ರಾಯಚೂರು ಜಿಲ್ಲೆಗೆ ನೂತನ ಡಿಸಿಯಾಗಿ ಐಎಎಸ್ ಅಧಿಕಾರಿ ಪೂವಿತಾ ನೇಮಕ
ರಾಯಚೂರು: ರಾಯಚೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ (ಡಿಸಿ) 2016ನೇ ಬ್ಯಾಚ್‌ನ ಐಎಎಸ್ ಅಧಿಕಾರಿ ಪೂವಿತಾ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ಜಿಲ್ಲೆಗಳಲ್ಲಿ ಒಂದಾದ ರಾಯಚೂರಿಗೆ ಹೊಸ ಆಡಳಿತಾತ್ಮಕ ನಾಯಕತ್ವ ದೊರೆತಂತಾಗಿದೆ.
ಐಎಎಸ್ ಅಧಿಕಾರಿ ಪೂವಿತಾ ಅವರು ಈ ಹಿಂದೆ ಕರ್ನಾಟಕ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಹಣಕಾಸು ನಿಗಮದ (KIDFC) ವ್ಯವಸ್ಥಾಪಕ ನಿರ್ದೇಶಕಿಯಾಗಿ (ಎಂಡಿ) ಸೇವೆ ಸಲ್ಲಿಸುತ್ತಿದ್ದರು. ತಮ್ಮ ದಕ್ಷ ಆಡಳಿತ ಹಾಗೂ ಕರ್ತವ್ಯ ನಿಷ್ಠೆಯಿಂದ ಗುರುತಿಸಿಕೊಂಡಿರುವ ಇವರು, ಇದೀಗ ರಾಯಚೂರು ಜಿಲ್ಲಾಧಿಕಾರಿಯಾಗಿ ಶೀಘ್ರದಲ್ಲೇ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ರಾಯಚೂರು ಜಿಲ್ಲೆಯು ಕೃಷಿ, ಶಿಕ್ಷಣ, ಮೂಲಸೌಕರ್ಯ ಹಾಗೂ ಆರೋಗ್ಯ ಸೇರಿದಂತೆ ವಿವಿಧ ವಲಯಗಳಲ್ಲಿ ತನ್ನದೇ ಆದ ವಿಶಿಷ್ಟ ಸವಾಲುಗಳನ್ನು ಹೊಂದಿದೆ. ನೂತನ ಜಿಲ್ಲಾಧಿಕಾರಿಗಳು ಈ ಸವಾಲುಗಳನ್ನು ಹೇಗೆ ನಿರ್ವಹಿಸಲಿದ್ದಾರೆ ಹಾಗೂ ಜಿಲ್ಲೆಯ ಪ್ರಗತಿಗೆ ಯಾವ ರೀತಿಯ ಹೊಸ ಯೋಜನೆಗಳನ್ನು ತರಲಿದ್ದಾರೆ ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ.
ಇದೇ ವೇಳೆ, ರಾಯಚೂರಿನ ಹಾಲಿ ಜಿಲ್ಲಾಧಿಕಾರಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ನಿತಿಶ್ ಕೆ ಅವರನ್ನು ರಾಜ್ಯ ಸರ್ಕಾರ ದಿಢೀರ್ ವರ್ಗಾವಣೆ ಮಾಡಿದೆ. ಆದರೆ, ಅವರಿಗೆ ಮುಂದಿನ ಹುದ್ದೆ ಮತ್ತು ಸ್ಥಳದ ಕುರಿತು ಸರ್ಕಾರದಿಂದ ಇನ್ನೂ ಯಾವುದೇ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಮುಂದಿನ ಆದೇಶದವರೆಗೆ ಅವರು ಸ್ಥಳ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ನಿರ್ಗಮಿತ ಜಿಲ್ಲಾಧಿಕಾರಿ ನಿತಿಶ್ ಕೆ ಅವರು ರಾಯಚೂರಿನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಅನೇಕ ಆಡಳಿತಾತ್ಮಕ ಮತ್ತು ಮೂಲಸೌಕರ್ಯ ಸವಾಲುಗಳ ನಡುವೆಯೂ ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಚುರುಕು ನೀಡಿದ್ದರು. ಜನಪರ ಯೋಜನೆಗಳನ್ನು ತಳಮಟ್ಟದ ಜನರಿಗೆ ತಲುಪಿಸುವಲ್ಲಿ ಶ್ರಮಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಜಿಲ್ಲಾ ಉತ್ಸವಗಳನ್ನು ಆಯೋಜಿಸಲಾಗಿತ್ತು. ಇದು ಸ್ಥಳೀಯ ಕಲೆ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮಕ್ಕೆ ದೊಡ್ಡ ಮಟ್ಟದ ಪ್ರೋತ್ಸಾಹ ನೀಡಿತ್ತು.
ಇದರ ಜೊತೆಗೆ, ಬಹುದಿನಗಳ ಬೇಡಿಕೆಯಾಗಿದ್ದ ಸುಸಜ್ಜಿತ ಜಿಲ್ಲಾಡಳಿತ ಭವನ ನಿರ್ಮಾಣ ಕಾರ್ಯಕ್ಕೆ ವೇಗ ನೀಡುವಲ್ಲಿ ನಿತಿಶ್ ಕೆ ಅವರ ಪಾತ್ರ ಬಹುಮುಖ್ಯವಾಗಿತ್ತು. ಹೀಗಾಗಿ ನಿತಿಶ್ ಕೆ ಅವರ ಜನಪರ ಕಾರ್ಯವೈಖರಿಗೆ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ಮುಖಂಡರು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇದೀಗ ನೂತನ ಜಿಲ್ಲಾಧಿಕಾರಿಯಾಗಿ ಆಗಮಿಸುತ್ತಿರುವ ಪೂವಿತಾ ಅವರು, ಜಿಲ್ಲೆಯ ಸಮಗ್ರ ಅಭಿವೃದ್ಧಿಯನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ವಿಶ್ವಾಸವನ್ನು ಜನಸಾಮಾನ್ಯರು ಹೊಂದಿದ್ದಾರೆ.












Click it and Unblock the Notifications