ಧಾರವಾಡ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕವಿವಿದಿಂದ ರಾಜ್ಯಮಟ್ಟದ 'ಅರಿವೇ ಗುರು' ಪ್ರಶಸ್ತಿ: ಇಲ್ಲಿದೆ ಸಾಧಕರ ಮಾಹಿತಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಧಾರವಾಡ, ಅಕ್ಟೋಬರ್‌ 29 : ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯ ಕಲೆ, ಸಾಹಿತ್ಯ, ಸಂಗೀತ, ಶಿಕ್ಷಣದಲ್ಲಿ ತನ್ನದೇ ಆದ ಕೀರ್ತಿ ಗಳಿಸಿ, ಐತಿಹಾಸಿಕ ಪರಂಪರೆಯನ್ನು ಹೊಂದಿದೆ. ವಿಶ್ವವಿದ್ಯಾಲಯ ವತಿಯಿಂದ ಕಲೆ, ವಿಜ್ಞಾನ ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಮೂರು ಗಣ್ಯ ಸಾಧಕರಿಗೆ ಪ್ರಥಮ ಬಾರಿಗೆ ರಾಜ್ಯಮಟ್ಟದ ಅರವೇ ಗುರು ಪ್ರಶಸ್ತಿಯನ್ನು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನ ಮಾಡಲಾಗುವುದು ಎಂದು ಕವಿವಿ ಕುಲಪತಿ ಪ್ರೊ.ಕೆ.ಬಿ.ಗುಡಸಿ ಅವರು ತಿಳಿಸಿದರು.

ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆ ಆದಾಗಿನಿಂದಲೂ ಕನ್ನಡ ಅಧ್ಯಯನ ಪೀಠದ ಮೂಲಕ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸುತ್ತಿದೆ. ಪ್ರಸಕ್ತ ಸಾಲಿನಿಂದ ವಿಶ್ವವಿದ್ಯಾಲಯವು ವಿವಿಧ ಕ್ಷೇತ್ರ ತಜ್ಞರ ಜಂಟಿ ಶೋಧನಾ ಸಮಿತಿ ರಚಿಸಿ ಗಣ್ಯ ಸಾಧಕರನ್ನು ಗುರುತಿಸಿದೆ. ವಿಶ್ವವಿದ್ಯಾಲಯದ ಈ ನಡೆ‌ ಸಾಹಿತ್ಯ ಸ್ನೇಹಿ ಆಗಿದ್ದು, ಕವಿವಿ ಲಾಂಚನದಲ್ಲಿರುವ ಘೋಷ ವಾಕ್ಯ 'ಅರಿವೇ ಗುರು' ಹೆಸರಿನಡಿ ರಾಜ್ಯ ಮಟ್ಟದ ಪ್ರಶಸ್ತಿಯನ್ನು ನೀಡಲಾಗುತ್ತದೆ ಎಂದು ಕುಲಪತಿಗಳು ಹೇಳಿದರು.

ಧಾರವಾಡ: ಎಫ್‌ಎಮ್‌ಸಿಜಿ ಕ್ಲಸ್ಟರ್‌ಗೆ ಚಾಲನೆ: 17 ಕಂಪನಿಗಳಿಂದ 1,275 ಕೋಟಿ ರೂ ಬಂಡವಾಳ ಹೂಡಿಕೆಧಾರವಾಡ: ಎಫ್‌ಎಮ್‌ಸಿಜಿ ಕ್ಲಸ್ಟರ್‌ಗೆ ಚಾಲನೆ: 17 ಕಂಪನಿಗಳಿಂದ 1,275 ಕೋಟಿ ರೂ ಬಂಡವಾಳ ಹೂಡಿಕೆ

