ಹೋಟೆಲ್‌ಗಳಲ್ಲಿ 'ತಂದೂರಿ ರೊಟ್ಟಿ' ಮಾಡುತ್ತಿದ್ದವನ ಕತೆ ಧಾರವಾಡದಲ್ಲಿ ಅಂತ್ಯ, ಆಗಿದ್ದೇನು?
ಧಾರವಾಡ, ಫೆಬ್ರವರಿ 07: ಕರ್ನಾಟಕದಲ್ಲಿಯೇ ವಿದ್ಯಾಕಾಶಿ ಎಂದು ಹೆಸರು ಪಡೆದ ಉತ್ತರ ಕರ್ನಾಟಕದ ಹೆಮ್ಮೆಯ ಧಾರವಾಡ (Dharwad) ಜಿಲ್ಲೆಯು ಇತ್ತೀಚೆಗೆ ಅಪರಾಧ ಚಟುವಟಿಕೆಗಳಿಂದ ಕುಖ್ಯಾತಿ ಪಡಯುತ್ತಿದೆ ಎಂಬ ಅನುಮಾನ ಮೂಡುತ್ತಿದೆ.
ಈ ಅನುಮಾನಗಳಿಗೆ ಪೂರಕವಾದ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬರು ಕೆಲಸವರಸಿ ಧಾರವಾಡಕ್ಕೆ ಬಂದಿದ್ದು, ಆತ ಹೋಟೆಲ್ ಒಂದರಲ್ಲಿ ತಂದೂರಿ ರೊಟ್ಟಿ ಮಾಡಿ ಜೀವನ ಸಾಗಿಸುತ್ತಿದ್ದ. ನಿತ್ಯ ಬೆವರು ಹರಿಸು ಬಂದ ದುಡ್ಡಿನಲ್ಲಿ ಆತನ ದೈನಂದಿನ ಜೀವನ ನಡೆಯುತ್ತಿತ್ತು.

ಧಾರವಾಡಕ್ಕೆ ಬರುವ ಮೊದಲೇ ಈತ ಈ ಹಿಂದೆಯೂ ಬೇರೆ ಊರಿನಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡಿದ್ದ. ವರ್ಷಗಳ ಹಿಂದೆ ವಿದ್ಯಾಕಾಶಿ ಧಾರವಾಡಕ್ಕೆ ಬಂದು ಹೋಟೆಲ್ ಒಂದರಲ್ಲಿ ಬಂದು ತಂದೂರಿ ರೊಟ್ಟಿ ಮಾಡಿಕೊಂಡಿದ್ದ. ಎಂದಿನಂತೆ ಕೆಲಸ ಮುಗಿಸಿ ಮಲಗಿದ್ದ. ಆದರೆ ಮಧ್ಯರಾತ್ರಿ ವಿಧಿ ಆತನ ಜೀವನದಲ್ಲಿ ಚೆಲ್ಲಾಟವಾಡಿ ಮಸಣಕ್ಕೆ ಕೊಂಡೊಯ್ದ ಘಟನೆ ಮಂಗಳವಾರ ನಡೆದಿದೆ.
ಶಿರಹಟ್ಟಿ ತಾಲೂಕಿನ ಫಕ್ಕೀರೇಶ ಸಾವು
ಮಧ್ಯರಾತ್ರಿ ಹೀಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಈ ಹೋಟೆಲ್ ಕಾರ್ಮಿಕನನ್ನು ಫಕ್ಕೀರೇಶ ಪ್ಯಾಟಿ (40) ಎಂದು ಗುರುತಿಸಲಾಗಿದೆ. ಈತ ಮೂಲತಃ ಶಿರಹಟ್ಟಿ ತಾಲೂಕಿನ ಸುಗನಳ್ಳಿ ಗ್ರಾಮದವನು. ಕೆಲ ವರ್ಷಗಳ ಹಿಂದೆ ಧಾರವಾಡದ ವಿಮಲ್ ಹೋಟೆಲ್‌ನಲ್ಲಿ ತಂದೂರಿ ರೊಟ್ಟಿ ಮಾಡುವ ಕೆಲಸಕ್ಕೆ ಸೇರಿಕೊಂಡಿದ್ದ.

