Dharwad Mango Fair: ಧಾರವಾಡ ಮೇಳದಲ್ಲಿದೆ ವಿಶ್ವದ ದುಬಾರಿ ಮಾವು: ಇದರ ಬೆಲೆ 2.7 ಲಕ್ಷ ರೂ.
ಧಾರವಾಡ, ಮೇ 14: ಧಾರವಾಡದಲ್ಲಿ ಇಂದಿನಿಂದ ಮೂರು ದಿನಗಳವರೆಗೆ (ಮೇ 14-16) ''ಮಾವು ಮಾರಾಟ ಪ್ರದರ್ಶನ ಮತ್ತು ಮಾರಾಟ ಮೇಳ (Dharwad Mango Fair) ಹಮ್ಮಿಕೊಳ್ಳಲಾಗಿದೆ. ಇಲ್ಲಿ ತರಹೇವಾರಿ ಮಾವಿನ ಹಣ್ಣುಗಳು ಪ್ರದರ್ಶನದಲ್ಲಿವೆ. ಈ ಪೈಕಿ ದೇಶದಲ್ಲೇ ಅಪರೂಪದ ಮಾವು ಮೇಳದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ.
ಹೌದು, ಈ ವರ್ಷ ಅಷ್ಟಾಗಿ ಮಳೆ ಬಾರದ ಕಾರಣ ಮಾವು ಬೆಳೆಯ ಇಳವರಿಯಲ್ಲಿ ಇಳಿಕೆ ಆಗಿದೆ. ಇದು ಬೆಳೆಗಾರರ ಆರ್ಥಿಕ ಹಿನ್ನಡೆಗೂ ಕಾರಣವಾಗಲಿದೆ. ಹೀಗಿದ್ದರೂ ಮೇಳಕ್ಕೆ ತರಹೇವಾರಿ ಮಾವುಗಳು ಆಗಮಿಸಿವೆ. ಈ ಪೈಕಿ ವಿಶ್ವದಲ್ಲೇ ಅತ್ಯಧಿಕ ದುಬಾರಿ ಮಾವು ಎನ್ನಲಾಗುವ 'ಮಿಯಾಝಾಕಿ' (Miyazaki Mango) ಮೇಳಕ್ಕೆ ಆಗಮಿಸಿದವರ ಗಮನ ಸೆಳೆಯುತ್ತಿದೆ.

ಮಿಯಾಝಾಕಿ ಕೆ.ಜಿಗೆ 2.7 ಲಕ್ಷ ರೂಪಾಯಿ
ಈ ಮಿಯಾಝಾಕಿ ಮಾವು ಒಂದು ಕೆ.ಜಿ.ಗೆ ಬರೋಬ್ಬರಿ 2.7 ಲಕ್ಷ ರೂಪಾಯಿ. ಕೆಂಪು ಬಣ್ಣದಲ್ಲಿ ಇರುವ ಇದು ದುಬಾರಿ ಬೆಲೆಯ ಮಾವಿನ ಪಟ್ಟಿಗೆ ಸೇರಿದೆ. ಮೇಳಕ್ಕೆ ಬಂದ ರೈತರು, ಸಾರ್ವಜನಿಕರು ಈ ಹಣ್ಣನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಧಾರವಾಡದಾದ್ಯಂತ 8 ಸಾವಿರ ಎಕರೆ ಮಾವು ಬೆಳೆಯನ್ನು ಬೆಳೆಯಲಾಗಿದೆ ಎಂದು ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಿರುವ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶಿನಾಥ ಬದ್ರಣ್ಣ ಅವರು ಮಾಹಿತಿ ನಿಡಿದರು.
ಜಿಲ್ಲೆಯ ವಿವಿಧ ಭಾಗದ ರೈತರು ಮಾವು ಮಾರಾಟ ಮೇಳದಲ್ಲಿ ಸುಮಾರು 30 ಮಳಿಗೆಗಳಿಗೆ ಅವಕಾಶ ನೀಡಲಾಗಿದೆ. ಇಲ್ಲಿ ಆರ್ಕಾ ಕೇಸರಿ, ಧಾರವಾಡ ರಸಪೂರಿ, ಖಾದರ್, ಕಲ್ಮಿ ಸೇರಿದಂತೆ ವಿವಿಧ ರೀತಿಯ ಮಾವಿನ ತಳಿಗಳನ್ನು ಮಾರಾಟ ಮಾಡಲಾಗುತ್ತಿದೆ. ಸುಮಾರು 52 ವಿವಿಧ ಮಾವಿನ ತಳಿಗಳು ಪ್ರದರ್ಶನಕ್ಕಿವೆ. ಮೂದಿನ ದಿನ ಮೇಳದಲ್ಲಿ ಒಟ್ಟು 20 ರಿಂದ 30 ಟನ್ ಮಾವು ಮಾರಾಟವಾಗುವ ನಿರೀಕ್ಷೆ ಇದೆ ಎಂದರು.