ಕವಿವಿಯಿಂದ ಹೊಸ ಸಂಪ್ರದಾಯಕ್ಕೆ ನಾಂದಿ

ಕವಿವಿಯಿಂದ ಹೊಸ ಸಂಪ್ರದಾಯಕ್ಕೆ ನಾಂದಿ

ಸಾಹಿತ್ಯ ಕ್ಷೇತ್ರದಲ್ಲಿ ಬಾಗಲಕೋಟ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿ ಗ್ರಾಮದ ಶ್ರೀ ನಿರುಪಾಧೀಶ ಸ್ವಾಮೀಜಿ, ವಿಜ್ಞಾನ ಕ್ಷೇತ್ರದಲ್ಲಿ ಡಾ.ಗೌತಮ ದೇಸಿರಾಜು ಮತ್ತು ಸಾಮಾಜಿಕ ವಿಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ದ ಮನೋಶಾಸ್ತ್ರಜ್ಞ ಡಾ.ಸಿ.ಆರ್.ಚಂದ್ರಶೇಖರ ಅವರಿಗೆ

ಕವಿವಿಯಿಂದ ಪ್ರಥಮ ಬಾರಿಗೆ ಈ ಅರಿವೇ ಗುರು ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯು ತಲಾ ರೂ.25 ಸಾವಿರ ನಗದು, ಪ್ರಶಸ್ತಿ ಫಲಕ, ಸ್ಮರಣಿಕೆ ಒಳಗೊಂಡಿದೆ ಎಂದು ಕುಲಪತಿಗಳು ವಿವರಿಸಿದರು.

ಪ್ರಶಸ್ತಿಯನ್ನು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿರುವ ಡಾ.ಚಂದ್ರಶೇಖರ ಕಂಬಾರ ಅವರು ಕವಿವಿಯ ಸುವರ್ಣಮಹೋತ್ಸವ ಸಭಾಂಗಣದಲ್ಲಿ ನವೆಂಬರ್ 1 ರ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡುವರು ಎಂದು ಕುಲಪತಿಗಳು ತಿಳಿಸಿದರು.

ಶ್ರೀ ನಿರುಪಾಧೀಶ ಸ್ವಾಮೀಜಿ ಅರಿವೇ ಗುರು ಪ್ರಶಸ್ತಿ

ಶ್ರೀ ನಿರುಪಾಧೀಶ ಸ್ವಾಮೀಜಿ ಅರಿವೇ ಗುರು ಪ್ರಶಸ್ತಿ

ಶ್ರೀ ನಿರುಪಾಧೀಶ ಸ್ವಾಮೀಜಿ, ಮರೇಗುದ್ದಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಮರೆಗುದ್ದಿಯಂತಹ ಒಂದು ಗ್ರಾಮೀಣ ಪರಿಸರದಲ್ಲಿ ವಾಸವಾಗಿರುವ ಶ್ರೀ ನಿರುಪಾಧೀಶರು ಬಹುಭಾಷಾ ವಿಷಾರದರು. ಆಶು ಕವಿಗಳಾಗಿ ವಚನ ತ್ರಿಪದಿ, ಷಟ್ಪದಿ, ಚೌಪದಿ, ರಗಳೆ ಮೊದಲಾದ ಛಂದೋರೂಪಗಳಲ್ಲಿ ಹಲವಾರು ಕೃತಿಗಳನ್ನು ರಚಿಸಿದವರು. ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಕನ್ನಡ ಛಂದೋರೂಪಗಳಲ್ಲಿ ಮಹಾಕಾವ್ಯಗಳನ್ನು ರಚಿಸುವ ಒಂದು ಪರಂಪರೆಯೇ ಮುಗ್ಗರಿಸಿತು ಎನ್ನುವ ಸಂದರ್ಭದಲ್ಲಿ ಷಟ್ಪದಿ, ತ್ರಿಪದಿ, ಚೌಪದಿ ಛಂದಸ್ಸಿನಲ್ಲಿ ಮಹಾಕಾವ್ಯಗಳನ್ನು ರಚಿಸಿದ ಕರ್ನಾಟಕದ ಗ್ರಾಮೀಣ ವಲಯದ ಏಕೈಕ ಮಹಾಕವಿ ಶ್ರೀ ನಿರುಪಾಧೀಶರು.

