ಮುಂಗಾರು ಮಳೆ: ಜಿಲ್ಲೆಯಲ್ಲಿ ನಿರೀಕ್ಷಿತ ಹಂಗಾಮು ಬಿತ್ತನೆ ಪೂರ್ಣ
ಹುಬ್ಬಳ್ಳಿ, ಜುಲೈ 18: ಕಳೆದ ಕೇಲ ವರ್ಷಗಳಿಂದ ಅತೀವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಕಷ್ಟ ಎದುರಿಸಿದ್ದ ಧಾರವಾಡ ಜಿಲ್ಲೆಯ ರೈತರು ಈ ವರ್ಷ ಉತ್ತಮ ಮಳೆ ಬಿದ್ದಿದ್ದು ಬಿತ್ತನೆ ಸಹ ಬಹುತೇಕ ಪೂರ್ಣ ಪ್ರಮಾಣದಲ್ಲಿ ಮಾಡಲಾಗಿದೆ. ಬಿತ್ತಿದ ಬೆಳೆಗೆ ಮಳೆ ಬೇಕು ಎನ್ನುತ್ತಿದ್ದವರಿಗೆ ಕಳೆದೊಂದು ವಾರದಿಂದ ಭರ್ಜರಿ ಮಳೆ ದಾಖಲಾಗುತ್ತಿದೆ.
ಧಾರವಾಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 2.70 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈ ಪೈಕಿ ಈವರೆಗೆ 2.63 ಲಕ್ಷ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹಲವೆಡೆ ಹದ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ, ರೈತರು ಈ ಬಾರಿ ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ.

ಈ ಬೆಳೆ ಬಿತ್ತನೆ ಗುರಿ 67 ಸಾವಿರ ಹೆಕ್ಟೇರ್ ಇದ್ದರೆ, 97 ಸಾವಿರ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ನವಲಗುಂದ ತಾಲ್ಲೂಕಿನಲ್ಲಿ ಅತೀ ಹೆಚ್ಚು 38 ಸಾವಿರ ಹೆಕ್ಟೇರ್, ಅಣ್ಣಿಗೇರಿ ತಾಲ್ಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಬಿತ್ತನೆಯಾಗಿದೆ. ಮುಸುಕಿನ ಜೋಳ, ಸೋಯಾಬಿನ್, ಹತ್ತಿ ಹೆಚ್ಚು ಬಿತ್ತನೆ ಮಾಡಿದ್ದಾರೆ.
'ಹೆಸರು ಕಡಿಮೆ ಅವಧಿ ಬೆಳೆಯಾಗಿದ್ದು, ಈ ಬಾರಿ ಬೇಗ ಮಳೆಯಾಗಿದೆ. ಇದು ಸುಲಭದ ಬೆಳೆ. ಹಿಂಗಾರು ಹಂಗಾಮು ಬಿತ್ತನೆಗೆ ಅನುಕೂಲವಾಗುತ್ತದೆ ಎಂದು ಹಲವು ರೈತರು ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ. ಈಗ ಹೆಸರಿಗೆ ಬೆಲೆ ಚೆನ್ನಾಗಿದೆ. ಕನಿಷ್ಠ ಬೆಂಬಲ ಬೆಲೆಯೂ ಚೆನ್ನಾಗಿದೆ. ಹೀಗಾಗಿ, ಹೆಸರು ಹೆಚ್ಚು ಬಿತ್ತನೆ ಮಾಡಿದ್ದಾರೆ.
ಏಕದಳ ಧಾನ್ಯಗಳಾದ ಭತ್ತ, ಜೋಳ, ರಾಗಿ, ಮುಸುಕಿನ ಜೋಳವ೭ 59 ಸಾವಿರ ಹೆಕ್ಟೇರ್, ದ್ವಿದಳ ಧಾನ್ಯ ವಾದ ಹೆಸರು, ಉದ್ದು, ತೊಗರಿ, ಹುರುಳಿ ಬೆಳೆಗಳನ್ನು 1.09 ಲಕ್ಷ ಹೆಕ್ಟೇರ್, ಎಣ್ಣೆಕಾಳು ಬೆಳೆ ಶೇಂಗಾ, ಸೋಯಾಬೀನ್, ಎಳ್ಳು ಬಿತ್ತನೆಯು 54 ಸಾವಿರ ಹೆಕ್ಟೇರ್, ವಾಣಿಜ್ಯ ಬೆಳೆ 39 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಆಗಿದೆ.