ಪ್ರತಿ ವರ್ಷ ಮಾವು ಮೇಳ ನಡೆಯಬೇಕು
ಜಿಲ್ಲೆಯ ಕೆಲಗೇರಿ ಗ್ರಾಮದ ಮಾವು ಬೆಳೆಗಾರ ಪ್ರಮೋದ್ ಗಾಂವ್ಕರ್ ಅವರು ಮಾವು ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿದರು. 2-3 ವರ್ಷಗಳಿಂದ ಮಾವು ಮೇಳವನ್ನು ಮಾಡಿಲ್ಲ ಆದರೆ ಈ ವರ್ಷ ಮಾವು ಮೇಳ ಆಯೋಜಿಸಿರುವುದರಿಂದ ಬಹಳಷ್ಟು ಖುಷಿಯಾಗಿದೆ. ಪ್ರತಿ ವರ್ಷ ಮೇಳವನ್ನು ಆಯೋಜನೆ ಮಾಡಬೇಕು ಎಂದರು.
ಮಾವಿನ ತಳಿಗಳಲ್ಲಿಯೇ ಅತೀ ದುಬಾರಿಯಾಗಿರುವ ಮೀಯಾಝಾಕಿ ಎಂಬ ಜಪಾನ್ ತಳಿಯನ್ನು ಬೆಳೆಯುತ್ತಿದ್ದಾರೆ. ಈ ಮಾವಿನ ಹಣ್ಣಿನ ಪ್ರತಿ ಕೆಜಿಗೆ ಸುಮಾರು 2.7ಲಕ್ಷ ರೂ.ಗಳು ಆಗಿದ್ದು, ಒಂದು ಹಣ್ಣನ್ನು 10 ಸಾವಿರ ರೂ.ಗಳಿಗೆ ಮಾರಾಟ ಮಾಡಲಾಗಿದೆ ಎಂದು ಅವರು ಹೇಳಿದರು.
7 ಸಾವಿರಕ್ಕೂ ಮಾವಿನ ಗಿಡ ಬೆಳೆಸಲಾಗುತ್ತಿದೆ
ಜಪಾನ್‌ನ ಈ ಮಿಯಾಝಾಕಿ ಮಾವು ತಳಿಯನ್ನು ಮಹಾರಾಷ್ಟ್ರದ ರತ್ನಗಿರಿಯಿಂದ ತರಲಾಗಿದೆ. ಸುಮಾರು 7 ಸಾವಿರಕ್ಕೂ ಹೆಚ್ಚು ಮಾವಿನ ಗಿಡಗಳನ್ನು ಬೆಳೆಸುತ್ತಿದ್ದು ಅದರಲ್ಲಿ ಈ ಮಿಯಾಝಾಕಿ ಸೇರಿದಂತೆ ವಿವಿಧ ಮಾವಿನ ತಳಿಗಳನ್ನು ಬೆಳೆಯುತಿದ್ದೇನೆ ಎಂದರು.
ಮತ್ತೊಬ್ಬ ಮಾವು ಬೆಳಗಾರರಾದ ರಾಮನಗೌಡ ಪಾಟೀಲ್ ಮಾತನಾಡಿ, ಸುಮಾರು ಹತ್ತು ವರ್ಷದಿಂದ ಈ ಮಾವು ಮೇಳದಲ್ಲಿ ಮಳಿಗೆ ಹಾಕುತ್ತಿದ್ದೇನೆ. ಕಲ್ಮಿ, ಅಪಸ್ ಹಾಗೂ ಸುಂದರ ಶಾಂತ ಮಾವಿನ ತಳಿಗಳನ್ನು ಮಾರಾಟಕ್ಕೆ ತಂದಿದ್ದೇನೆ. 3-4 ವರ್ಷಗಳಿಂದ ಇಳುವರಿ ಕಡಿಮೆಯಾಗಿದೆ. ಈ ಬಾರಿ 1.5 ಟನ್ ಮಾರಾಟ ಮಾಡುವ ನೀರೀಕ್ಷೆಯನ್ನು ಇಟ್ಟುಕೊಂಡು ಮಾವು ಮಾರಾಟ ಮೇಳದಲ್ಲಿ ಮಳಿಗೆಯನ್ನು ಹಾಕಿದ್ದೇನೆ ಎಂದು ಹೇಳಿದರು.
ಇಂದು ಬುಧವಾರ ಧಾರವಾಡದ ಮಾವುದ ಎರಡನೇ ದಿನವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ರಸಪರಿ, ತೋತಾಪುರಿ, ಮಲ್ಲಿಕಾ ಸೇರಿದಂತೆ ಹಲವು ಬಗೆಯ ಮಾವುಗಳನ್ನು ಸವಿಯುತ್ತಿದ್ದಾರೆ. ಮನೆಗೆ ಖರೀದಿ ಮಾಡಿ ಒಯ್ಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.












Click it and Unblock the Notifications