ನಿರುಪಾಧೀಶರು ಓದಿದ್ದು ಕೇವಲ ಹತ್ತನೇ ತರಗತಿ. ಆದರೆ ಲೀಲಾಜಾಲವಾಗಿ ಪಟ್ಟದಿ ರೂಪದಲ್ಲಿ ಮಹಾಕಾವ್ಯಗಳನ್ನು ರಚಿಸುವುದನ್ನು ನೋಡಿದರೆ, 'ವಾಗ್ದೇವಿಯ ಶಬ್ಧ ಭಂಡಾರದ ಬೀಗ ಮುದ್ರೆಯನ್ನೊಡೆದ' ಕವಿ ರನ್ನನನ್ನು ಬಿಟ್ಟರೆ ಮತ್ತೊಬ್ಬ ಕವಿ ನಿರುಪಾಧೀಶರೇ.

ಶ್ರೀ ನಿರುಪಾಧೀಶ ಸ್ವಾಮೀಜಿ ರಚಿಸಿದ ಮಹಾಕಾವ್ಯಗಳು

ಷಟ್ಪದಿ ಮಹಾಕಾವ್ಯಗಳು (20), ತ್ರಿಪದಿ ಕಾವ್ಯಗಳು (08), ಚೌಪದಿ ಕಾವ್ಯಗಳು (03), ವಚನ ಸಂಕಲನಗಳು 13, ಐದು ಸಾವಿರ ಆಧುನಿಕ ವಚನಗಳ ಸಂಪುಟ 'ಉಲುಹಿನ ವೃಕ್ಷದ ನೆರಳು' ಮತ್ತು 'ಅನುಭಾವದ ಅರಳು' ಕೃತಿ, ಗದ್ಯ ಗ್ರಂಥಗಳು (04), ಸಂಪಾದನೆ 01, ಹಿಂದಿ ಗ್ರಂಥಗಳು (04) ಮತ್ತು ನಿರುಪಾಧೀಶರ ಸಾಹಿತ್ಯ ಕುರಿತು ಹೊರಬಂದ ಗ್ರಂಥಗಳು (15).

ಶ್ರೀ ನಿರುಪಾಧೀಶ ಸ್ವಾಮೀಜಿ ಸಮಾಜ ಸೇವೆ

ಜಮಖಂಡಿ, ಮುಧೋಳ, ಬೀಳಗಿ ತಾಲೂಕುಗಳ ಅನೇಕ ಹಳ್ಳಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಜನಸಮುದಾಯದಲ್ಲಿ ಆತ್ಮಗೌರವ, ಸ್ವಾಭಿಮಾನ ಮೂಡಿಸಿ ಸಮಾನತೆಗೆ ಶ್ರಮಿಸಿದವರು. ಪ್ರಾಣಿಬಲಿ ನಿಷೇಧಿಸುವಂತೆ ಪ್ರವಚನ ನೀಡಿ ಕಾರ್ಯರೂಪಕ್ಕೆ ತಂದು ಅಹಿಂಸಾ ಧರ್ಮವನ್ನು ಮೆರೆದವರು.

