Cotton Theft: 'ಬರ'ದ ಗಾಯದ ಮೇಲೆ 'ರೈತ'ನಿಗೆ ಹತ್ತಿ 'ಕಳ್ಳತನ ಬರೆ'
ಧಾರವಾಡ, ಡಿಸೆಂಬರ್ 25: ದಿನ ಮನೆ, ಬ್ಯಾಂಕ್, ಎಟಿಎಂ ಸೇರಿದಂತೆ ದೇವಸ್ಥಾನಗಳ ಹುಂಡಿಗಳಿಗೆ ಕನ್ನ ಹಾಕುತ್ತಿದ್ದ ಕಳ್ಳರು ಈಗ ರೈತರ ಫಸಲಿನ ಮೇಲೆ ಕಣ್ಣು ಹಾಕಿದ್ದಾರೆ. ಈ ಹಿಂದೆ ರೈತರಿಗೆ ಟೊಮೆಟೋಗೆ ಬೆಲೆ ಸಿಗುವಾಗ, ಈರುಳ್ಳಿಗೆ ಹೆಚ್ಚಿನ ಬೆಲೆ ಬಂದಾಗ ಕಳ್ಳರು ರೈತರ ಕೃಷಿ ಉತ್ಪನ್ನಗಳು ಕದ್ದ ಉದಾಹರಣೆಗಳು ಸಾಕಷ್ಟಿವೆ. ಇದೀಗ ರೈತರ ಹತ್ತಿ ಕಳ್ಳತನ ಗುಂಪೊಂದು ಭಾರಿ ತಲೆ ನೋವು ತಂದಿಟ್ಟಿದೆ.
ಹೌದು! ಇದು ಅಚ್ಛರಿ ಎನಿಸಿದರೂ ನೀಜ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬ್ಯಾಲ್ಯಾಳ ಗ್ರಾಮದಲ್ಲಿ ಹತ್ತಿ ಕಳ್ಳತನದ ಘಟನೆ ನಡೆದಿದೆ. ಈ ಬ್ಯಾಲ್ಯಾಳ ಗ್ರಾಮದ ಮೈಲಾರಪ್ಪ ಕುರಗುಂದ ಅವರ ಒಂದೂವರೆ ಎಕರೆಯ ಜಮೀನಿನಲ್ಲಿನ ಹತ್ತಿಯನ್ನು ಕಳ್ಳರ ಗ್ಯಾಂಗ್ ಬಿಡಿಸಿಕೊಂಡು ಪರಾರಿಯಾಗಿದೆ.

ಹತ್ತಿ ಪೈರು ಚೆನ್ನಾಗಿ ಬಂದಿದ್ದನ್ನು ಕಂಡ ರೈತ ಮೈಲಾರಪ್ಪ ಕುರಗುಂದ ಇನ್ನೇನು ಬಿಡಿಸಿ ಮನೆಗೆ ತರಬೇಕು ಎನ್ನುಷ್ಟರಲ್ಲಿ ಅದು ಖದೀಮ ಪಾಲಾಗಿದ್ದು, ಸದ್ಯ ರೈತ ಆರ್ಥಿಕ ಸಂಕಷ್ಟ ಎದುರಿಸುಂತಾಗಿದೆ.
ಹೊಲದಲ್ಲಿ ಹತ್ತಿ ಇಲ್ಲದ್ದು ಕಂಡು ದಂಗಾದ ರೈತ
ಹತ್ತಿ ಬಿಡಿಸುವ ಯೋಚನೆ ಮಾಡಿದ್ದ ರೈತ ಮೈಲಾರಪ್ಪ, ಜಮೀನಿಗೆ ಬಂದು ನೋಡಿದಾಗ ಹೊಲದಲ್ಲಿನ ಹತ್ತಿ ಕಳ್ಳತನವಾಗಿದ್ದನ್ನು ನೋಡಿ ದಂಗಾಗಿದ್ದಾನೆ. ಅಷ್ಟೇ ಅಲ್ಲ ಕಣ್ಣೀರು ಸಹ ಹಾಕಿದ್ದಾನೆ. ರೈತ ಮೈಲಾರಪ್ಪ ಒಂದು ಬಾರಿ ಹತ್ತಿ ಬಿಡಿಸಿ ಮಾರಾಟ ಮಾಡಿದ್ದ ಎರಡನೇ ಬಾರಿ ಹತ್ತಿ ಬಿಡಿಸಬೇಕು ಎಂಬಷ್ಟರಲ್ಲಿ ರಾತ್ರೋರಾತ್ರಿ ಕಳ್ಳರ ಗ್ಯಾಂಗ್ ಆ ಹತ್ತಿ ಬಿಡಿಸಿಕೊಂಡು ಹೋಗಿದೆ. ಹತ್ತಿ ಕಳ್ಳತನ ವಿಷಯ ತಿಳಿದು ರೈತ ಕಂಗಾಲಾಗಿದ್ದಾರೆ.
ಅನಾರೋಗ್ಯ ಸಂಬಂಧ ರೈತ ಆಸ್ಪತ್ರೆಗೆ ಓಡಾಡುತ್ತಿದ್ದರು. ಇದೇ ಒಳ್ಳೆಯ ಸಮಯ ನೋಡಿದ ಸುಮಾರು 10-15ಜನರ ಗುಂಪು ಇಂತಹ ಕೆಲಸ ಮಾಡಿದೆ. ಹೀಗಾದರೆ ಮುಂದಿನ ನಮ್ಮ ಬದುಕಿಗೆ ಏನು ಮಾಡಬೇಕು. ನಾವು ಕೃಷಿ ನಂಬಿಕೊಂಡು ಬದುಕುತ್ತಿದ್ದೇವೆ ಎಂದು ರೈತ ಅಳಲು ತೋಡಿಕೊಂಡಿದ್ದಾರೆ.

