IIHR: ರೈತರಿಗೆ ಬಂಪರ್, 'ಅರ್ಕ ಜಾಮುನ್ ಪ್ರೈಡ್, ಅರ್ಕ ಶಿವ' ಹೊಸ ಹಣ್ಣು ತಳಿಗಳ ಲೋಕಾರ್ಪಣೆ
ಬೆಂಗಳೂರು: ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (IIHR) ಅಭಿವೃದ್ಧಿಪಡಿಸಿ, ಇಳುವರಿ ಹೆಚ್ಚಾಗಿ ರೈತರ ಆದಾಯ ದ್ವಿಗುಣಗೊಳಿಸಬಲ್ಲ ನೆರಳೆ ತಳಿ 'ಅರ್ಕ ಜಾಮುನ್ ಪ್ರೈಡ್' ಮತ್ತು ಚಕೋತ್ರ (ಪಮ್ಮೇಳೋ) ತಳಿ 'ಅರ್ಕ ಶಿವ' ಅನ್ನು 'ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರಲ್ ರಿಸರ್ಚ್' (ICAR) ಮಹಾನಿರ್ದೇಶಕ ಡಿಎಆರ್‍ಇ ಕಾರ್ಯದರ್ಶಿ ಡಾ. ಎಂ. ಎಲ್. ಜಾಟ್ ಬಿಡುಗಡೆಗೊಳಿಸಿದರು.
ಇಂದು ಬುಧವಾರ ಬೆಂಗಳೂರಿನ ಹೆಸರಘಟ್ಟದ ಐಸಿಎಆರ್-ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗೆ (ICAR-IIHR) ಭೇಟಿ ನೀಡಿ ಸಂಸ್ಥೆಯ ಸಂಶೋಧನಾ ಚಟುವಟಿಕೆಗಳು, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಅಭಿವೃದ್ಧಿ ಕಾರ್ಯಕ್ರಮಗಳ ಪರಿಶೀಲನೆ ನಡೆಸಿದರು. ಇದೇ ವೇಳೆ ಹೊಸ ಹಣ್ಣುಗಳ ತಳಿ ಲೋಕಾರ್ಪಣೆ ಮಾಡಿದರು.

ಬಿಡುಗಡೆಗೊಂಡ ಈ ತಳಿಗಳು ಉತ್ತಮ ಹಣ್ಣಿನ ಗುಣಮಟ್ಟ ಮತ್ತು ಉತ್ತಮ ಮಾರುಕಟ್ಟೆ ಸ್ವೀಕಾರಾರ್ಹತೆಯನ್ನು ಹೊಂದಿವೆ. ಉತ್ಪಾದಕತೆ ಮತ್ತು ರೈತರ ಆದಾಯ ಹೆಚ್ಚಿಸಲು ಸಹಕಾರಿಯಾಗಲಿವೆ ಎಂದು ಹೇಳಿದರು.
ಕೃಷಿ; ವ್ಯವಸ್ಥಾತ್ಮಕ ದೃಷ್ಟಿಕೋನ ಅಗತ್ಯ
ತಂತ್ರಜ್ಞಾನ ವರ್ಗಾವಣೆಯನ್ನು ವೇಗಗೊಳಿಸುವುದು, ಸಂಶೋಧನೆ-ಉದ್ಯಮ ಸಂಪರ್ಕಗಳನ್ನು ಬಲಪಡಿಸಬೇಕು. ನವೀನತೆಗಳನ್ನು ಕ್ಷೇತ್ರಮಟ್ಟದಲ್ಲಿ ವ್ಯಾಪಕವಾಗಿ ಅಳವಡಿಸುವ ಅಗತ್ಯತೆ ಇದೆ. ಸ್ವಾವಲಂಬಿ ಮತ್ತು ಅಭಿವೃದ್ಧಿಶೀಲ ಭಾರತ ನಿರ್ಮಾಣಕ್ಕೆ ಕೃಷಿಯೇ ಆಧಾರ. ಕೃಷಿ ಸ್ಥಿರವಾಗಿಯೂ ಸ್ವಯಂ ಪೋಷಿತವಾಗಿಯೂ ಇರದಿದ್ದರೆ ರಾಷ್ಟ್ರದ ಅಭಿವೃದ್ಧಿ ಸಾಧ್ಯವಿಲ್ಲ. ಕೃಷಿ ವ್ಯವಸ್ಥಾತ್ಮಕ ದೃಷ್ಟಿಕೋನ ಅಗತ್ಯವಿದೆ. ಕೇವಲ ಬೆಳೆ ಆಧಾರಿತ ಸಂಶೋಧನೆಯ ಯುಗವಲ್ಲ. ಪೂರ್ವ-ಉತ್ಪಾದನಾ ಯೋಜನೆಯಿಂದ ಹಿಡಿದು ಕೊಯ್ದು ಸಂಶೋಧನೆಗೆ ನಂತರದ ಮೌಲ್ಯ ಸರಪಳಿವರೆಗೆ ಸಂಪೂರ್ಣ ಕೃಷಿ-ಆಹಾರ ವ್ಯವಸ್ಥೆಯನ್ನು ಗಮನಿಸಬೇಕು ಎಂದು ಹೇಳಿದರು.