ಅಂತರ್ಜಾತಿ ವಿವಾಹ ಪ್ರೊತ್ಸಾಹಿಸಿದವರು. ತಮ್ಮ ಹಳ್ಳಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಡ ವಿದ್ಯಾರ್ಥಿಗಳಿಗಾಗಿ ಉಚಿತ ಪ್ರಸಾದ ನಿಲಯ ಪ್ರಾರಂಭಿಸಿ ಬಡ ಮಕ್ಕಳ ಶಿಕ್ಷಣಕ್ಕೆ ಪ್ರೊತ್ಸಾಹಿಸಿದವರು. ರೈತರಿಗೆ ಉಚಿತವಾಗಿ ಬೀಜ ಹಂಚುವ ಕಾರ್ಯವನ್ನು ಮಾಡುವ ಮೂಲಕ ರೈತರಲ್ಲಿ ಸ್ವಾಭಿಮಾನ ಮತ್ತು ಆತ್ಮಸ್ಥೈರ್ಯವನ್ನು ತುಂಬಿದವರು ಕೂಡಾ ಆಗಿದ್ದಾರೆ ಅಲ್ಲದೆ ಮೂಢನಂಬಿಕೆಗಳ ವಿರೋಧಿಗಳು, ವೈಚಾರಿಕ ಮತ್ತು ವೈಜ್ಞಾನಿಕ ಚಿಂತನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.ಇವರ ಸಾಹಿತ್ಯ ಬದುಕು-ಬರಹ ಕುರಿತು ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಪಿಎಚ್.ಡಿ. ಸಂಶೋಧನ ಅಧ್ಯಯನಗಳಾಗಿರುವುದು ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ ದ್ಯೋತಕವಾಗಿದೆ.

ಡಾ.ಗೌತಮ ದೇಸಿರಾಜು ಅವರಿಗೆ ಅರಿವೇ ಗುರು ಪ್ರಶಸ್ತಿ

ಡಾ.ಗೌತಮ ದೇಸಿರಾಜು ಅವರಿಗೆ ಅರಿವೇ ಗುರು ಪ್ರಶಸ್ತಿ

ಪ್ರೊ. ಗೌತಮ ರಾಧಾಕೃಷ್ಣ ದೇಸಿರಾಜು ಅವರು ಭಾರತದ ಪ್ರಖ್ಯಾತ ರಸಾಯನಶಾಸ್ತ್ರಜ್ಞರು. ಸ್ಪಟಿಕಗಳ ಎಂಜನಿಯರಿಂಗ್ ಮತ್ತು ದುರ್ಬಲ ಹೈಡ್ರೋಜನ್ ಬಂಧಗಳ ಕುರಿತ ಸಂಶೋಧನೆಯ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದವರಾಗಿದ್ದಾರೆ.

1952ರ ಅಗಸ್ಟ್ 21ರಂದು ಭಾರತದ ಮದ್ರಾಸನಲ್ಲಿ (ಇಂದಿನ ಚೆನೈ) ಜನಿಸಿದ ಪ್ರೊ. ದೇಶಿರಾಜುರವರು ಮುಂಬೈನ ಪ್ರತಿಷ್ಠಿತ ಸೆಂಟ್ ಜೀವಿಯರ್ ಕಾಲೇಜಿನಿಂದ ತಮ್ಮ ಬಿ.ಎಸ್.ಸಿ. (1972) ಹಾಗೂ ಅಮೇರಿಕಾದ ಪ್ರತಿಷ್ಠಿತ ಇಲಿನಾಮ್ಸ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ (1976) ಪದವಿಯನ್ನು ಪಡೆದುಕೊಂಡರು. ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (IISc)ಯಲ್ಲಿ ಕೆಲಕಾಲ ರಿಸಚ್ ಫೆಲೋ (1978) ಆಗಿ ನಂತರ ಪ್ರತಿಷ್ಠಿತ ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ ರಸಾಯನಶಾಸ್ತ್ರ ಉಪನ್ಯಾಸಕರಾಗಿ (1979), ಪ್ರವಾಚಕರಾಗಿ (1984) ಹಾಗೂ ಪ್ರಾಧ್ಯಾಪಕರಾಗಿ (1990) ಸೇವೆ ಸಲ್ಲಿಸಿರುವರು.

