Dharwad Rain: ಭಾರೀ ಮಳೆಗೆ ಸಾಕ್ಷಿಯಾದ ಪೇಡಾ ನಗರಿ: ಮುಂದಿನ 3ದಿನ ಮಳೆ ಅಬ್ಬರ
ಧಾರವಾಡ, ಮೇ 24: ಪೇಡಾ ನಗರಿ ಧಾರವಾಡದಲ್ಲಿ ಕಳೆದ ಎರಡು ಮೂರು ದಿನದಿಂದ ಜೋರು ಮಲೆ ಆಗುತ್ತಿದೆ. ಹೆಚ್ಚು ಗಿಡಮರಗಳಿರುವ ಈ ಪ್ರದೇಶವು ಮಳೆ ಆದ ಮೇಲೆ ಮಲೆನಾಡಿನ ಸೊಬಗಿಗೆ ಮರಳಿದೆ. ಎಲ್ಲೆಡೆ ವಾತಾವರಣ ತೇವದಿಂದ ಕೂಡಿದ್ದು, ರೈತರು, ನಗರವಾಸಿಗಳು ಫುಲ್ ಖುಶ್ ಆಗಿದ್ದಾರೆ.
ಧಾರವಾಡ ನಗರದಲ್ಲಿ ಗುರುವಾರ ಮಧ್ಯಾಹ್ನದ ನಂತರ ಧಾರಾಕಾರವಾಗಿ ಮಳೆ ಆಯಿತು. ಗುಡುಗು ಸಿಡಿಲು ಸಹಿತ ಭಾರೀ ಮಳೆ ಅಬ್ಬರ ಕಂಡು ಬಂತು. ಪ್ರಮುಖ ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿದಿದ್ದು ಕಂಡು ಬಂತು. ಬಿಸಿಲಿನಿಂದ ತತ್ತರಿಸಿದ್ದ ಜನರಿಗೆ ಈ ಮಳೆ ತಂಪೆರೆಯಿತು.

ನೆನ್ನೆ ಜೋರು ಮಳೆ ಮೂಲಕ ಕೃತಿಕಾ ಮಳೆ ಕೊನೆಯದಾಗಿ ಅಬ್ಬರಿಸಿ, ರೋಹಿಣಿ ಮಳೆಗೆ ದಾರಿ ಮಾಡಿಕೊಟ್ಟಿತು ಎನ್ನಲಾಗುತ್ತದೆ. ಇಂದಿನ ಮಳೆಯ ರಭಸಕ್ಕೆ ಜನರು ಹೊರಗೆ ಬರುವ ಸಾಹಸ ಮಾಡಿಲ್ಲ. ಮಳೆ ಜೋರಾಗುವುದುನ್ನು ಅರಿತ ಜನರು ಹೊರಗಡೆ ಹೆಚ್ಚಾಗಿ ಸಂಚರಿಸಲಿಲ್ಲ. ರಸ್ತೆಗಳ ಮೇಲೆ ಎಂದಿನಂತೆ ವಾಹನ ಸಂಚಾರ ಸಹ ಕಾಣಲಿಲ್ಲ.
ಈ ಜೋರು ಮಳೆಯಿಂದಾಗಿ ಹೆಚ್ಚು ಖುಷಿ ಪಟ್ಟ ಈ ಭಾಗದ ರೈತರು ಇನ್ನೂ ಮುಂದೆ ಕೃಷಿ ಚಟುವಟಿಕೆಗಳಿಗೆ ಅಣಿಯಾಗಲಿದ್ದಾರೆ. ಒಂದು ವಾರದ ಹಿಂದೆ ಹುಬ್ಬಳ್ಳಿಯಲ್ಲಿ ವ್ಯಾಪಕ ಮಳೆ ಆಗಿತ್ತು. ಆದರೆ ಇದು ಧಾರವಾಡದಲ್ಲಿ ಕಂಡು ಬರಲಿಲ್ಲ. ಇದೀಗ ಹುಬ್ಬಳ್ಳಿ ಧಾರವಾಡ ಎರಡು ನಗರಗಳಿಗೆ ಭರ್ಜರಿ ಮಳೆ ಆಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಜೋರು ಮಳೆ, ಕೆಲವೆಡೆ ಪರದಾಟ
ಧಾರವಾಡ ಹಾಗೂ ಸುತ್ತ ಮುತ್ತಲಿನ ಪ್ರದೇಶದಲ್ಲಿ ಗುರುವಾರ ಮಳೆಯಾರ್ಭಟದಿಂದಾಗಿ ಕೆಲವು ಕಡೆಗಳಲ್ಲಿ ಜನರು ಪರದಾಡಿದರು. ಕೆಲವೆಡೆ ಸಂಚಾರಕ್ಕೆ ಮಳೆ ಅಡ್ಡಿಯಾಯಿತು. ಸಿಟಿ ಬಸ್ ನಿಲ್ದಾಣದ (ಸಿಬಿಟಿ) ಬಳಿಯ ಆಲದ ಮರ ದೊಡ್ಡ ಟೊಂಗೆ ಮುರಿದು ಬಿದ್ದು ಲಗೇಜ್ ವ್ಯಾನ್, ಎರಡು ದ್ವಿಚಕ್ರ ವಾಹನಗಳಿಗೆ ಹಾನಿ ಆಗಿದೆ.
ಇನ್ನೂ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮತ್ತು ಅರಣ್ಯ ಸಿಬ್ಬಂದಿ ಮರದ ಟೊಂಗೆ ತೆರವು ಮಾಡಿದರು. ಸಂಜೆ ಪೂರ್ತಿ ಮಬ್ಬು ವಾತಾವರಣ, ಮೋಡ ಮುಸುಕಿದ ದೃಶ್ಯ ಕಂಡು ಬಂತು. ಸುಮಾರು 20 ನಿಮಿಷಕ್ಕೂ ಹೆಚ್ಚು ಸಮಯ ಭರ್ಜರಿ ಮಳೆ ಆಯಿತು. ಕೆಎಂಎಫ್ ಮುಂಭಾಗ (BRTS ಮಾರ್ಗ) ರಸ್ತೆಯಲ್ಲಿ ನೀರು ಆವರಿಸಿತ್ತು. ವಾಹನ ಸವಾರರು ಸಾಕಷ್ಟು ತೊಂದರೆ ಅನುಭವಿಸಿದರು.
ಮೇ 27ರವರೆಗೆ ಭಾರೀ ಮಳೆ
ಸದ್ಯ ಸುರಿಯುತ್ತಿರುವ ಮಳೆಯಂತೆ ಮುಂದಿನ ಮೂರು ದಿನ ಅಂದರೆ ಮೇ 27ರವರೆಗೆ ಇದೇ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳಕೊಲ್ಲಿ ಭಾಗದಲ್ಲಿ ಉಂಟಾಗಿರುವ ಚಂಡಮಾರುತ ಪರಿಚಲನೆ ಇಂದು ವಾಯುಭಾರ ಕುಸಿತವಾಗಿ ಬದಲಾಗಲಿದೆ. ಈ ಕಾರಣದಿಂದ ಇದು ಪೂರ್ವ ಮುಂಗಾರು ಚುರುಕುಗೊಳ್ಳಲು ಕಾರಣವಾಗಿದೆ. ಇದರ ಪ್ರಭಾವದಿಂದ ರಾಜ್ಯದ ವಿವಿಧೆಡೆ ಭಾರೀ ಮಳೆ ಆಗುತ್ತಿದೆ.












Click it and Unblock the Notifications