ಬರದ ಗಾಯದ ಮೇಲೆ ಕಳ್ಳತನ ಬರೆ
ಬರಗಾಲ ಎದುರಿಸುತ್ತಿರುವ ರೈತನಿಗೆ ಇದೀಗ ಕಳ್ಳರ ಗ್ಯಾಂಗ್ ಸಹ ಬೆನ್ನು ಬಿದ್ದು, ಹತ್ತಿ ಕದ್ದೊಯ್ದಿದ್ದಾರೆ. ಇದು ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರ ಬದುಕು ದುಸ್ತರವಾಗಿದೆ. ರಾತ್ರೋರಾತ್ರಿ ವಾಹನ ತೆಗೆದುಕೊಂಡು ಬಂದು ಕಳ್ಳರು ಹತ್ತಿ ಬಿಡಿಸಿಕೊಂಡು ಹೋಗಿರುವುದರಿಂದ ರೈತ ಮೈಲಾರಪ್ಪ ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ಪ್ರಕರಣ ಕುರಿತು ಗಮನಿಸಬೇಕಿದೆ. ರೈತರಿಗೆ ಅಗತ್ಯ ಸಹಾಯ ಮಾಡಬೇಕಿದೆ.
ರಾಜ್ಯದಲ್ಲಿ ಬರಗಾಲ ತಾಂಡವವಾಡುತ್ತಿದೆ. ನಿರೀಕ್ಷಿತ ಮುಂಗಾರು ಮಳೆ ಹಾಗೂ ಹಿಂಗಾರು ಮಳೆ ಆಗಿಲ್ಲ. ಈ ಬಾರಿ ಯಾವ ಹಂಗಾಮಿನಲ್ಲೂ ಉತ್ತಮ ಬಿತ್ತನೆ ಆಗಿಲ್ಲ. ಕೆಲವೆಡೆ ಬಿತ್ತನೆ ಆದರೂ ಮಳೆ ಕೊರತೆಯಿಂದ ಇಳುವರಿಯೇ ಬಂದಿಲ್ಲ. ಹೀಗಾಗಿ ಈ ಬಾರಿ ರಾಜ್ಯದ ರೈತರು ತೊಂದರೆ ಅನುಭವಿಸುತ್ತಿದ್ದಾರೆ.
ಅಕ್ಕಪಕ್ಕದವರಿಂದ ನೀರು ಪಡೆದು ಕೆಲವು ರೈತರು ತರಕಾರಿ, ಇನ್ನಿತರ ಬೆಳೆ ಬೆಳೆದಿದ್ದಾರೆ. ಉತ್ತಮ ಬೆಲೆ ಸಿಕ್ಕಾಗ ಬಹುತೇಕ ಹಣ ಮಧ್ಯವರ್ತಿಗಳ ಪಾಲಾಗುತ್ತದೆ. ಇಲ್ಲವೇ ಟೊಮೆಟೋ, ಈರುಳ್ಳಿಯನ್ನು ಖದೀಮರೇ ಖದ್ದು ರೈತರಿಗೆ ಮತ್ತಷ್ಟು ತೊಂದರೆ ಒಡ್ಡುತ್ತಿದ್ದಾರೆ. ಇದೀಗ ಹತ್ತಿ ಕಳ್ಳತನ ಪ್ರಕರಣ ಧಾರವಾಡದಲ್ಲಿ ಬೆಳಕಿಗೆ ಬಂದಿದೆ.












Click it and Unblock the Notifications