ಇವರ ಸರ್ವ ಶ್ರೇಷ್ಠ ಸಂಶೋಧಣೆಯ ಕಾರಣವಾಗಿ ಭಾರತೀಯ ವಿಜ್ಞಾನ ಸಂಸ್ಥೆಯು ಇವರನ್ನು ಪ್ರಾಧ್ಯಾಪಕರಾಗಿ (2009)ರಲ್ಲಿ ನೇಮಿಸಿಕೊಂಡಿತು. ಪ್ರೊ. ದೇಸಿರಾಜುರವರು ಸುಪ್ರಾಮಾಲಿಕ್ಯುಲರ್ ಸಿಂಥಾನ್ ಪರಿಕಲ್ಪನೆಯ ಸ್ಪಟಿಕ ಶಾಸ್ತ್ರ ಇಂಜಿನಿಯರಿಂಗ್ ಹಾಗೂ ಔಷಧೀಯ ಸಹ ಸ್ಪಟಿಕಗಳ ರಚನೆಯ ಅಧ್ಯಯನದಲ್ಲಿ ತಳಹದಿ ಆಗಿವೆ. ಇವರ ಇನ್ನೊಂದು ಮಹತ್ವದ ಸಂಶೋಧನಾ ಕೊಡುಗೆಯು ದುರ್ಬಲ ಹೈಡ್ರೋಜನ್ ಬಂಧಗಳನ್ನು ಕುರಿತಾಗಿದ್ದು, ಅ-ಊ ಗ್ರುಫ್ ಕೂಡ ಡೋನರ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ನಿರೂಪಿಸಿದವರಾಗಿದ್ದಾರೆ. ಸುಮಾರು 470ಕ್ಕಿಂತಲೂ ಮೌಲಿಕವಾದ ಸಂಶೋಧನಾ ಪ್ರಬಂಧಗಳನ್ನು ರಚಿಸಿರುವ ದೇಸಿರಾಜುರವರು, ಕ್ರಿಸ್ಟಲ್ ಎಂಜನಿಯರಿಂಗ್‍ನಲ್ಲಿ ಅನೇಕ ಗ್ರಂಥಗಳನ್ನು ರಚಿಸಿ, ಸಂಶೋಧನೆಗೆ ಸಂಬಂಧಿಸಿದ ಕೆಲವು ಪುಸ್ತಕಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಜುಲೈ 2022ರಲ್ಲಿ ಪ್ರೊ. ದೇಸಿರಾಜರವರು h-ಮೌಲ್ಯಾಂಕವು 101 ಆಗಿದ್ದು, ಇವರು ಇಡೀ ಭಾರತದಲ್ಲಿ ಅತ್ಯಂತ ಹೆಚ್ಚು ಬಾರಿ ಸಂಶೋಧನಾ ಲೇಖನಗಳ ಉಲ್ಲೇಖಗಳನ್ನು ಹೊಂದಿದವರಾಗಿದ್ದಾರೆ. ಜಗತ್ತಿನ ಪ್ರಸಿದ್ಧ ರಸಾಯನಶಾಸ್ತ್ರ ಸಂಶೋಧನೆಯ ನಿಯತಕಾಲಿಕೆಗಳಾದ ಜರ್ನಲ್ ಆರ್ಫ ಅಮೇರಿಕನ್ ಕೆಮಿಕಲ್ ಸೊಸೈಟಿ, ಕೆಮಿಕಲ್ ಕಮ್ಯುನಿಕೇಶನ್ಸ್, ಆ್ಯಂಜೆವಾಂತೆ ಶೆಮಿ ಇವುಗಳ ಸಂಪಾದನಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರ ಸಂಶೋಧನಾ ಕಾರ್ಯದ ಫಲವಾಗಿ ಅಲೇಗ್ಸಾಂಡರ್ ವಾನ್ ಹಂಬೋಲ್ಟ್, ಫೂರಶೂಂಗಸ್ವೈನ್ (2000), ಭೋಲೊಗ್ನಾ ವಿಶ್ವವಿದ್ಯಾಲಯದ Isro-ವಿಜ್ಞಾನ ಪದಕ (2018), ವಾಂಡರ್‍ವಾಲ್ಸ್ ಪ್ರಶಸ್ತಿ (2013), ಥರೈವಲ್ರ್ಡ್ ಅಕ್ಯಾಡೆಮಿ ಆಫ್ ಸೈನ್ಸ್‌ ಪ್ರಶಸ್ತಿ (2000) ಮುಂತಾದ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. "ಅಂತಾರಾಷ್ಟ್ರೀಯ ಸ್ಪಟಿಕಶಾಸ್ತ್ರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಪ್ರೊ. ದೇಸಿರಾಜು ಅವರು "ಭಾರತ-ಇಂಡಿಯಾ - 2020' ಎಂಬ ಸಂವಿಧಾನಿಕ ಆಡಳಿತ ಅಂಶಗಳನ್ನು ಕುರಿತ ಅವರ ಮೌಲಿಕ ಪುಸ್ತಕ ರಚಿಸಿದ್ದಾರೆ.

ಡಾ ಸಿ.ಆರ್. ಚಂದ್ರಶೇಖರ ಅವರಿಗೆ ಅರಿವೇ ಗುರು ಪ್ರಶಸ್ತಿ

ಡಾ ಸಿ.ಆರ್. ಚಂದ್ರಶೇಖರ ಅವರಿಗೆ ಅರಿವೇ ಗುರು ಪ್ರಶಸ್ತಿ

ಡಾ. ಸಿ.ಆರ್. ಚಂದ್ರಶೇಖರ, ಅವರು ಕರ್ನಾಟಕ ಮಾತ್ರವಲ್ಲದೆ ಭಾರತದಲ್ಲಿಯ ಅಪರೂಪದ ಮನೋವೈದ್ಯರಾಗಿದ್ದಾರೆ. ಬೆಂಗಳೂರಿನ ನಿಮ್ಹಾನ್ಸದಲ್ಲಿ ಮೂವತ್ತು ವರ್ಷಗಳ ಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಇವರು ಬೆಂಗಳೂರಿನಲ್ಲಿ ಸಮಾಧಾನ ಆಪ್ತ ಸಲಹಾ ಕೇಂದ್ರದ ಮೂಲಕ ಲಕ್ಷಾಂತರ ಜನ ಮನೋರೋಗಿಗಳಿಗೆ ಚಿಕಿತ್ಸೆ ನೀಡಿ ಗುಣಮುಖರನ್ನಾಗಿ ಮಾಡಿದವರು.

2013ರಲ್ಲಿ ಅಧ್ಯಾಪಕ ವೃತ್ತಿಯಿಂದ ನಿವೃತ್ತರಾದ ಇವರು ದಿನಪತ್ರಿಕೆಗಳಿಗೆ ಸಾವಿರಕ್ಕೂ ಹೆಚ್ಚು ಲೇಖನಗಳನ್ನು ಬರೆದವರು. ವೈದ್ಯಕೀಯ ವಿಷಯ ಕುರಿತಂತೆ ಕನ್ನಡ ಭಾಷೆಯಲ್ಲಿ 250 ಮತ್ತು ಇಂಗ್ಲೀಷ್ ಭಾಷೆಯಲ್ಲಿ 40 ಪುಸ್ತಕಗಳನ್ನು ಪ್ರಕಟಿಸಿದ ಅಪರೂಪದ ವೈದ್ಯರು. ಇವರು ಟೆಲಿವಿಷನ್ ಮತ್ತು ರೇಡಿಯೋ ಸೇರಿದಂತೆ ವಿವಿಧ ಸಮೂಹ ಮಾಧ್ಯಮಗಳಲ್ಲಿ ಹಲವಾರು ಚರ್ಚಾ ಕಾರ್ಯಕ್ರಮ ಹಾಗೂ ಸಂದರ್ಶಗಳ ಮೂಲಕ ನಾಡಿನ ಜನತೆಗೆ ವೈದ್ಯಕೀಯ ಅರಿವು ಮೂಡಿಸುವುದರಲ್ಲಿ ಮುಂಚೂಣಿಯಲ್ಲಿದ್ದವರು.

ಸಮಾಧಾನ ಆಪ್ತ ಸಲಹಾ ಕೇಂದ್ರದ ಮೂಲಕ ಜನರಿಗೆ ಸಲಹೆ ಹಾಗೂ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. 5000ಕ್ಕೂ ಹೆಚ್ಚು ಜನರಿಗೆ ಆಪ್ತ ಸಮಾಲೋಚಕರಾಗಲು ತರಬೇತಿ ಕೂಡ ನೀಡಿದ್ದಾರೆ. ಇವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಮಹಾತ್ಮಾಗಾಂಧೀ ಸೇವಾ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಮನೋವೈದ್ಯ/ ದಕ್ಷಿಣ ಭಾರತ ಮನೋವೈದ್ಯ ಸಂಘಗಳಿಂದ ಪ್ರಶಸ್ತಿ, ಡಾ. ಬಿ.ಸಿ.ರಾಯ್ ಪ್ರಶಸ್ತಿ, ವಿಶ್ವವಿದ್ಯಾಲಯ ಧನ ಆಯೋಗದ ಪ್ರಶಸ್ತಿ, ಡಾ. ಶಿವರಾಮ ಕಾರಂತ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ಡಾ. ನಿರುಪಮಾ ನಿರಂಜನ ಪ್ರಶಸ್ತಿ, ಜೀವಮಾನ ಸಾಧನೆಗಾಗಿ ಕನ್ನಡ ವೈದ್ಯ ಸಾಹಿತ್ಯ ಪರಿಷತ್‍ನ ಸನ್ಮಾನ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಜೀವಮಾನದ ಸಾಧನೆ ಪ್ರಶಸ್ತಿ ಹಾಗೂ ಟೈಮ್ಸ್ ಆಫ್ ಇಂಡಿಯಾ ಹೆಲ್ತ್ ಎಕ್ಸಲೆನ್ಸ್ ಪ್ರಶಸ್ತಿ ಸೇರಿದಂತೆ ನಾಡಿನ ಗೌರವಕ್ಕೆ ಪಾತ್ರರಾದ ಖ್ಯಾತ ವೈದ್ಯರಾಗಿದ್ದಾರೆ.

'ಅರಿವೇ ಗುರು’ ಪ್ರಶಸ್ತಿಯ ಮಹತ್ವ

'ಅರಿವೇ ಗುರು’ ಪ್ರಶಸ್ತಿಯ ಮಹತ್ವ

'ಅರಿವೇ ಗುರು' ಎನ್ನುವ ಪದದೊಳಗೆ ಅರಿವು ಮತ್ತು ಗುರು ಎರಡೂ ಬೆಸೆದುಕೊಂಡಿವೆ. ಇದೊಂದು ಬಗೆಯ ಸಮತೆಯ ಪದ. ಎಷ್ಟೋ ಬಾರಿ ನಮಗೆ ಅರಿವು ಇರುತ್ತದೆ. ಆದರೆ ನಿಜದ ಗುರುವಾಗುವಲ್ಲಿ ಸೋತಿರುತ್ತೇವೆ. ಗುರುವಾಗಿದ್ದರೂ ಅರಿವಿನ ಅನುಭವವಿಲ್ಲದೆ ಜೀವನ ಸವೆಸಿರುತ್ತೇವೆ. ಆದರೆ ಅರಿವು ಮತ್ತು ಗುರು ಆಗುವ ಸಂದರ್ಭಗಳು ಮಾತ್ರ ಕೆಲವರಿಗೆ ಒದಗಿ ಬರುತ್ತದೆ. ಇವರನ್ನೇ ನಾವು ಲೋಕದ ಉಪಾಸಕರು ಎನ್ನುವುದು. ನಾವು ನಡೆಯುವ ಮಾರ್ಗ, ನುಡಿಯುವ ಭಾಷೆ ಮತ್ತು ಬದುಕುವ ಪರಿಸರ ಎಲ್ಲವೂ ಸಾಪೇಕ್ಷವಾಗಿದ್ದಾಗ ಅರಿವಿನ ಗುರು ಎಂದರೆ, ನಮ್ಮ ವ್ಯಕ್ತಿತ್ವದ ದಾರಿಯನ್ನು ಹಸನಾಗಿಟ್ಟಿರಲು ಸಾಧ್ಯ. ಇಂಥಹ 'ಅರಿವೇ ಗುರು' ಎಂಬ ಮಾರ್ಗದಲ್ಲಿ ನಡೆದವರು.