ಈತನ ಜೊತೆಗೆ ದಾಂಡೇಲಿ ಮೂಲದ ಕನ್ಯಯಪ್ಪ ಕನಯ್ಯ ಎಂಬ ವ್ಯಕ್ತಿ ಕೂಡ ಅದೇ ಹೋಟೆಲ್‌ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಕೆಲ ವರ್ಷಗಳ ಕಾಲ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದರು. ಆದರೆ ಮಂಗಳವಾರ ಇವರಿಬ್ಬರ ಮಧ್ಯೆ ಕ್ಷಲ್ಲಕ ವಿಚಾರಕ್ಕೆ ನಡೆದ ಗಲಾಟೆಯು ಕೊನೆಗೆ ಫಕ್ಕೀರೇಶನ ಕೊಲೆಯಲ್ಲಿ ಅಂತ್ಯ ಕಂಡಿದೆ.
ಕ್ಲುಲ್ಲಕ ಕಾರಣಕ್ಕೆ ಬಿತ್ತು ಕಬ್ಬಿಣದ ಏಟು
ರಾತ್ರಿ ಇವರಿಬ್ಬರ ಮಧ್ಯೆ ಕ್ಷುಲ್ಲಕ ಕಾರಣಕ್ಕಾಗಿ ಜಗಳ ನಡೆದಿದೆ. ನಡುರಾತ್ರಿ ಇಬ್ಬರೂ ಹೊಡೆದಾಡಿಕೊಂಡಿದ್ದಾರೆ. ಕೊನೆಗೆ ಕನ್ಯಯಪ್ಪ ಎಂಬಾತ ಕಬ್ಬಿಣದ ರಾಡ್‌ನಿಂದ ಫಕ್ಕೀರೇಶನ ತಲೆಗೆ ಬಲವಾಗಿ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಕಬ್ಬಿಣದ ಸರಳಿನಿಂದ ಹೊಡೆತ ಬೀಳುತ್ತಿದ್ದ ನೆಲಕ್ಕೆ ಬಿದ್ದ ಫಕ್ಕೀರೇಶನಿಗೆ ತೀವ್ರ ರಕ್ತ ಸ್ರಾವವಾಗಿದೆ. ಆತ ಸ್ಥಳದಲ್ಲೇ ಅಸುನೀಗಿದ್ದಾನೆ. ನಡುರಾತ್ರಿ 2 ಗಂಟೆಯ ಸುಮಾರಿಗೆ ಫಕ್ಕೀರೇಶನ ಕುಟುಂಬಸ್ಥರಿಗೆ ಈ ವಿಷಯ ತಿಳಿಸಿದ್ದು, ಆತನ ಕುಟುಂಬಸ್ಥರು ಜಿಲ್ಲಾಸ್ಪತ್ರೆ ದೌಡಾಯಿಸಿದ್ದಾರೆ. ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಕ್ಷುಲ್ಲಕ ಕಾರಣಕ್ಕಾಗಿ ಹೋಟೆಲ್ ಸಪ್ಲೈಯರ್ ಹಾಗೂ ತಂದೂರಿ ರೊಟ್ಟಿ ಮಾಡುವವನ ಮಧ್ಯೆ ನಡೆದ ಗಲಾಟೆ ಕೊನೆಗೆ ಓರ್ವನ ಬಲಿ ಪಡೆದುಕೊಂಡಿದೆ. ನಡುರಾತ್ರಿ ನಡೆದ ಈ ಘಟನೆ ಧಾರವಾಡಿಗರನ್ನು ಮತ್ತೆ ಬೆಚ್ಚಿ ಬೀಳಿಸಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ಅಪರಾಧ ಕೃತ್ಯಗಳು ಹೆಚ್ಚುತ್ತಿದ್ದು, ಅವನ್ನು ತಡೆಯುವ ಮೂಲಕ ಜಿಲ್ಲೆಯ ವಿದ್ಯಾಕಾಶಿ ಹೆಸರು ಉಳಿಸಬೇಕಿದೆ.
ಸದ್ಯ ಈ ಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications