kannada Bhavana on 22 March, 2016

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