ತಮ್ಮ ತಮ್ಮ ವೃತ್ತಿ ಕಾಯಕದಿಂದ ಮತ್ತು ತಾವು ಬದುಕಿದ ಕ್ರಮದಿಂದ ಜೀವನ ಸೋಪೋಜ್ಞಗೊಳಿಸಿಕೊಂಡವರು ನಮ್ಮ ಪರಿಸರದಲ್ಲಿಯೇ ಕಾಣಸಿಗುತ್ತಾರೆ. 'ಅರಿವೇ ಗುರು' ಎನ್ನುವ ಮಾತು ಲೋಕಜ್ಞಾನದ ಬೆಳಕಿನೆಡೆಗೆ ನಾವು-ನೀವೆಲ್ಲ ಸಾಗಬೇಕೆಂಬ ಅನುಭವ ಜನ್ಯ ಅಂತರಂಗದ ನಿಲುವನ್ನೇ ಈ ಪದದ ಅರ್ಥ ಹೊಮ್ಮಿಸಿ ನಿಂತಿದೆ. 'ಅರಿವೇ ಗುರು' ಪ್ರಶಸ್ತಿ ಜ್ಞಾನಕ್ಕೆ, ಅನುಭವದ ತಿಳಿವಿಗೆ, ಭೇದವಿರದ ಲೋಕಜ್ಞಾನ. ಇಲ್ಲಿ ಕಲೆ ಸಾಹಿತ್ಯ ಸಂಗೀತ, ವಿಜ್ಞಾನ,ಸಮಾಜ ವಿಜ್ಞಾನ ಯವುದೇ ಮಾನವಿಕ ಕ್ಷೇತ್ರಗಳಿದ್ದರೂ ಅವು ಜೈವಿಕವಾಗಿ ಒಂದೇ ಆಗಿವೆ. ಇಂತಹ ಸಹಮತ, ಸಹಬಾಳ್ವೆಯ ವಿಶಿಷ್ಟ ಪದದ ಚೆಲುವು ಈ ಅರಿವೇ ಗುರು.

ಇಂತಹ ತಾತ್ವಿಕ ಅನುಭವದ ನಿಲುವನ್ನುಹೊಂದಿರುವ 'ಅರಿವೇ ಗುರು' ಎಂಬ ಪದದ ಶ್ರೀಮಂತಿಕೆಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಈ ಹೆಸರಿನ ಗೌರವ ಪ್ರಶಸ್ತಿಯನ್ನು ಸಾಧಕರುಗಳಿಗೆ ಪ್ರತಿ ವರ್ಷ ನವೆಂಬರ 1 ರಂದು ನೀಡುವ ಮೂಲಕ ನಾಡಿಗೆ, ಈ ದೇಶಕ್ಕೆ ತನ್ನನ್ನು ತಾನು ಅರ್ಪಿಸಿಕೊಳ್ಳುತ್ತಿದೆ.

English summary
Dharwad Karnatak university presenting Arive Guru award to three achievers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X