ಮುಂಗಾರು ಪೂರ್ವದಲ್ಲಿ ಸ್ವಲ್ಪ ಮಳೆಯಾಗಿತ್ತು. ಜೂನ್‌ನಲ್ಲಿ ಹುಬ್ಬಳ್ಳಿ ನಗರ ಮತ್ತು ಅಳ್ಳಾವರ ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಿದೆ. ಬಾಕಿ 6 ತಾಲ್ಲೂಕುಗಳಲ್ಲಿ ವಾಡಿಕೆಗಿಂತ ಕೊಂಚ ಜಾಸ್ತಿ ಸುರಿದಿದೆ ಎಂದು ಕೃಷಿ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಕೆಲವು ರೈತರು ಮೇ ಅಂತ್ಯದಲ್ಲಿ, ಇನ್ನು ಕೆಲವರು ಜೂನ್‌ನಲ್ಲಿ ಬಿತ್ತನೆ ಮಾಡಿದ್ದಾರೆ. ಪೈರುಗಳು ಹುಲಸಾಗಿ ಚಿಗುರಿವೆ. ಕೆಲ ದಿನಗಳಿಂದ ಆಗಾಗ್ಗೆ ಸಾಧಾರಣವಾಗಿ ಮಳೆಯಾಗುತ್ತಿದೆ. ಕಳೆ ಕೀಳುವುದು, ಗೊಬ್ಬರ ಹಾಕುವುದು, ಕೀಟ ನಾಶಕ ಸಿಂಪಡಿಸುವುದು, ಎಡೆಕುಂಟೆ ಹೊಡೆಯುವುದು ಮೊದಲಾದ ಚಟುವಟಿಕೆಗಳಲ್ಲಿ ರೈತರು ನಿರತರಾಗಿದ್ದಾರೆ.
'ಹೆಸರು ಬಿತ್ತಿ ಒಂದು ತಿಂಗಳಾಗಿದ್ದು, ಪೈರು ಸಹ ಉತ್ತಮವಾಗಿ ಬೆಳದು ನಿಂದಿದೆ. ಈ ಬಾರಿ ಮುಂಗಾರು ಹಂಗಾಮಿನ ಉತ್ತಮ ಬೆಳೆಗಳು ರೈತರನ್ನು ಕೈಹಿಡಿಯುವ ನಿರೀಕ್ಷೆ ಇದೆ. ಆದರೂ ಕೆಲವು ಕಡೆಗಳಲ್ಲಿ ಮಳೆ ನಿರೀಕ್ಷಿಸಿದಷ್ಟು ಬರುತ್ತಿಲ್ಲ. ಗಾಳಿ ರಭಸವಾಗಿ ಬೀಸುತ್ತದೆ. ಇನ್ನು 10 ದಿನಗಳಲ್ಲಿ ಹದ ಮಳೆಯಾಗದಿದ್ದರೆ ಬೆಳೆ ಕುಂಠಿತವಾಗಬಹುದು ಎಂದು ಉತ್ತರ ಕರ್ನಾಟಕದ ಒಂದೆರಡು ಜಿಲ್ಲೆಗಳ ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಧಾರವಾಡ ಜಿಲ್ಲೆ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕಳೆದೊಂದು ವಾರದಿಂದ ಜಿಟಿ ಜಿಟಿ ಮಳೆ ಆಗುತ್ತಿದೆ. ಜುಲೈ 26ರವರೆಗೆ ಹಲವು ಕಡೆ ಉತ್ತಮ ಮಳೆ ಆಗಬಹುದು ಎಂಬ ಮುನ್ಸೂಚನೆ ಇದೆ.












Click it and Unblock the Notifications