ಇದೇ ವೇಳೆ ನರ್ಸರಿ ಘಟಕ, BESST-HORT ಇನ್‌ಕ್ಯುಬೇಶನ್ ಸೌಲಭ್ಯ, ಮಶ್ರೂಮ್ ಘಟಕ, ಬೀಜ ಸಂಸ್ಕರಣಾ ಘಟಕ, ತಂತ್ರಜ್ಞಾನ ಪ್ರದರ್ಶನ ಬ್ಲಾಕ್, ಕೀಟನಾಶಕ ಅವಶೇಷ ಪ್ರಯೋಗಾಲಯ ಹಾಗೂ ಕೇಂದ್ರ ಜೈವಿಕ ತಂತ್ರಜ್ಞಾನ ಪ್ರಯೋಗಾಲಯ ಸೇರಿದಂತೆ ಪ್ರಮುಖ ಸೌಲಭ್ಯಗಳನ್ನು ಪರಿಶೀಲಿಸಿದರು.
54 ಬೆಳೆಗಳ ಮೇಲೆ ಸಂಶೋಧನಾ ಕಾರ್ಯ
ಐಐಎಚ್‌ಆರ್ ನಿರ್ದೇಶಕ ಡಾ. ತುಷಾರ್ ಕಾಂತಿ ಬೆಹೆರಾ ಅವರು, ಸಂಸ್ಥೆಯು 54 ಬೆಳೆಗಳ ಮೇಲೆ ಪ್ರಸ್ತುತ ಸಂಶೋಧನಾ ಕಾರ್ಯಗಳನ್ನು ನಡೆಸುತ್ತಿರುವುದನ್ನು ಪ್ರಸ್ತುತಪಡಿಸಿದರು. ಭವಿಷ್ಯದ ಕೃಷಿ ದೃಷ್ಟಿಯಲ್ಲಿಟ್ಟುಕೊಂಡು ಹೊಸ ಉಪಕ್ರಮ, ಸಂಸ್ಥೆಯ ತಂತ್ರಜ್ಞಾನಗಳ ಪರಿಣಾಮ ಮೌಲ್ಯಮಾಪನದ ಮಹತ್ವ ಕುರಿತು ತಿಳಿಸಿದರು. ಸಂಸ್ಥೆಯ ನವೀನ ಆವಿಷ್ಕಾರಗಳು ಬೆಳೆ ಸುಧಾರಣೆ, ರೈತರ ಸ್ವೀಕಾರ ಹಾಗೂ ದೇಶದಾದ್ಯಂತ ತೋಟಗಾರಿಕಾ ಆಧಾರಿತ ಉದ್ಯಮಶೀಲತೆಗೆ ಮಹತ್ವದ ಕೊಡುಗೆ ನೀಡಿದ್ದನ್ನು ಪುನರುಚ್ಚರಿಸಿದರು.
154 ತಂತ್ರಜ್ಞಾನ ಅಭಿವೃದ್ಧಿ
ಐಸಿಎಆರ್-IIHR ಸಂಸ್ಥೆ ಸ್ಥಾಪನೆಯಿಂದ ಇದುವರೆಗೆ 335 ಜಾತಿಗಳು, 154 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ. 2021-26 ಅವಧಿಯಲ್ಲಿ 59 ಸುಧಾರಿತ ಜಾತಿಗಳು ಮತ್ತು ಸಂಕರಗಳನ್ನು ಬಿಡುಗಡೆ ಮಾಡಿದೆ. ಸಂಸ್ಥೆಯ ತಂತ್ರಜ್ಞಾನಗಳು ದೇಶದಾದ್ಯಂತ ವ್ಯಾಪಕವಾಗಿ ಹರಡಿದೆ. ವಾಣಿಜ್ಯಕರಣಕ್ಕಾಗಿ 1700ಕ್ಕೂ ಹೆಚ್ಚು ಪರವಾನಗಿಗಳನ್ನು ನೀಡಲಾಗಿದೆ. ಇದರ ಮೂಲಕ ತೋಟಗಾರಿಕಾ ಉದ್ಯಮಶೀಲತೆ ಮತ್ತು ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಮಹತ್ವದ ಬೆಂಬಲ ಒದಗಿಸಲಾಗಿದೆ.













Click it and Unblock the Notifications